
- ಸಿದ್ದರಾಮಯ್ಯ ಲಂಚ ಪ್ರಕರಣ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವೆ : ಬಿಜೆಪಿ ಮುಖಂಡ ರಮೇಶ
- ವಿವೇಕ್ರನ್ನು ಬಿಟಿಸಿ ಸದಸ್ಯರನ್ನಾಗಿ ಮಾಡಿದ್ದು ನಿಜ, ಆದರೆ ಸಾಲಕ್ಕೆ ಸಂಬಂಧ ಇಲ್ಲ : ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚೆಕ್ ಮೂಲಕ ₹1.30 ಕೋಟಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ದಕ್ಷಿಣ ಬೆಂಗಳೂರು ಘಟಕದ ಮುಖಂಡ ಎನ್ ಆರ್ ರಮೇಶ್ ಮತ್ತೊಂದು ಗುರುತರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ದಾಖಲೆ ಸಮೇತ ಎನ್ ಆರ್ ರಮೇಶ್ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.
“ಕಿಂಗ್ಸ್ ಕೋರ್ಟ್ಸ್ನ ಎಲ್ ವಿವೇಕಾನಂದ ಎನ್ನುವವರಿಂದ ಸಿದ್ದರಾಮಯ್ಯ ಅವರು ₹1.30 ಕೋಟಿ ಲಂಚ ಪಡೆದು, 2014ರಲ್ಲಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಉಸ್ತುವಾರಿ ಹುದ್ದೆಗೆ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಿಸಿದ್ದರು” ಎಂದು ದೂರಿದ್ದಾರೆ.
“ಸಿದ್ದರಾಮಯ್ಯ ಅವರ ಈ ಲಂಚ ಪ್ರಕರಣ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡುವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ಸಲ್ಲಿಸುವೆ” ಎಂದು ತಿಳಿಸಿದ್ದಾರೆ.
“ಸ್ವತಃ ಸಿದ್ದರಾಮಯ್ಯ ಅವರು ವಿವೇಕಾನಂದರಿಂದ ಸಾಲ ಪಡೆದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದಾರೆ. ಆದರೆ ಅದು ಸಾಲವಾಗಿರಲಿಲ್ಲ. ಕೇಂದ್ರ ಗೃಹ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಹುದ್ದೆ ನೀಡುವುದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್ ಪಡೆಯುವಂತಿಲ್ಲ. ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು” ಎಂದಿದ್ದಾರೆ.
ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದೆ : ಸಿದ್ದರಾಮಯ್ಯ
ಎನ್ ಆರ್ ರಮೇಶ್ ಆರೋಪ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು, “ವಿವೇಕ್ ಅವರನ್ನು ಬಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ” ಎಂದಿದ್ದಾರೆ.
“ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ ನನ್ನ 40 ವರ್ಷಗಳ ಗೆಳೆಯನಿಂದ ₹1.5 ಕೋಟಿ ಸಾಲ ಪಡೆದಿದ್ದು ನಿಜ. ಸಾಲ ಪಡೆಯುವುದು ಅಪರಾಧವಾ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು @BSBommai ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. 14/19#KillerBJP
— Siddaramaiah (@siddaramaiah) October 30, 2022
ಈ ಸುದ್ದಿ ಓದಿದ್ದೀರಾ? ರಾಜ್ಯ ಸರ್ಕಾರಕ್ಕೆ ಮತ್ತೊಂದು ಪರ್ಸೆಂಟೇಜ್ ಕಂಟಕ: ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಗುತ್ತಿಗೆದಾರ..!
ಡಿನೋಟಿಫಿಕೇಷನ್ ಆರೋಪ ಮಾಡಿದ್ದ ರಮೇಶ್
ಸರ್ಕಾರಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ವಿರುದ್ಧ ಎನ್ ಆರ್ ರಮೇಶ್ ಅಕ್ಟೋಬರ್ 12ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು.
“ಖಾಸಗಿ ಬಿಲ್ಡರ್ ಅಶೋಕ್ ಧಾರಿವಾಲ್ ಎಂಬುವವರಿಗೆ ಕಾನೂನುಬಾಹಿರವಾಗಿ ಭೂಮಿಯನ್ನು ಡಿ-ನೊಟಿಫೈ ಮಾಡಿಕೊಡಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ಕಸಬಾ ಹೋಬಳಿಯ ಸಿದ್ದಾಪುರದ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಭೂಮಿಯನ್ನು ಅವರು ಖರೀದಿಸಿದ್ದರು” ಎಂದು ಆರೋಪಿಸಿದ್ದರು.