ಶಿರಸಿ| ಪಾದಯಾತ್ರೆ ದಿನವೇ ಅರಣ್ಯಾಧಿಕಾರಿಗಳ ದೌರ್ಜನ್ಯ: ಬುಡಕಟ್ಟು ಸಮುದಾಯದ ಗುಡಿಸಲು ನೆಲಸಮ

ಶಿರಸಿ ಹಚ್ಚಟ್ಟಿ ಗ್ರಾಮ
  • ಅರಣ್ಯವಾಸಿಗಳ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ ಮತ್ತೊಂದು ಪ್ರಕರಣ
  • ನೆಲೆ ಕಳೆದುಕೊಂಡು ಬೀದಿಗೆ ಬಿದ್ದ ಬುಡಕಟ್ಟು ಕುಟುಂಬ: ಕಣ್ಣೀರಿಟ್ಟ ಯುವತಿ

ಅರಣ್ಯಭೂಮಿಯಲ್ಲಿ ನೆಲೆ ಕಂಡುಕೊಂಡು ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ಅರಣ್ಯವಾಸಿ ಬುಡಕಟ್ಟು ಸಮುದಾಯದವರ ಗುಡಿಸಲು ನೆಲಸಮ ಮಾಡಿದ ಅರಣ್ಯ ಇಲಾಖೆ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಟ್ಟಿ ಗ್ರಾಮದ ಕೃಷ್ಣ ಕೆರಿಯ ಮರಾಠಿ ಎಂಬುವ ಅರಣ್ಯವಾಸಿಯ ಗುಡಿಸಲನ್ನು ತೆರವು ಮಾಡಲಾಗಿದ್ದು, ಮೂರು ಹೆಣ್ಣು ಮಕ್ಕಳಿರುವ ಕುಟುಂಬ ಈಗ ಅಕ್ಷರಶಃ ಬೀದಿಗೆ ಬಿದ್ದಿದೆ.

Eedina App

ಅರಣ್ಯ ಇಲಾಖೆ ಸಿಬ್ಬಂದಿಗಳ ಕಿರುಕುಳ ಖಂಡಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ಸಿದ್ದಾಪುರದ ಬಿಳಗಿಯ ಮಾರಿಕಾಂಬೆ ದೇವಾಲಯದಿಂದ ಪಾದಯಾತ್ರೆ ನಡೆದ ದಿನವೇ ಅರಣ್ಯವಾಸಿ ಕೃಷ್ಣ ಕೆರಿಯ ಮರಾಠಿ ಅವರ ಗುಡಿಸಲನ್ನು ನೆಲಸಮಮಾಡಲಾಗಿದೆ.

ಈ ಬಗ್ಗೆ ಸಂತ್ರಸ್ತ ಕುಟುಂಬದ ಯುವತಿ ಈದಿನ.ಕಾಮ್‌ ಜೊತೆ ಮಾತನಾಡಿ, "ಹಲವು ವರ್ಷಗಳಿಂದ ಇದೇ ಜಾಗದಲ್ಲಿ ನಾವು ವಾಸಿಸುತ್ತಿದ್ದು, ಮನೆಯಲ್ಲಿ ಐವರಿದ್ದೇವೆ. ಅರಣ್ಯ ಇಲಾಖೆ ಸಿಬ್ಬಂದಿ ಮೂರನೇ ಸಲ ನಮ್ಮ ಗುಡಿಸಲನ್ನು ಕಿತ್ತು ಹಾಕಿದ್ದಾರೆ. ಈಗ ಉಳಿಯಲು ಬೇರೆ ಜಾಗ ಇಲ್ಲ. ಮೂವರು ಹೆಣ್ಣುಮಕ್ಕಳಿದ್ದು, ಬೀದಿಗೆ ಬಿದ್ದಿದ್ದೇವೆ. ತಾಯಿ ಒಬ್ಬರೇ ಕೂಲಿ ಮಾಡುತ್ತಿದ್ದು, ತಂದೆಗೆ ಅಷ್ಟೇನೂ ತಿಳಿಯುವುದಿಲ್ಲ. ದಯವಿಟ್ಟು ನಮಗೂ ಬದುಕಲು ಬಿಡಿ" ಎಂದು ಕಣ್ಣೀರಿಟ್ಟರು.

AV Eye Hospital ad

ಘಟನೆ ಖಂಡಿಸಿ ಜಿಲ್ಲಾ ಕುಂಬ್ರಿ ಮರಾಠಿ ಸಂಘದ ಅಧ್ಯಕ್ಷ ದೇವರಾಜ್‌ ಮರಾಠಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಕಿರಣ್‌ ಮರಾಠಿ ಮಾತನಾಡಿ, "ಕೃಷ್ಣ ಮರಾಠಿ ಮನೆ ನೆಲಸಮ ಮಾಡಿ ಇಡೀ ಕುಟುಂಬ ನಿರಾಶ್ರಿತಗೊಂಡಿದೆ. ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಈ ಅಮಾನವೀಯ ಕೃತ್ಯಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಕುಟುಂಬಕ್ಕೆ ನೆಲೆ ಕಲ್ಪಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿರಸಿ ಅರಣ್ಯವಾಸಿಗಳ ಹೋರಾಟ | ಅರಣ್ಯಾಧಿಕಾರಿಗಳ ಕಿರುಕುಳದ ವಿರುದ್ಧ ಸಿಡಿದೆದ್ದ ಜನ; ಬೃಹತ್‌ ಪಾದಯಾತ್ರೆ

ಮೂಲ ಗುಡಿಸಲು ಹಾಗೂ ನೆಲಸಮಗೊಂಡ ಸ್ಥಳ
ಮೂಲ ಗುಡಿಸಲು ಹಾಗೂ ನೆಲಸಮವಾದ ಬಳಿಕ ಆ ಸ್ಥಳ

ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, "ಸಭಾಧ್ಯಕ್ಷರ ಕ್ಷೇತ್ರದಲ್ಲಿ ಪದೇಪದೆ ಅರಣ್ಯವಾಸಿಗಳ ಮೇಲೆ ಕಿರುಕುಳ, ದೌರ್ಜನ್ಯ ಹಾಗೂ ಹಿಂಸೆ ಜರಗುತ್ತಿರುವುದು ಖಂಡನೀಯ. ಈ ಪ್ರಕರಣಗಳ ಕುರಿತು ಸೂಕ್ತ ತನಿಖೆಗೆ ಒಳಪಡಿಸಿ, ಕಾನೂನುಬಾಹಿರ ಕೃತ್ಯವೆಸಗಿದ ಅರಣ್ಯ ಸಿಬ್ಬಂದಿ ವಿರುದ್ಧ ದಿಟ್ಟ ಕ್ರಮ ಜರುಗಿಸುವಂತೆ" ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app