
- ಆಧಾರರಹಿತ ಸುಳ್ಳು ಪ್ರಚಾರಗಳಿಂದಲೇ ಅಸ್ತಿತ್ವ ಉಳಿಸಿಕೊಂಡಿರುವ ಬಿಜೆಪಿ: ಟೀಕೆ
- ʼಸಂಘ ಪರಿವಾರ ನನ್ನ ಬಗ್ಗೆ ಸಾವಿರದೊಂದು ಸುಳ್ಳುಗಳನ್ನು ಪ್ರಚಾರ ಮಾಡಿದೆʼ
ʼಸುಳ್ಳುʼ ಎಂಬುದು ಬಿಜೆಪಿ ಮತ್ತು ಸಂಘ ಪರಿವಾರದವರ ಮನೆ ದೇವರು. ಆಧಾರರಹಿತ ಸುಳ್ಳು ಪ್ರಚಾರಗಳಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಈ ಪರಿವಾರ ನನ್ನ ವಿರುದ್ಧ ಇದುವರೆಗೂ ಸಾವಿರದೊಂದು ಸುಳ್ಳುಗಳನ್ನು ಪ್ರಚಾರ ಮಾಡಿದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಹಿಂಪಡೆದ ಪ್ರಕರಣಗಳ ವಿವರ ಬಿಡುಗಡೆ ಮಾಡಿದ್ದಾರೆ.
ಹಿಂಪಡೆದ ಪ್ರಕರಣಗಳ ವಿವರ
- ಕಬ್ಬಿನ ಬೆಳೆಗೆ ಸೂಕ್ತ ಬೆಲೆ ಹಾಗೂ ಕಲಬುರಗಿ ಹೊಸೂರ ಕಾಮಗಾರಿ ಮತ್ತು ಅಫ್ಜಲಪುರ ತಾಲ್ಲೂಕಿನ ಒಳರಸ್ತೆಗಳ ತ್ವರಿತ ಸುಧಾರಣೆ ವಿಷಯವಾಗಿ ಹೋರಾಟ ಮಾಡಿದ್ದಕ್ಕಾಗಿ ರೈತರ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 15/11 ನ್ನು ಹಿಂಪಡೆಯಲಾಗಿದೆ.
- ದಿವಂಗತ ಕೆ.ಎಚ್.ಪಾಟೀಲ್ ಪುತ್ಥಳಿಗೆ ದುಷ್ಕರ್ಮಿಗಳು ಅಪಮಾನಗೊಳಿಸಿದ ಸಂಬಂಧ ನಡೆದ ಗಲಭೆಗೆ ಸಂಬಂಧಪಟ್ಟಂತೆ ಗದಗ ಜಿಲ್ಲೆಯ ಗದಗ ಗ್ರಾಮೀಣ ಮತ್ತು ಶಹರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಐದು ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.
- ಪತ್ರಕರ್ತ ನವೀನ್ ಸೂರಿಂಜೆ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 229/2012. ಸಂಘ ಪರಿವಾರದವರು ಮಂಗಳೂರು ಹೋಂ ಸ್ಟೇ ಮೇಲೆ ದಾಳಿ ಮಾಡಿ ನಡೆಸಿದ ಹಲ್ಲೆಯನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತ ನವೀನ್ ಸೂರಿಂಜೆಯನ್ನು ಆರೋಪಿಯನ್ನಾಗಿಸಿದ್ದ ಪ್ರಕರಣ ಹಿಂಪಡೆಯಲಾಗಿದೆ.
- ಹೊನ್ನಾಳಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ರೈತರು ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರತಿಭಟಿಸಿದ ಸಂಬಂಧ ನ್ಯಾಮತಿ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ 148/2009, 149/2009 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ನಲ್ಲಿ ವಜಾಗೊಂಡ ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಮುಷ್ಕರ ಮಾಡಿದ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 26/2006 ನ್ನು ಹಿಂಪಡೆಯಲಾಗಿದೆ.
- ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪೌರ ಕಾರ್ಮಿಕರ ಮೇಲೆ ಹೂಡಲಾಗಿದ್ದ ಮೊಕದ್ದಮೆ ಸಂಖ್ಯೆ 44/2009, 247/2009, 248/2009 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಎಚ್.ಟಿ.ಕೃಷ್ಣೇಗೌಡ ಹಾಗೂ ಇತರ 25 ಜನರ ವಿರುದ್ಧ; ಅರಣ್ಯ ಇಲಾಖೆ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಅರಣ್ಯ ಇಲಾಖೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೋಗಿದ್ದು ಮತ್ತು ರಸ್ತೆ ತಡೆ ನಡೆಸಿದ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 15/2010 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹಸಿರು ಸೇನೆ ಮತ್ತು ರೈತ ಕೂಲಿ ಕಾರ್ಮಿಕರ ಮೇಲೆ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 79/2011 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಕೋಟಾ ಪೊಲೀಸ್ ಠಾಣೆಯಲ್ಲಿ ಎರಡು ಕೋಮುಗಳ ನಡುವಿನ ಗಲಾಟೆ, ಗಲಭೆ ಸಂಬಂಧ ದಾಖಲಿಸಲಾಗಿದ್ದ ಮೊಕದ್ದಮೆ ಸಂಖ್ಯೆ 95/2006 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ 2012ರ ಜುಲೈ 30ರಂದು ಅಂದಿನ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಡಿಎಸ್ಎಸ್ ಮತ್ತು ಡಿಎಸ್ಎಫ್ ಕಾರ್ಯಕರ್ತರ ಮೇಲೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 207/2012ನ್ನು ಹಿಂದಕ್ಕೆ ಪಡೆಯಲಾಗಿದೆ.
- ಉಡುಪಿ ಕೃಷ್ಣ ಮಠದಲ್ಲಿ ಪಂಕ್ತಿ ಬೇಧ ಮಾಡುವುದನ್ನು ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಮಡೆ ಸ್ನಾನವೆಂಬ ಅನಿಷ್ಟ ಪದ್ಧತಿ ಆಚರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 456/2012ನ್ನು ಹಿಂದಕ್ಕೆ ಪಡೆಯಲಾಗಿದೆ.
- 24/10/2011ರಂದು ಕೋಲಾರ ಜಿಲ್ಲೆಯ ರಾಬರ್ಟ್ಸನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಮ್ಯಾನ್ಹೋಲ್ ಸ್ವಚ್ಚಗೊಳಿಸುವಾಗ 3 ಮಂದಿ ಕಾರ್ಮಿಕರು ಉಸಿರು ಕಟ್ಟಿ ಸತ್ತಿದ್ದರು. ಇದನ್ನು ಪ್ರತಿಭಟಿಸಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರಕ್ಕೆ ಆಗ್ರಹಿಸಿದವರ ಮೇಲೆ ದಾಖಲಿಸಲಾಗಿದ್ದ ಮೊಕದ್ದಮೆ ಸಂಖ್ಯೆ 168/2011 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಈರುಳ್ಳಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತ ಕಾರ್ಯಕರ್ತರ ಮೇಲೆ ಚಾಮರಾಜನಗರ ಜಿಲ್ಲೆ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 57/2012 ನ್ನು ಹಿಂದಕ್ಕೆ ಪಡೆಯಲಾಗಿದೆ.
- ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆಯದೆ ಪ್ರತಿಭಟಿಸಿದ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 145/201ನ್ನು ಹಿಂದಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೆ ಕಾರಣವಾದ ಸಂಗತಿಗಳನ್ನು ಸರ್ಕಾರ ಒದಗಿಸಿಲ್ಲ.
- 2010ರಲ್ಲಿ ತಸ್ಲೀಮಾ ನಸ್ರೀಂರವರ ಫರ್ದಾ ಏ ಫರ್ದಾ ಲೇಖನ ತರ್ಜುಮೆಗೊಂಡು ಕನ್ನಡ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸಂಬಂಧ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ.
- ಸರ್ಕಾರಿ ಆದೇಶ ಸಂಖ್ಯೆ ಒಇ 14 ಮೊಹಿಬ 2012, ಬೆಂಗಳೂರು, ದಿನಾಂಕ 15/06/2015. ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿದ್ದ 54 ಪ್ರಕರಣ, ತುಂಗಾನಗರ ಠಾಣೆಯಲ್ಲಿ ದಾಖಲಾಗಿದ್ದ 5 ಮತ್ತು ಕೋಟೆ ಠಾಣೆಯಲ್ಲಿ ದಾಖಲಾಗಿದ್ದ 45, ವಿನೋಬನಗರ ಠಾಣೆಯಲ್ಲಿ ದಾಖಲಾಗಿದ್ದ 2, ಜಯನಗರ ಠಾಣೆಯಲ್ಲಿ ದಾಖಲಾಗಿದ್ದ 1 ಪ್ರಕರಣವನ್ನು ಹಿಂದಕ್ಕೆ ಪಡೆಯಲಾಯಿತು. ಹಾಗೆಯೇ ಹಾಸನ ಜಿಲ್ಲೆಯ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 9 ಮತ್ತು ಹಾಸನ ಬಡಾವಣೆ ಠಾಣೆಯಲ್ಲಿ ದಾಖಲಾಗಿದ್ದ 12 ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ.