
- ಕ್ಷೇತ್ರದ ಜನರಲ್ಲಿ ಅಚ್ಚರಿಗೆ ಕಾರಣವಾದ ಬಳಿಗಾರ್ ನಡೆ
- ವಿಜಯೇಂದ್ರ ಸ್ಪರ್ಧೆ ನಿರೀಕ್ಷೆಯಲ್ಲಿ ಗಮನ ಸೆಳೆದಿರುವ ಕ್ಷೇತ್ರ
ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಇರುವಾಗಲೇ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಎಚ್. ಟಿ. ಬಳಿಗಾರ್ ಪಕ್ಷ ತೊರೆದು, ಬಿಜೆಪಿ ಸೇರಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಮಧ್ಯಾಹ್ನ ಸೊರಬಕ್ಕೆ ಬರುವ ಹಾದಿಯಲ್ಲಿ ತರೀಕೆರೆ ಅತಿಥಿಗೃಹದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ ಅವರ ಸಮ್ಮುಖದಲ್ಲಿ ಎಚ್ ಟಿ ಬಳಿಗಾರ್ ಬಿಜೆಪಿ ಸೇರಿರುವುದಾಗಿ ತಿಳಿದುಬಂದಿದೆ.
ಶಿಕಾರಿಪುರ ತಾಲೂಕಿನ ಮುತ್ತಿಕೋಟೆ ಗ್ರಾಮದವರಾದ ಎಚ್.ಟಿ. ಬಳಿಗಾರ್ ವಾಲ್ಮೀಕಿ ಸಮುದಾಯದವರಾಗಿದ್ದು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ತಾಲೂಕಿನ ರಾಜಕೀಯಕ್ಕೆ ಧುಮುಕಿದ್ದರು.
ಈ ಸುದ್ದಿ ಓದಿದ್ದೀರಾ? : ಮುಂದಿನ ಚುನಾವಣೆಯಲ್ಲಿ ಸಿದ್ಧರಾಮಯ್ಯ, ಡಿಕೆಶಿ ಸ್ಪರ್ಧಿಸದಿರುವುದೇ ಪಕ್ಷಕ್ಕೆ ಒಳಿತು | ಸಂಚಲನ ಸೃಷ್ಟಿಸಿದ ಸಂತೋಷ್ ಲಾಡ್ ಹೇಳಿಕೆ
ಮಾಜಿ ಸಿಎಂ ಎಸ್ ಬಂಗಾರಪ್ಪ ಮತ್ತು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಬಂಗಾರಪ್ಪ ಅವರೊಂದಿಗೆ ಜೆಡಿಎಸ್ ಸೇರಿ ಶಿಕಾರಿಪುರದಲ್ಲಿ ಪಕ್ಷ ಸಂಘಟನೆ ಮಾಡಿದ್ದರು.
ಯಡಿಯೂರಪ್ಪ ಅವರ ಪ್ರಭಾವದ ನಡುವೆಯೂ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದರು. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು, 2013ರಲ್ಲಿ 15 ಸಾವಿರ ಮತ್ತು 2018ರಲ್ಲಿ 13 ಸಾವಿರ ಮತಗಳನ್ನು ಪಡೆದಿದ್ದರು.
ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದರು. ಇದಕ್ಕೆ ಪೂರಕವಾಗಿ ಜೆಡಿಎಸ್ ಪಕ್ಷವು ಮೊದಲ ಹಂತದಲ್ಲೇ ಅವರಿಗೆ ಟಿಕೆಟ್ ಘೋಷಿಸಿತ್ತು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಅವರು ಬಿಜೆಪಿ ಸೇರಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಾವು ಕಣಕ್ಕಿಳಿಯುವುದಿಲ್ಲ. ಬದಲಾಗಿ ತಮ್ಮ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಈಗಾಗಲೇ ಬಿ ಎಸ್ ಯಡಿಯೂರಪ್ಪ ಘೋಷಿಸಿರುವ ಹಿನ್ನೆಲೆಯಲ್ಲಿ, ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಈ ನಡುವೆ ಬಳಿಗಾರ್ ಅವರ ದಿಢೀರ್ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.