ರಾಗಿ ಖರೀದಿ ನಿರ್ಬಂಧ ತೆರವಿಗೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು: ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ವಿಧಿಸಿರುವ ನಿರ್ಬಂಧ ತೆಗೆದು ಹಾಕಬೇಕು, ರೈತರು ಬೆಳೆದು ತರುವಷ್ಟೂ ಬೆಳೆಯನ್ನು ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

2.10 ಲಕ್ಷ ಟನ್ ರಾಗಿಯನ್ನಷ್ಟೇ ಖರೀದಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿತ್ತು. ಈ ಸೂಚನೆಯನ್ನಾಧರಿಸಿ ರಾಜ್ಯ ಸರ್ಕಾರ ನಾನಾ ನಿಬಂಧನೆಗಳೊಂದಿಗೆ ಜ.1ರಿಂದ 31 ರ ವರೆಗೆ ಖರೀದಿ ಮಾಡಿದೆ. ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯಡಿ ರೈತರೊಬ್ಬರಿಂದ 20 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

“ರಾಜ್ಯದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಭಾಗದಲ್ಲಿ ಅತಿ ಹೆಚ್ಚು ರಾಗಿ ಬೆಳೆಯಲಾಗುತ್ತದೆ. ಕೃಷಿ ಇಲಾಖೆಯ ವರದಿಯಂತೆ ರಾಜ್ಯದಲ್ಲಿ 19.35 ಲಕ್ಷ ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ. ಒಂದು ಎಕರೆಯಲ್ಲಿ1 ಟನ್ ರಾಗಿ ಬೆಳೆಯಲಾಗಿದೆ ಎಂದು ಇಲಾಖೆ ಅಂದಾಜು ಮಾಡಿದೆ. ಇದರನ್ವಯ 19.3 ಲಕ್ಷ ಟನ್ ರಾಗಿ ಬೆಳೆಯಲಾಗಿದೆ. ಇದರಲ್ಲಿ 4-5 ಲಕ್ಷ ಟನ್ ಅಕಾಲಿಕ ಮಳೆಯ ಕಾರಣದಿಂದ ಹಾನಿಗೀಡಾಗಿದೆ. ಉಳಿದಂತೆ ರೈತರು 15 ಲಕ್ಷ ಟನ್ ರಾಗಿ ಬೆಳೆದಿದ್ದಾರೆ. ಇದನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಕಾಯುತ್ತಿದ್ದಾರೆ. ಸರ್ಕಾರ ತನ್ನ ನಿರ್ಬಂಧದ ಆದೇಶ ಕೈ ಬಿಟ್ಟು, ರೈತರು ಎಷ್ಟು ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರುತ್ತಾರೋ ಅಷ್ಟನ್ನೂ ಖರೀದಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ವರ್ಷ 4.7 ಟನ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿತ್ತು. ಈಗ ಅದನ್ನು ಕಡಿಮೆ ಮಾಡಿರುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆಯನ್ನು ಮತ್ತಷ್ಟು ಏರಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ 1 ಕ್ವಿಂಟಾಲ್ ರಾಗಿಯ ಬೆಂಬಲ ಬೆಲೆ ರೂ. 82 ಅಷ್ಟೇ ಏರಿಕೆಯಾಗಿದೆ. ಈ ವರ್ಷ 1,250 ರಿಂದ ರೂ. 300 ವರೆಗೂ ಬೆಲೆ ನಿಗದಿ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

ಖರೀದಿ ಕೇಂದ್ರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಮತ್ತಿತರ ಬೆಳೆಗಳಿಗೆ ಬೆಲೆ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿ ರಾಗಿಗೆ 1800 ರೂ. ನಿಂದ 2180 ರೂ. ಬೆಲೆ ಇದೆ. ಇದರಿಂದ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ಅಂದಾಜು 1377 ರೂ. ನಷ್ಟವಾಗುತ್ತದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಪದೆಪದೇ ಹೇಳಿಕೆ ನೀಡುವ ಸರ್ಕಾರ ರೈತರ ವೆಚ್ಚ ಮಾಡಿದ ಬೆಲೆಗೆ ರೈತರ ಬೆಳೆ ಖರೀದಿಸುತ್ತಿಲ್ಲ ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಶೀಘ್ರ ಬೆಂಬಲ ಬೆಲೆ ಏರಿಕೆ ಮಾಡಬೇಕು, ರೈತರ ಅಷ್ಟೂ ಬೆಳೆ ಖರೀದಿಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿ, ಪ್ರಧಾನಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್