
- 32 ವರ್ಷಗಳ ನಿರಂತರ ಹೋರಾಟ; ಆತಂಕದಲ್ಲಿ ಅರಣ್ಯವಾಸಿಗಳು
- ಅರಣ್ಯ ಇಲಾಖೆ ಸಿಬ್ಬಂದಿಗಳ ಕಿರುಕುಳಕ್ಕಿಲ್ಲ ಬ್ರೇಕ್; ಬೀದಿಗೆ ಬದುಕು
ಶಿರಸಿ, ಸಿದ್ದಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಗ್ರ ಸಮಸ್ಯೆಗಳನ್ನು ಕ್ರೂಢೀಕರಿಸಿ ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದು, ಡಿ.11-12 ರಂದು ರಾಜ್ಯಮಟ್ಟದ ಬೃಹತ್ ರ್ಯಾಲಿ ಆಯೋಜಿಸಲಾಗಿದೆ.
ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದ ಬಸವೇಶ್ವರಿ ದೇವಾಲಯದ ಆವರಣದಲ್ಲಿ ಸಭೆ ನಡೆಸಿದ ಅರಣ್ಯವಾಸಿಗಳು, ಡಿ.11-12ರಂದು ಶಿರಸಿಯಲ್ಲಿ ಈ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು 'ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ' ಅಧ್ಯಕ್ಷ ರವೀಂದ್ರ ನಾಯ್ಕ್ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
"ಅರಣ್ಯವಾಸಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ನೀಡುವಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ವಿಫಲವಾಗಿದ್ದು, ಸುಮಾರು ಐದು ಲಕ್ಷ ಅರಣ್ಯವಾಸಿಗಳು ಅತಂತ್ರರಾಗುವ ಆತಂಕ ಇದೆ. ಹಾಗಾಗಿ ಹಲವು ರೀತಿಯಲ್ಲಿ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಲಾಗುತ್ತಿದೆ" ಎಂದು ಹೇಳಿದರು.
"ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 15 ವರ್ಷಗಳಾದರೂ ಅದನ್ನು ಅನುಷ್ಟಾನಗೊಳಿಸಲು ಸರ್ಕಾರ, ಅಧಿಕಾರಿಗಳು ವಿಫಲರಾಗಿದ್ದು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆಯಿದೆ. ಇದರಿಂದಾಗಿ ಅರಣ್ಯವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡಲಾಗುತ್ತಿದೆ. ಅವರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಹಿಂಸೆ, ಬೆದರಿಕೆ, ಗುಡಿಸಲುಗಳನ್ನು ನಾಶ ಮಾಡುತ್ತಿದ್ದು ಬದುಕು ಬೀದಿಗೆ ಬಿದ್ದಿದೆ" ಎಂದು ನೋವು ತೋಡಿಕೊಂಡರು.
"ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಪರ ಅಪೀಡವಿಟ್ ಸಲ್ಲಿಸಲು ಶಿಫಾರಸ್ಸು ಮಾಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಸರ್ಕಾರದಿಂದಲೇ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆಗೆ ನಿರ್ದೇಶನ ಮಾಡಿ, ಕಾಲಕಾಲಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದ್ದು, ಅರಣ್ಯವಾಸಿಗಳ ಬದುಕು ಅಕ್ಷರಶಃ ತ್ರಿಶಂಕು ಸ್ಥಿತಿಯಲ್ಲಿದೆ" ಎಂದು ರವೀಂದ್ರ ನಾಯ್ಕ್ ಬೇಸರ ವ್ಯಕ್ತಪಡಿಸಿದರು.
ಹೋರಾಟದ ಹಿನ್ನೆಲೆ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಸೇರಿದಂತೆ ಹಲವೆಡೆ ಸುಮಾರು 85,757 ಅರಣ್ಯವಾಸಿ ಕುಟುಂಬಗಳು 32 ವರ್ಷಗಳಿಂದ ಅರಣ್ಯಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿವೆ. ಕಾನೂನಿನ ನಿಯಮಗಳನ್ನು ಅನುಸರಿಸದೆ, ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ನೀಡುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತಿದೆ. ಇದುವರೆಗೂ, 69,773 ಕುಟುಂಬಗಳ ಅರ್ಜಿಗಳು ತಿರಸ್ಕೃತವಾಗಿದ್ದು, ಅರಣ್ಯವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ; ವರದಿ ಕೇಳಿದ ಅಧಿಕಾರಿ; ಆದೇಶ ಕೈಬಿಡುವಂತೆ ಹೋರಾಟಗಾರರ ಆಗ್ರಹ
ಅಲ್ಲದೆ, ಅರಣ್ಯಭೂಮಿಯಲ್ಲಿ ಸಾಗುವಳಿ ನಡೆಸುತ್ತಾ ಬಂದಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ ಅರಣ್ಯೀಕರಣ ಮಾಡುವಂತೆ ಸುಪ್ರೀಂಕೋರ್ಟ್ನಲ್ಲಿ ಪರಿಸರವಾದಿ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಆ ಕುರಿತ ವಿಚಾರಣೆ ಹಂತಿಮ ಹಂತದಲ್ಲಿದ್ದು, ಕಾನೂನಾತ್ಮಕವಾಗಿ ನ್ಯಾಯ ಸಿಗುವ ಭರವಸೆಯಲ್ಲಿದ್ದಾರೆ. ಆದರೆ, ನಿರಂತರವಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಸರ್ಕಾರ ತಮ್ಮನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಅನುಸರಿಸುತ್ತಿರುವುದರಿಂದ ತಮ್ಮ ಪ್ರತಿರೋಧವನ್ನು ಬೃಹತ್ ರ್ಯಾಲಿ ಮೂಲಕ ಹೊರ ಹಾಕಲು ಸಜ್ಜಾಗಿದ್ದಾರೆ.
ಸಭೆಯಲ್ಲಿ ವೇದಿಕೆ ಮುಖಂಡರಾದ ಕೃಷ್ಣಪ್ಪ ನಾಯ್ಕ್, ಜಯಂತ್ ನಾಯ್ಕ್ ಹೆಜನಿ, ಲಾರ್ಲ ಲೂಯಿಸ್ ಮಾವಿನಗುಂಡಿ, ಜಗದೀಶ್ ನಾಯ್ಕ್ ಚಂದ್ರಘಟಕಿ, ರಾಮಕೃಷ್ಣ ನಾಯ್ಕ ಹಲಗೇರಿ, ವಿನಾಯಕ ನಾಯ್ಕ ಸೇರಿದಂತೆ ಹಲವರಿದ್ದರು.