ಕುರಿಗಾಹಿ ಮತ್ತು ಖರೀದಿದಾರರಿಗೆ ಸೇತು ಬಂಧುವಾದ 'ಮೊಬೈಲ್ ಆ್ಯಪ್'

ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಕುರಿಗಾಹಿಗಳು, ರೈತರು ಪ್ಲೇ ಸ್ಟೋರ್‌ನಲ್ಲಿ Neml live stock ಎಂಬ ಮೊಬೈಲ್ ಅಪ್ಲಿಕೇಶನ್‌ ಅನ್ನು ಬಳಸಿಕೊಂಡು ವ್ಯಾಪಾರ ಮಾಡಬಹುದು. ಅದು ಯಾವ ರೀತಿ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ಒಂದು ಕಡೆಯಿಂದ, ಮತ್ತೊಂದು ಕಡೆಗೆ ವಲಸೆ ಹೋಗಿ ಕುರಿ, ಮೇಕೆಗಳನ್ನು ಮೇಯಿಸಿ, ಮಾರಾಟ ಮಾಡಿ ಬದುಕು ಹೊರೆಯುವ ಕುರಿಗಾಹಿಗಳಿಗಾಗಿ, ದಲ್ಲಾಳಿಗಳ ಮಧ್ಯೆ ಸಿಲುಕಿ ಮಾಲಿಗೆ ಸೂಕ್ತ ಬೆಲೆ ಸಿಗದೆ ಪರಿತಪಿಸುವ ರೈತರಿಗೆ ಸಹಕಾರಿಯಾಗಲೆಂದು ಎನ್‌ಸಿಡಿಇಎಕ್ಸ್‌ ಇ-ಮಾರ್ಕೆಟ್ಸ್‌ ಲಿಮಿಟೆಡ್‌ (ಎನ್‌ಇಎಂಎಲ್‌) ಆ್ಯಪ್ ಮೂಲಕ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನವು ಕರ್ನಾಟಕದಲ್ಲಿ ನಡೆದಿದ್ದು, ಮೃಗಾಂಕ್‌ ಪರಾಚ್ಫೆ ಅವರು ಈ ಸಂಸ್ಥೆಯ ಮಾಲೀಕರಾಗಿದ್ದಾರೆ. ಬೆಂಗಳೂರಿನ ಬಾನಸವಾಡಿಯಲ್ಲಿ ಕೇಂದ್ರ ಕಚೇರಿಯಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸಂಸ್ಥೆಯ ಸದಸ್ಯರಿದ್ದಾರೆ.

Eedina App

ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಎನ್‌ಸಿಡಿಇಎಕ್ಸ್‌ ಇ-ಮಾರ್ಕೆಟ್ಸ್‌ ಲಿಮಿಟೆಡ್‌ ಒಪ್ಪಂದ ಮಾಡಿಕೊಂಡು ಈ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಿದೆ. ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಬೆಳಗಾವಿ ಹಾಗೂ ಗದಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ತುಮಕೂರು, ಮಧುಗಿರಿ, ಕೊಡುಗೆನಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನಾಗಾರೆಡ್ಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಆ್ಯಪ್ ಮೂಲಕ ಪಡೆದುಕೊಂಡ ಪ್ರಯೋಜನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

AV Eye Hospital ad

"ನಮ್ಮ ತಾತನ ಕಾಲದಿಂದಲೂ ನಾವು ಕುರಿ ಸಾಕಾಣಿಕೆ ಮಾಡಿಕೊಂಡು ಬಂದಿದ್ದೇವೆ. ಐದನೇ ತರಗತಿ ಓದಿರುವ ನನಗೆ ಚಿಕ್ಕಂದಿನಿಂದಲೂ ಗುಣಮಟ್ಟದ ಕುರಿ ಸಾಕಾಣಿಕೆ ಮಾಡಿ ನಮ್ಮದೇ ಸೊಸೈಟಿಯಲ್ಲಿ ಅಧ್ಯಕ್ಷನಾಗುವ ಆಸೆ ಇತ್ತು. ಅದರಂತೆ ಮೈಲಾರಲಿಂಗೇಶ್ವರ ಉಣ್ಣೆ ಉತ್ಪಾದಕರ ಸಂಘಕ್ಕೆ ಅಧ್ಯಕ್ಷನಾದೆ. ಹಾಗಾಗಿ ದೇವ ನಾಯಕ್‌ ಅವರ ಪರಿಚಯವಾಗಿ ಆ್ಯಪ್ ಮೂಲಕ ನಮ್ಮ ಕುರಿ, ಮೇಕೆಗಳನ್ನು ಮಾರಾಟ ಮಾಡುವ ವಿಧಾನ ತಿಳಿದುಕೊಂಡೆವು. ನಾನು ಇದುವರೆಗೂ ಹಲವು ಬಾರಿ ಕುರಿ ಮಾರಾಟ ಮಾಡಿರುವೆ" ಎಂದವರು ತಿಳಿಸಿದರು.

"ಡಿಟೈಲ್‌ ಮೇಕೆ ಅಂತ ತಂದಿದ್ದೀನಿ, ಅವುಗಳಲ್ಲಿ ಎಮ್ಮೆ ಹಾಲಿನಂತೆ 3 ಲೀಟರ್‌ ಹಾಲು ಸಿಗುತ್ತದೆ. ಈ ಕುರಿ, ಮೇಕೆಗಳ ಹಾಲು ಸಂಗ್ರಹಿಸಿ ಬೆಂಗಳೂರಿಗೆ ಮಾರಾಟ ಮಾಡುತ್ತಿದ್ದೆ. ಲೀಟರ್‌ಗೆ ₹250 ಮಾರಾಟ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಒಳ್ಳೆಯ ಆದಾಯ ಕೂಡ ಇತ್ತು. ಆದರೆ ಕೋವಿಡ್ ಬಂದ ನಂತರ ವಾಹನ ಸೌಲಭ್ಯದ ಸಮಸ್ಯೆಯಿಂದಾಗಿ ಆ ವ್ಯಾಪಾರ ಸ್ಥಗಿತಗೊಂಡಿತು. ಈಗ ನಮಗೆ ಮರಿ ವ್ಯಾಪಾರವೇ ಲಾಭದಾಯಕವಾಗಿದೆ. ಇನ್ನು ಪ್ರತಿ ಶನಿವಾರ ನಮ್ಮ ಹೋಬಳಿಯ ಅಕ್ಕಿರಾಂಪುರದಲ್ಲಿ ನಡೆಯುವ ಸಂತೆಗೆ ಬರುವ ರೈತರ ಕುರಿಗಳನ್ನು ಈ ಆ್ಯಪ್‌ ಮೂಲಕ ಮಾರಾಟ ಮಾಡಿಸುತ್ತೇವೆ. ತಮಿಳುನಾಡು, ಮದ್ರಾಸ್‌, ಮಂಡ್ಯ, ಮದ್ದೂರು ಭಾಗಗಳಿಂದ ಖರೀದಿದಾರರು ಬರುತ್ತಾರೆ. ಅವರಿಗೆ ಆ್ಯಪ್ ಮೂಲಕ ಮಾರಾಟ ವ್ಯವಸ್ಥೆ ಮಾಡುತ್ತೇವೆ. ಅದಕ್ಕೆ ಒಪ್ಪದವರಿಗೆ ನೇರವಾಗಿಯೂ ಮಾರಾಟ ಮಾಡುತ್ತೇವೆ" ಎಂದವರು ವಿವರಿಸಿದರು.

ಈ ಬಗ್ಗೆ ಸಂಸ್ಥೆಯ ಉಪ ವ್ಯವಸ್ಥಾಪಕ ದೇವ ನಾಯಕ್‌ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, "ಸಂಸ್ಥೆಯ ಈ ಒಂದು ಆರಂಭಿಕ ಪ್ರಯತ್ನದಲ್ಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಇದುವರೆಗೂ 12 ಲಕ್ಷ ಕುರಿಗಾಯಿ ಮತ್ತು ರೈತರ ಕುಟುಂಬಗಳು ನಮ್ಮ ಸಂಪರ್ಕದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಒಟ್ಟಾರೆ, 1.71 ಲಕ್ಷ ಕುರಿ ಮತ್ತು ಮೇಕೆಗಳು ನಮ್ಮ ಈ ಆ್ಯಪ್ ಮೂಲಕ ಮಾರಾಟವಾಗಿವೆ" ಎಂದರು.

"ಮೊದಮೊದಲು ರೈತರು ಇದರಲ್ಲಿ ವ್ಯವಹಾರ ನಡೆಸಲು ಹಿಂದೇಟು ಹಾಕುತ್ತಿದ್ದರು. ಆದರೆ ನಾವು ಕುರಿ ಸಹಕಾರಿ ಸಂಘಗಳೊಂದಿಗೆ ಮನವಿ ಮಾಡಿ, ಒಪ್ಪಂದ ಮಾಡಿಕೊಂಡು ನಮ್ಮ ಸಂಸ್ಥೆಯ ಸದಸ್ಯರಿಂದ ತರಬೇತಿ ಶಿಬಿರಗಳನ್ನು ಮಾಡುತ್ತಿದ್ದೆವು. ಅಲ್ಲಿ ರೈತರ ಎಲ್ಲ ಗೊಂದಲಗಳನ್ನು ಪರಿಹರಿಸಿ ಆ್ಯಪ್ ಮೂಲಕ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇಲ್ಲದೆ ತಮ್ಮ ಮಾಲನ್ನು ತಾವೇ ಮಾರಾಟ ಮಾಡುವ ವಿಧಾನವನ್ನು ಮನದಟ್ಟು ಮಾಡಿಸಿದೆವು" ಎಂದವರು ತಿಳಿಸಿದರು. 

ಕುರಿ ಮಾರಾಟದ ಆ್ಯಪ್

ಆ್ಯಪ್ ಮೂಲಕ ಸಂಪರ್ಕ ಪಡೆಯುವ ವಿಧಾನ

ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಕುರಿಗಾಹಿಗಳು, ರೈತರು ಈ ಆ್ಯಪ್ಅನ್ನು ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. "ಪ್ಲೇ ಸ್ಟೋರ್‌ನಲ್ಲಿ ''Neml live stock" ಎಂದು ಟೈಪ್‌ ಮಾಡಿ  ಆ್ಯಪ್ಅನ್ನು ʼಇನ್ಸ್ಟಾಲ್‌ʼ ಮಾಡಿದ ನಂತರ ಸಂಸ್ಥೆ ಪ್ರತಿ ರೈತ ಮತ್ತು ಕುರಿಗಾಹಿಗಳ ʼಪ್ಯಾನ್‌ ಕಾರ್ಡ್‌ʼ, ಆಧಾರ್‌ ಕಾರ್ಡ್‌, ಸಂಸ್ಥೆಯ ತೆರೆಸಲಾದ ಬ್ಯಾಂಕ್‌ ಖಾತೆ ನಂಬರ್‌ಗಳನ್ನು ನೋಂದಾಯಿಸಿ ಪ್ರತ್ಯೇಕವಾದ ʼಐಡಿ- ಪಾಸ್ವರ್ಡ್‌ʼ ಕೊಡಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಮಾರಾಟಗಾರ ರೈತ ಅಥವಾ ಕುರಿಗಾಯಿ ಸ್ವತಂತ್ರವಾಗಿ ವ್ಯಾಪಾರ-ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ರೈತರು ನೇರವಾಗಿ ತಾವು ಮಾರಾಟ ಮಾಡಲಿರುವ ಕುರಿ, ಮೇಕೆಗಳ ಪೋಟೋ ತೆಗೆದು ಆ್ಯಪ್‌ನಲ್ಲಿ ಹಾಕಿ ತಾವು ಮಾರಾಟಕ್ಕೆ ನಿಗದಿಪಡಿಸಿರುವ ಧಾರಣೆಯನ್ನು ಹಾಕಬಹುದು. ನಂತರ ಬೆಲೆ ಸೂಕ್ತ ಎನಿಸಿದ ವರ್ತಕರು, ಮಾರಾಟಗಾರನೊಂದಿಗೆ ನೇರ ಸಂಪರ್ಕ ಮಾಡಿ ಖರೀದಿ ಮಾಡಬಹುದು.

ಇಲ್ಲಿ ಮಾರಾಟಕ್ಕೆ ಆಯ್ಕೆಯಾಗಿರುವ ಕುರಿ ಅಥವಾ ಮೇಕೆಯ ಪ್ರತ್ಯೇಕವಾದ ಸುಮಾರು 30 ಪೋಟೋಗಳನ್ನು ʼಅಪ್‌ಲೋಡ್‌ʼ ಮಾಡಲಾಗುತ್ತದೆ. ಜೊತೆಗೆ ಆ ಕುರಿಗಳ ಜಾತಿ, ವಯಸ್ಸು, ಅವುಗಳಿಗಿರುವ ಹಲ್ಲುಗಳ ಸಂಖ್ಯೆ, ಅವುಗಳ ತೂಕ ಹೀಗೆ ಎಲ್ಲ ಮಾಹಿತಿಯನ್ನು ಪ್ರತೇಕವಾಗಿ ನಮೂದಿಸಬೇಕು. ನೇರವಾಗಿ ಖರೀದಿ ಮಾಡಲು ಇಚ್ಚಿಸುವ ವರ್ತಕರು ಕೂಡ ಅದೇ ಆ್ಯಪ್‌ನ ಮೂಲಕ ಮಾರಾಟಗಾರರನ್ನು ಸಂಪರ್ಕ ಮಾಡುತ್ತಾರೆ. ಇಬ್ಬರಿಗೂ ವ್ಯಾಪಾರ ಕುದುರಿದರೆ ಸ್ಥಳೀಯ ಮಾರುಕಟ್ಟೆ ಬಳಿ ಅಥವಾ ಕುರಿ ಸೊಸೈಟಿ ಬಳಿ ಸ್ಥಳ ನಿಗದಿ ಮಾಡಿ ಇಬ್ಬರು ಭೇಟಿಯಾಗುತ್ತಾರೆ. ಆಗ ಪ್ರತಿ ಕುರಿಯ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ, ಕುರಿಗಳನ್ನು ತೂಕ ಮಾಡಿಸಿಕೊಂಡು ಅದಕ್ಕೆ ನಿರ್ಧರಿಸಿದ ಸೂಕ್ತ ಬೆಲೆಯನ್ನು ಸಂಸ್ಥೆ ರೈತರಿಗೆ ನೀಡಿರುವ ಬ್ಯಾಂಕ್‌ ಖಾತೆಗೆ ಜಮಾ ಮಾಡಿ ಮಾಲು ಪಡೆಯುತ್ತಾರೆ. ಇಲ್ಲಿ ಮಧ್ಯವರ್ತಿಯ ಪಾತ್ರವೇ ಬರುವುದಿಲ್ಲ. ವರ್ತಕ ಕೂಡ ತನಗೆ ಇಂತಹ ಜಾತಿಯ ಕುರಿ, ಮೇಕೆಗಳೇ ಬೇಕೆಂಬ ಬೇಡಿಕೆ ಸಲ್ಲಿಕೆಗೂ ಅವಕಾಶ ಇದೆ ಎನ್ನುತ್ತಾರೆ ಸಂಸ್ಥೆಯ ಉಪ ವ್ಯವಸ್ಥಾಪಕ ದೇವ ನಾಯಕ್‌.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app