ಶಿವಮೊಗ್ಗ | ಸಾವರ್ಕರ್ ಭಾವ ಚಿತ್ರ ತೆಗೆಸಿದ ಪ್ರಕರಣ: ಆಸೀಫ್‌ ಗೆ ನ್ಯಾಯಾಂಗ ಬಂಧನ

  • ಸಾವರ್ಕರ್ ಭಾವಚಿತ್ರ ಇಟ್ಟು, ಮುಸ್ಲಿಂ ಹೋರಾಟಗಾರರ ಕಡೆಗಣಿಸಿದ ಪ್ರಕರಣ
  • ದೊಡ್ಡಪೇಟೆ ಠಾಣೆಯಲ್ಲಿ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೂರು 

ಶಿವಮೊಗ್ಗದ ಮಾಲ್‌ ಒಂದರಲ್ಲಿ ಮುಸ್ಲಿಂ ಹೋರಾಟಗಾರರನ್ನು ಕಡೆಗಣಿಸಿ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ಅಳವಡಿಸಲಾಗಿದೆ ಎಂದು ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊತ್ತಿದ್ದ ಕನ್ನಡಿಗರ ಜನಪರ ವೇದಿಕೆಯ ಮುಖಂಡ ಎಂ.ಡಿ ಷರೀಫ್ ಅಲಿಯಾಸ್ ಆಸೀಪ್ ಅವರನ್ನು  ಪೊಲೀಸರು ಬಂಧಿಸಿ, ಆ. 26ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಶನಿವಾರ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಚಂದ್ರಶೇಖರ್ ಆಜಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ವಿನಾಯಕ ದಾಮೋದರ ಸಾವರ್ಕರ್, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಇಡಲಾಗಿತ್ತು.

ಇದರಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಲಾಗಿದ್ದು, ವಿ.ಡಿ ಸಾವರ್ಕರ್ ಅವರ ಭಾವಚಿತ್ರ ಇಡಲಾಗಿದೆ ಎಂದು ಪಾಲಿಕೆ ಸದಸ್ಯರೊಬ್ಬರ ಪತಿ ಆಸೀಫ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಆಯೋಜಕರು ಮತ್ತು ಆಸೀಫ್‌ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಬಿಜೆಪಿ ಬೆಂಬಲಿಗರೂ ಮಾಲ್‌ ಗೆ ಧಾವಿಸಿ ಸಾವರ್ಕರ್‌ ಭಾವಚಿತ್ರ ತೆಗೆಯದಂತೆ ಪಟ್ಟು ಹಿಡಿದಿದ್ದರು. ಇದರಿಂದಾಗಿ ಮಾಲ್ ಅವರಣದಲ್ಲಿ ಕೆಲ ಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.

ಈ ಸುದ್ದಿ ಓದಿದ್ದೀರಾ? : ದಕ್ಷಿಣ ಕನ್ನಡ | ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಸ್ಥಳೀಯರೇ ಕೊಲೆಗಾರರು ಎಂದ ಆರಗ ಜ್ಞಾನೇಂದ್ರ

ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಸಿಟಿ ಸೆಂಟರ್ ಮಾಲ್ ಮುಂದೆ ಧರಣಿ ನಡೆಸಿ, ಆಸಿಫ್ ಮತ್ತು ಆತನ ಸಂಗಡಿಗರನ್ನು ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು. ಅವರನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಮುಷ್ಕರ ಹಿಂಪಡೆಯಲಾಗಿತ್ತು. 

ಘಟನೆಯ ಹಿನ್ನೆಲೆಯಲ್ಲಿ ಆಸೀಫ್ ವಿರುದ್ಧ ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೂರು ದಾಖಲಿಸಿಕೊಂಡಿದ್ದ ದೊಡ್ಡಪೇಟೆ ಠಾಣೆಯ ಪೋಲಿಸರು‌, ಅವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್