ಶಿವಮೊಗ್ಗ | ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ: ಬಂಜಾರ ಮುಖಂಡರು

Shivamogga
  • ‘ಧಾರ್ಮಿಕ ಕ್ಷೇತ್ರವನ್ನು ಸೈದ್ದಾಂತಿಕ ಕ್ಷೇತ್ರವಾಗಿ ಪರಿವರ್ತಿಸಲು ಬಿಡುವುದಿಲ್ಲ’
  • ಸೆಪ್ಟಂಬರ್‍‌ 11ರಂದು ಪ್ರಶಿಕ್ಷಣ ತರಬೇತಿ ನೀಡಲು ತಯಾರಿ

ಶಿಮಮೊಗ್ಗದ ಧಾರ್ಮಿಕ ಸ್ಥಳವಾದ ಸೊರಗೊಂಡನಕೊಪ್ಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍‌ಎಸ್‌ಎಸ್‌) ಪ್ರಶಿಕ್ಷಣ ತರಬೇತಿ ನೀಡಲು ಮುಂದಾಗಿದೆ. ಸೈದ್ದಾಂತಿಕ ಆಧಾರಿತ ಕಾರ್ಯಕ್ರಮಗಳಿಗೆ ಸಂತ ಸೇವಾಲಾಲ್‌ ಜನ್ಮಸ್ಥಳದಲ್ಲಿ ಜಾಗವಿಲ್ಲ” ಎಂದು ಸೇವಾಲಾಲ್ ಜನ್ಮಸ್ಥಳ ಮಹಾಮಂಡಳ ಮತ್ತು ಬಂಜಾರ ಮುಖಂಡರು ಕಟ್ಟೆಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿರುವ ಸೊರಗೊಂಡನಕೊಪ್ಪದ ಸಂತ ಸೇವಾಲಾಲ್‌ ಸ್ಮಾರಕದ ಬಳಿ ಆರ್‌ಎಸ್‌ಎಸ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದರೆ, ಅದಕ್ಕೆ ತಮ್ಮ ಅನುಮತಿಯನ್ನು ಪಡೆದುಕೊಂಡಿಲ್ಲ ಎಂದು ಮಹಾಮಂಡಳ ಹೇಳಿದೆ.

ಶಿವಮೊಗ್ಗದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ್, ಮಹಾಮಂಡಳದ ನಿರ್ದೇಶಕ ಡಾ ಇಂದ್ರಾ ನಾಯ್ಕ ಮತ್ತು ಸಮಾಜದ ಮುಖಂಡ ಶಶಿರಾಜ ನಾಯ್ಕ್, “ಸೊರಗೊಂಡನಕೊಪ್ಪ ಧಾರ್ಮಿಕ ಆಧ್ಯಾತ್ಮಕ ಕ್ಷೇತ್ರವೆಂದು ಹೆಸರುವಾಸಿಯಾಗಿದೆ. ಈ ಕ್ಷೇತ್ರವನ್ನು ಸೈದ್ದಾಂತಿಕ ರಾಜಕೀಯ ಕ್ಷೇತ್ರವಾಗಿ ಪರಿವರ್ತಿಸಲು ಬಿಡುವುದಿಲ್ಲ. ಅಂತಹ ಉದ್ದೇಶವಿಟ್ಟುಕೊಂಡು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ” ಎಂದಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಉಡುಪಿ | ಸಾವರ್ಕರ್ ಪೋಸ್ಟರ್‌ಗೆ ಬಿಜೆಪಿ ಮುಖಂಡ ಮಾಲಾರ್ಪಣೆ: ಬಾವುಟ ತೆಗೆದು ಹಾಕಿದ ಪೊಲೀಸರು

“ಸೆಪ್ಟಂಬರ್ 11ರಿಂದ ಸೆಪ್ಟಂಬರ್ 19ರವರೆಗೆ ಪ್ರಶಿಕ್ಷಣ ತರಬೇತಿ ನಡೆಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕರಪತ್ರ ಹಂಚುತ್ತಿರುವ ಬಗ್ಗೆ ಮಾಹಿತಿಯಿದೆ. ಯಾರ ಅನುಮತಿ ಪಡೆಯದೆ ಏಕಾಏಕಿ ಕಾರ್ಯಕ್ರಮ ನಡೆಸಲು ಮುಂದಾಗುತ್ತಿರುವುದು ಆಶ್ಚರ್ಯವಾಗಿದೆ. ಮುಂದಿನ ಚುನಾವಣೆಗೆ ಬಂಜಾರ ಸಮುದಾಯವನ್ನು ಸೆಳೆಯಲು ಕೆಲ ವ್ಯಕ್ತಿಗಳು ಈ ಮಾರ್ಗವನ್ನು ಹಿಡಿದಿದ್ದಾರೆ. ಇದನ್ನು ಬಂಜಾರ ಸಮುದಾಯ ಖಂಡಿಸುತ್ತದೆ” ಎಂದು ಗಿರೀಶ್‌ ನಾಯ್ಕ್‌ ಹೇಳಿದ್ದಾರೆ.

"ಅನುಮತಿ ಪಡೆಯದೆ ನಡೆಸುತ್ತಿರುವ ಪ್ರಶಿಕ್ಷಣ ತರಬೇತಿ ಬಗ್ಗೆ ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ರಾಜೀವ್ ಅವರ ಗಮನಕ್ಕೆ ತಂದಿದ್ದೇವೆ. ಆದರೆ, ಅವರು ‘ನಡೆಯಲಿ ಬಿಡಿ’ ಎಂದು ಉತ್ತರಿಸಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎನ್ನುವುದು ಸ್ಪಷ್ಟವಾಗಿದೆ. ಕೆಲವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ರಾಜಕೀಯ ವೇದಿಕೆ ಸಿದ್ದಪಡಿಸಲು ನಾವ್ಯಾರು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ

"ಒಂದು ವೇಳೆ ಎಚ್ಚರಿಕೆಗೂ ಮೀರಿ ಕಾರ್ಯಕ್ರಮ ಮುಂದುವರಿಸಲು ಪ್ರಯತ್ನಿಸಿದರೆ, ಬಂಜಾರ ನಾಯಕರೆಲ್ಲ ಒಗ್ಗೂಡಿ, ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ" ಎಂದು ಹೇಳಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಉಮಾಮಹೇಶ್ವರ ನಾಯ್ಕ , ಹನುಮಂತ ನಾಯ್ಕ್, ನಾನ್ಯಾ ನಾಯ್ಕ್ ಮತ್ತಿತ್ತರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್