ಶಿವಮೊಗ್ಗ | ಉರುಳುಗಲ್ಲು ಪ್ರಕರಣ: ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ ಸುರಿವ ಮಳೆಯಲ್ಲೇ ಪಾದಯಾತ್ರೆ, ಧರಣಿ

  • ಕಾರ್ಗಲ್ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು
  • ಉರುಳುಗಲ್ಲು ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂದಕ್ಕೆ

ಸ್ಥಳೀಯ ನಿವಾಸಿಗಳು ಮತ್ತು ರೈತರ ಮೇಲೆ ಕಾರ್ಗಲ್ ಶರಾವತಿ ವನ್ಯಜೀವಿ ಅಭಯಾರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದಿರುವ ದೌರ್ಜನ್ಯ ಖಂಡಿಸಿ ಜನಪರ ಹೋರಾಟ ವೇದಿಕೆ ಮತ್ತು ಕಾಗೋಡು ಜನಪರ ವೇದಿಕೆ ವತಿಯಿಂದ ಶುಕ್ರವಾರ 22 ಕಿ.ಮೀ. ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹ ನಡೆಯಿತು.

ಪಾದಯಾತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಿದರು. ಭಾರಂಗಿ ಹೋಬಳಿಯ ಸಾವಿರಾರು ಮಂದಿ ಸುರಿಯುವ ಮಳೆಯ ನಡುವೆಯೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಿಳಿಗಾರು ಗ್ರಾಮದಿಂದ ಕಾರ್ಗಲ್‌ವರೆಗೆ ನಡೆದ ಪಾದಯಾತ್ರೆಯಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. 

22 ಕಿ.ಮೀ ಕ್ರಮಿಸಿ ಸಂಜೆ ವೇಳೆಗೆ ಗ್ರಾಮಸ್ಥರು ಕಾರ್ಗಲ್ ತಲುಪಿದರು. ಬಳಿಕ ಕಾರ್ಗಲ್‌ ವನ್ಯಜೀವಿ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ತಡರಾತ್ರಿಯವರೆಗೂ ಸುರಿಯುವ ಮಳೆಯಲ್ಲೇ ಸತ್ಯಾಗ್ರಹ ಮುಂದುವರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, “ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇದನ್ನು ನಾಗರಿಕ ಸಮಾಜ ಸಹಿಸುವುದಿಲ್ಲ. ರೈತರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿ, ಅಮಾನವೀಯ ಕ್ರೌರ್ಯ ಮೆರೆದಿರುವ ವಿಚಾರ ಉರುಳುಗಲ್ಲು ಪ್ರಕರಣದಲ್ಲಿ ಕಂಡು ಬಂದಿದೆ. ಜಿಲ್ಲಾಧಿಕಾರಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿ ಆದಿವಾಸಿಗಳಿಗೆ ನ್ಯಾಯ ಕೊಡಿಸಬೇಕು” ಎಂದು ಆಗ್ರಹಿಸಿದರು.

ಸಿಗಂದೂರು ದೇವಾಲಯದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, “ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ನಮ್ಮನ್ನೇ ಜೈಲಿಗೆ ಕಳುಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಅಧಿಕಾರಿಗಳು ಜನಪ್ರತಿನಿಧಿಗಳ ಹೆಸರಿಗೆ ಮಸಿ ಬಳಿಯುವ ಕೆಲಸದಲ್ಲಿ ನಿರತರಾಗಿದ್ದಾರೆ” ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, “ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಅರಣ್ಯವಾಸಿಗಳ, ಅಹವಾಲು ಸ್ವೀಕರಿಸಿ ಉರುಳುಗಲ್ಲು ಗ್ರಾಮ ವಾಸ್ತವ್ಯಕ್ಕೆ ನಿರ್ಧಾರ ತೆಗೆದುಕೊಳ್ಳಬೇಕು” ಆಗ್ರಹಿಸಿದರು.

ಹಿರಿಯ ವಕೀಲ ತ್ಯಾಗಮೂರ್ತಿ ಮಾತನಾಡಿ, “ರೈತರ ಮೇಲೆ ಪ್ರಕರಣ ದಾಖಲಿಸಿ, ಸ್ಲೇಟ್ ಹಿಡಿದು ಘೋರ ಅಪರಾಧಿಗಳಿಗೆ ನೀಡುವ ರೀತಿಯಲ್ಲಿ ಹಿಂಸೆ ನೀಡಿ ಅಮಾನವೀಯ ಕೌರ್ಯವನ್ನು ಮೆರೆದಿರುವ ಅರಣ್ಯಾಧಿಕಾರಿಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಫೋಟೋ ಹಾಕಿ ವಿಕೃತಿ ಮೆರೆದ ಸಹಾಯಕ ವಲಯಾರಣ್ಯಾಧಿಕಾರಿ ಪ್ರಮೋದ್ ಮತ್ತು ಕುಮ್ಮಕ್ಕು ನೀಡಿದ ವಲಯಾರಣ್ಯಾಧಿಕಾರಿ ಸಂಧ್ಯಾ ಅವರನ್ನು ಕರ್ತವ್ಯದಿಂದ ಕೂಡಲೇ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಹೋರಾಟಗಾರ ಜಿ ಟಿ ಸತ್ಯನಾರಾಯಣ, "ಅಭಯಾರಣ್ಯದ ನಡುವೆ ಇರುವ ಊರಿನ ದುರ್ಗಮ ದಾರಿಗೆ ಅಡ್ಡಲಾಗಿದ್ದ ಮರ ಕಡಿದ ಆರೋಪದ ಮೇಲೆ ಯುವ ರೈತರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಲ್ಲದೆ ಅವರಿಗೆ ಸ್ಲೇಟ್‌ ಹಿಡಿಸಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವ ಮಟ್ಟಿನ ಕ್ರೌರ್ಯವನ್ನು ಅಧಿಕಾರಿಗಳು ತೋರಿದ್ದಾರೆ. ಅದೇ ಅಧಿಕಾರಿ ಮತ್ತು ಅವರ ಸಿಬ್ಬಂದಿ ಕಳೆದ ವರ್ಷ ನಾಲ್ಕು ಎಕರೆ ಅಭಯಾರಣ್ಯವನ್ನೇ ಸುಟ್ಟುಹಾಕಿದ್ದರು. ಅದು ಸುದ್ದಿಯಾಗಿತ್ತು. ಆ ಘಟನೆಯನ್ನು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ ಅದೇ ಯುವಕರನ್ನು ಈಗ ಮರ ಕಡಿದ ನೆಪದಲ್ಲಿ ಬಂಧಿಸಿ ಕಾನೂನುಬಾಹಿರವಾಗಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಇದು ಮರ ಕಡಿದ ಕಾರಣಕ್ಕೆ ಮಾಡಿದ ಕೃತ್ಯವಲ್ಲ; ಅಭಯಾರಣ್ಯಕ್ಕೇ ಬೆಂಕಿ ಇಟ್ಟ ತಮ್ಮ ಘಾತುಕ ಕೃತ್ಯವನ್ನು ಹೊರಜಗತ್ತಿಗೆ ತಿಳಿಸಿದ ಗ್ರಾಮಸ್ಥರ ಮೇಲಿನ ಸೇಡಿಗೆ ಮಾಡಿದ ಕ್ರೌರ್ಯ. ಹಾಗಾಗಿ ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೀ ನಾ ಶ್ರೀನಿವಾಸ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿ, ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ, ರೈತ ಸಂಘದ ದಿನೇಶ ಶಿರವಾಳ, ಅರುಣ, ಆದಿವಾಸಿ ಬುಡಕಟ್ಟು ಹೋರಾಟ ಸಂಘಟನೆಯ ಸಂಚಾಲಕ ರಾಮಣ್ಣ ಹಸಲರು, ಆಮ್ ಆದ್ಮಿ ಪಕ್ಷದ ಸಾಗರ ತಾಲೂಕು ಘಟಕದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಮಹಿಳಾ ಪ್ರತಿನಿಧಿಗಳು ಹಾಗೂ ಇತರರು ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ? ಅರಣ್ಯಾಧಿಕಾರಿ ಅಟ್ಟಹಾಸ| ಶರಾವತಿ ಕಣವೆಯಲ್ಲಿ ಆಕ್ರೋಶ; ಆ.5ರಂದು ಪಾದಯಾತ್ರೆ, ಸತ್ಯಾಗ್ರಹ

ಜಿಲ್ಲಾಧಿಕಾರಿ ಉರುಳುಗಲ್ಲು ಗ್ರಾಮಕ್ಕೆ ಭೇಟಿನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ  ಪ್ರತಿಭಟನೆ ಕೈಬಿಡಲಾಯಿತು.

ಪ್ರಕರಣದ ಹಿನ್ನೆಲೆ

ದಶಕಗಳಿಂದ ಮೂಲಸೌಕರ್ಯ ವಂಚಿತ ಉರುಳುಗಲ್ಲು ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕಕ್ಕಾಗಿ ಕೆಲವು ಮರ ಕಡಿದ ಯುವಕರ ವಿರುದ್ಧ ಕಠಿಣ ಕಾನೂನು ಕ್ರಮದ ಜತೆಗೆ ಅವರ ಕೈಗೆ ಸ್ಲೇಟ್ ಹಿಡಿಸಿ ಫೋಟೋ ತೆಗೆದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.

ಕನಿಷ್ಟ ಜೀಪು ಬರುವ ಮಟ್ಟಿಗೆ ರಸ್ತೆ ತಿರುವಿನಲ್ಲಿ ಇದ್ದ ನಾಲ್ಕಾರು ಮರಗಳನ್ನು ಕಡಿದಿರುವುದನ್ನೇ ಇಲಾಖೆ ಭಯೋತ್ಪಾದಕ ಕೃತ್ಯ ಎಂಬಂತೆ ಬಿಂಬಿಸಿ ಕಠಿಣ ಪ್ರಕರಣಗಳನ್ನು ದಾಖಲಿಸಿದೆ. ಜತೆಗೆ ಯುವಕರ ಫೋಟೋ ವೈರಲ್ ಮಾಡಿ ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂಬುದು ಸಾಮಾಜಿಕ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಮಡೆನೂರು, ಲಿಂಗನಮಕ್ಕಿ ಅಣೆಕಟ್ಟೆ ಮತ್ತು ತಳಕಳಲೆ ಜಲಾಶಯಗಳ ನಿರ್ಮಾಣ ಕಾಲದಲ್ಲಿ ಉರುಳುಗಲ್ಲು ಗ್ರಾಮ ಮೂರು ಬಾರಿ ಮುಳುಗಡೆ ಆಗಿದ್ದು, ಈಗ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿವೆ. ಆದರೆ ಗ್ರಾಮದಲ್ಲಿ ವಿದ್ಯುತ್, ರಸ್ತೆ, ಕುಡಿಯುವ ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ ಸೇರಿದಂತೆ ಯಾವುದೇ ರೀತಿಯ ಮೂಲ ಸೌಲಭ್ಯವಿಲ್ಲದ ಗ್ರಾಮವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್