
- ಮುಖ್ಯ ಆರೋಪಿ ಜಬೀವುಲ್ಲಾ ಕಾಲಿಗೆ ಗುಂಡು ಹಾರಿಸಿದ್ದ ಪೊಲೀಸರು
- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಚೇರಿಯಲ್ಲಿ ಶೋಧ
ಸ್ವಾತಂತ್ರ್ಯ ದಿನದಂದು ಶಿವಮೊಗ್ಗದಲ್ಲಿ ವಿ ಡಿ ಸಾವರ್ಕರ್ ಭಾವಚಿತ್ರದ ಬಗ್ಗೆ ಉದ್ವಿಗ್ನತೆ ಉಂಟಾಗಿದ್ದು, ಬಟ್ಟೆ ಅಂಗಡಿ ಕಾರ್ಮಿಕ ಪ್ರೇಮ್ ಸಿಂಗ್(20) ಎಂಬಾತನ ಮೇಲೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ(ಯುಎಪಿಎ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
“ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಕಚೇರಿ ಮತ್ತು ಆರೋಪಿಗಳ ಮನೆಗಳಲ್ಲಿ ಗುರುವಾರ ಹುಡುಕಾಟ ನಡೆಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
"ನ್ಯಾಯಾಲಯದಿಂದ ʼಸರ್ಚ್ ವಾರಂಟ್ʼ ಪಡೆದ ಬಳಿಕ ಆರು ಸ್ಥಳಗಳಲ್ಲಿ ಹುಡುಕಿದೆವು. ನಾಲ್ವರು ಆರೋಪಿಗಳ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಆರೋಪಿಗಳ ಸಂಬಂಧಿಯೊಬ್ಬರ ಮನೆಯಲ್ಲಿಯೂ ಶೋಧ ಕಾರ್ಯ ನಡೆಸಲಾಯಿತು. ಆರೋಪಿಗಳು ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕಂಡುಬಂದಿದೆ. ಈ ಹಿನ್ನೆಲೆ ಎಸ್ಡಿಪಿಐ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಚೂರಿ ಇರಿತ ಪ್ರಕರಣ ಸಂಬಂಧ ನಾಲ್ವರ ಬಂಧನ
“ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಕೆಲವು ಪ್ರಮುಖ ವಿಷಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖ್ಯ ಆರೋಪಿ ಜಬೀವುಲ್ಲಾ ಕಾಲಿಗೆ ಗುಂಡು ಹಾರಿಸಿದ್ದು, ಇದೀಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದೇವೆ” ಎಂದು ಲಕ್ಷ್ಮಿ ಪ್ರಸಾದ್ ತಿಳಿಸಿದರು.
ಜಬೀವುಲ್ಲಾ ಅಲಿಯಾಸ್ ಚಾರ್ಬಿ (29), ತನ್ವೀರ್ (22), ನದೀಮ್ (25) ಮತ್ತು ಅಬ್ದುಲ್ ರೆಹಮಾನ್ (25) ಎಂಬುವವರು ಬಂಧಿತ ಆರೋಪಿಗಳು” ಎಂದು ಹೇಳಿದರು.