ಶಿವಮೊಗ್ಗ | ನಿಷೇಧಿತ ಸಂಘಟನೆ ಜೊತೆ ನಂಟು ಆರೋಪ: ಇಬ್ಬರ ಬಂಧನ

  • ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ
  • ಸೆ.29ರವರೆಗೆ ಶಂಕಿತರು ಪೊಲೀಸರ ವಶಕ್ಕೆ

ನಿಷೇಧಿತ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದರು. ಆದರೆ, ಒಬ್ಬ ತಪ್ಪಿಸಿಕೊಂಡಿದ್ದಾನೆ. 

ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆಯ ಶಾರೀಕ್‌ ಎಂಬಾತನ ಸ್ನೇಹಿತರಾದ ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ (21) ಎಂಬುವವರನ್ನು ಬಂಧಿಸಲಾಗಿದೆ. ಶಾರೀಕ್‌ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

ಈ ಕುರಿತು ಈ ದಿನ.ಕಾಮ್‌ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದಾಗ, “ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು ಹೊಂದಿರುವ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಸೆಪ್ಟೆಂಬರ್ 19ರಂದು ಇವರನ್ನು ಬಂಧಿಸಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತರ ವಿಚಾರಣೆ ನಡೆಸಲಾಗುತ್ತಿದ್ದು, ಶಾಕೀರ್‌ ಮೇಲೂ ಎಫ್‌ಐಆರ್‌ ದಾಖಲಾಗಿದೆ” ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. 

“ಈ ಹಿಂದೆ ಪ್ರೇಮ್ ಸಿಂಗ್ ಇರಿತ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗಳ ಮೊಬೈಲ್‌ಗಳಲ್ಲಿ ಕೆಲವು ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಕೆಲವು ವ್ಯಕ್ತಿಗಳ ಮಾಹಿತಿ ದೊರಕಿತ್ತು. ಈ ಹಿನ್ನೆಲೆ ವಿಶೇಷ ಪೊಲೀಸ್ ತನಿಖಾ ತಂಡ‌ ಕಾರ್ಯಾಚರಣೆ ಆರಂಭಿಸಿತ್ತು. ಆ ವೇಳೆ,ಮೂವರ ಸುಳಿವು ಸಿಕ್ಕಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಶಾರೀಕ್‌ ಎಂಬಾತನಿಗಾಗಿ ಶೋಧ ಕಾರ್ಯ ನಡಯುತ್ತಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ರಸ್ತೆ ದುರಸ್ಥಿಗೊಳಿಸುವಂತೆ ಸ್ಥಳೀಯ ನಿವಾಸಿಗಳ ಒತ್ತಾಯ

ಬಂಧಿತರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆ.29ರವರೆಗೆ ಶಂಕಿತರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180