ಶಿವಮೊಗ್ಗ | ಅನರ್ಹರಿಗೆ ಸಿಗುತ್ತಿರುವ ಸೌಲಭ್ಯ; ಅರ್ಹ ಕಾರ್ಮಿಕರಿಗೆ ಅನ್ಯಾಯ: ಆರೋಪ

  • ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ನೀಡಲು ವಿಳಂಬ
  • ಲಂಚ ನೀಡಿದರೆ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ

ಸರ್ಕಾರ ನೀಡುವ ಸೌಲಭ್ಯಗಳನ್ನು ಅರ್ಹರ ಬದಲಿಗೆ ಅನರ್ಹರಿಗೆ ನೀಡುತ್ತಿದ್ದು, ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು, “ದುಡಿಯುವ ಕಾರ್ಮಿಕ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದೆ. ಆದರೆ, ಕಾರ್ಮಿಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ, ಭ್ರಷ್ಟಾಚಾರದ ಪರಿಣಾಮ ಕಾರ್ಮಿಕರಿಗೆ ಯೋಜನೆಗಳ ಸೌಲಭ್ಯ ಸಿಗದಂತಾಗಿದೆ. ಕಾರ್ಮಿಕರಿಗೆ ಸೌಲಭ್ಯ ನೀಡಲು ವಿಳಂಬ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಕೊರೊನಾ ಸೋಂಕು ಉಲ್ಬಣಗೊಂಡ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ 12 ಸಾವಿರ ಆಹಾರ ಕಿಟ್ ನೀಡಿದ್ದಾರೆ. ಆದರೆ, ಪ್ರಭಾವಿಗಳು ಆಹಾರ ಕಿಟ್ ಪಡೆದುಕೊಂಡು, ಕಾರ್ಮಿಕರಿಗೆ ಮೋಸ ಮಾಡಿದ್ದಾರೆ. ಲಂಚ ನೀಡಿದರೆ ಮಾತ್ರ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ನೀಡುತ್ತಾರೆ” ಎಂದು ದೂರಿದರು.

"ಪ್ರಭಾರ ಹುದ್ದೆ ನಿರ್ವಹಿಸುತ್ತಿರುವ ಕಾರ್ಮಿಕ ಅಧಿಕಾರಿಗಳು ಕಚೇರಿಗೆ ಅಪರೂಪಕ್ಕೆ ಭೇಟಿ ನೀಡುತ್ತಾರೆ. ಹೊರಗುತ್ತಿಗೆ ಸಿಬ್ಬಂದಿ ಕಚೇರಿ ನಿರ್ವಹಣೆ ಮಾಡುತ್ತಿದ್ದು, ಕಾರ್ಮಿಕರಿಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಅವಹೇಳನಕಾರಿ ಪದ ಬಳಕೆ | ಮುಕುಡಪ್ಪ, ಪುಟ್ಟಸ್ವಾಮಿ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳ ಪ್ರತಿಭಟನೆ

"ಕಾರ್ಮಿಕ ಇಲಾಖೆ ಅಧಿಕಾರಿ, ತಹಶೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ, ಪರಿಹಾರದ ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಳಕೆರೆ ಪೂರ್ಣೇಶ್, ತಾ.ಪಂ. ಮಾಜಿ ಸದಸ್ಯ ಕೆಳಕೆರೆ ದಿವಾಕರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥಶೆಟ್ಟಿ, ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್ ಸೇರಿದಂತೆ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app