ಶಿವಮೊಗ್ಗ | ಅರಣ್ಯವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಭರವಸೆ

  • ಭಾನುಕುಳಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ಆರ್‌ ಸೆಲ್ವಮಣಿ ಸಭೆ
  • ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಇತ್ತೀಚೆಗೆ ಪಾದಯಾತ್ರೆ ನಡೆದಿತ್ತು

“ಮೂಲಸೌಕರ್ಯಗಳಿಂದ ವಂಚಿತ ಉರುಳುಗಲ್ಲು ಗ್ರಾಮಕ್ಕೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸುವ ಜತೆಗೆ ಕುಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಕೂಡಲೇ ಆದೇಶಿಸಲಾಗುವುದು. ಅರಣ್ಯವಾಸಿಗಳು ಯಾವುದೇ ಆತಂಕಪಡಬೇಕಾಗಿಲ್ಲ” ಎಂದು ಜಿಲ್ಲಾಧಿಕಾರಿ ಆರ್ ಸೆಲ್ಪಮಣಿ ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಕರೂರು ಭಾರಂಗಿ ಹೋಬಳಿಯ ರೈತರು ಮತ್ತು ಅರಣ್ಯವಾಸಿಗಳು ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಇತ್ತೀಚಗೆ ಪಾದಯಾತ್ರೆ, ಪ್ರತಿಭಟನೆಗಳನ್ನು ನಡೆಸಿದ್ದರು. ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿದರು.

“ನಾಗರಿಕ ಸಮಾಜ ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯದೊಂದಿಗೆ ಅರಣ್ಯವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು” ಎಂದು ತಿಳಿಸಿದರು.

“ಉರುಳುಗಲ್ಲು ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಪಾರಂಪರಿಕ ಅರಣ್ಯವಾಸಿಗಳಿಗೆ ನೀಡಬೇಕಾದ ಭೂಮಿ ಹಕ್ಕಿನ ಅರ್ಜಿಗಳನ್ನು ಶೀಘ್ರ ಬಗೆಹರಿಸಲು ಉಪವಿಭಾಗಾಧಿಕಾರಿಗೆ ಸೂಚಿಸಲಾಗುವುದು. ರಸ್ತೆ ಮತ್ತು ಸಂಪರ್ಕಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಲಾಗುವುದು” ಎಂದರು.

ಉಪಅರಣ್ಯಾಧಿಕಾರಿ ಪ್ರಮೋದ್ ಕುಂಬಾರ್ ಮಾತನಾಡಿ, “ಕಾನೂರು ಅರಣ್ಯದೊಳಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಬಿಳಿಗಾರು ಗ್ರಾಮದಲ್ಲಿ 3 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಸಂಬಂಧ ತಹಶೀಲ್ದಾರ್ ಅವರಿಂದ ವರದಿ ಪಡೆಯಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಉರುಳಗಲ್ಲು ಯುವಕರ ಮೇಲೆ ಅಟ್ಟಹಾಸ; ಅರಣ್ಯ ಇಲಾಖೆ ವಿರುದ್ಧ ಪಾದಯಾತ್ರೆ

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಅರಣ್ಯವಾಸಿಗಳ ಬೇಡಿಕೆ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜನಪರ ಹೋರಾಟ ವೇದಿಕೆ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ, ಅಶೋಕ ಬರದವಳ್ಳಿ, ತ್ಯಾಗಮೂರ್ತಿ ಬಿಲ್ಕಂದೂರು, ಆರೋಡಿ ಚಂದ್ರಕಾಂತ ಗಣೇಶ ಜಾಕಿ, ರೈತ ಸಂಘಟನೆಯ ಶಿವಾನಂದ ಕುಗ್ವೆ, ದಿನೇಶ ಶಿರವಾಳ, ದೇವರಾಜ್, ವಿಜಯಕುಮಾರ್, ಗಣೇಶ ಹಾರಿಗೆ, ನಾಗರಾಜ ಸಾಲ್ಕೋಡು ಸಭೆಯಲ್ಲಿದ್ದರು.

ಸಮಿತಿ ರಚನೆ :

“ಉರುಳುಗಲ್ಲು ಗ್ರಾಮದಲ್ಲಿ ಶರಾವತಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ನಡೆಸಿದ ದೌರ್ಜನ್ಯ ಪ್ರಕರಣದ ಆರೋಪ ಸಂಬಂಧ ತನಿಖೆಗೆ ಆದೇಶಿಸಲಾಗುವುದು. ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ 20 ದಿನಗಳೊಳಗೆ ವರದಿ ಪಡೆಯಲಾಗುವುದು” ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್