ಬಿಸಿಯೂಟ ಯೋಜನೆಗೆ ಸಿದ್ಧಗಂಗಾ ಶ್ರೀ ಹೆಸರು: ಸಿಎಂ ಬೊಮ್ಮಾಯಿ ಘೋಷಣೆ

bommai
  • ಬಿಸಿಯೂಟ ಯೋಜನೆಗೆ ಸಿದ್ಧಗಂಗಾ ಶ್ರೀ ಹೆಸರು ಘೋಷಣೆ
  • ಏಪ್ರಿಲ್‌ 1 ದಾಸೋಹ ದಿನವಾಗಿ ಆಚರಣೆಗೆ ನಿರ್ಧಾರ
  • ʼನಡೆದಾಡುವ ದೇವರ ಬಸವ ಭಾರತʼ ಗುರುವಂದನಾ ಕಾರ್ಯಕ್ರಮ

ಈಗಾಗಲೇ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಡಾ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕಾರಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿ ಅವರ 115ನೇ ಹುಟ್ಟುಹಬ್ಬದ ಅಂಗವಾಗಿ ಮಠದಲ್ಲಿ ಹಮ್ಮಿಕೊಂಡಿರುವ ʼನಡೆದಾಡುವ ದೇವರ ಬಸವ ಭಾರತʼ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಷ್ಟದಲ್ಲಿರುವವರಿಗೆ ಶಿವಕುಮಾರ ಸ್ವಾಮೀಜಿಯವರು ಅನ್ನ ಮತ್ತು ಜ್ಞಾನ ದಾಸೋಹ ಮಾಡಿ ಜಗತ್ತಿನಲ್ಲೇ ಅತಿದೊಡ್ಡ ದಾಸೋಹಿಯಾಗಿದ್ದರು. ಅವರ ಅಂತಹ ದಾಸೋಹದ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇನ್ನು ಮುಂದೆ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರು ಇಡಲು ನಿರ್ಧರಿಸಲಾಗಿದೆ. ಆ ಸಂಬಂಧ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಅಲ್ಲದೆ, ಸ್ವಾಮೀಜಿಗಳ ಹುಟ್ಟುಹುಬ್ಬದ ಆಚರಣೆಯ ಅಂಗವಾಗಿ ಪ್ರತಿವರ್ಷದ ಏಪ್ರಿಲ್‌ ಒಂದನ್ನು ʼದಾಸೋಹ ದಿನʼ ಎಂದು ಆಚರಿಸಲಾಗುವುದು. ಬಡವರು, ನಿರ್ಗತಿಕರ ಹಿತಕ್ಕಾಗಿ ಜೀವಮಾನವನ್ನೇ ಮುಡಿಪಾಗಿಟ್ಟಿದ್ದ ಶ್ರೀಗಳ ದಾಸೋಹ ಸೇವೆಯ ಗೌರವಾರ್ಥವಾಗಿ ಅವರ ಹುಟ್ಟುಹಬ್ಬವನ್ನು ದಾಸೋಹ ದಿನವಾಗಿ ಆಚರಿಸಲಾಗುವುದು ಎಂದೂ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದರು.

AV Eye Hospital ad

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಮತ್ತಿತರ ಗಣ್ಯರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app