ಸಿದ್ದರಾಮಯ್ಯ ಅವರನ್ನು ಮತ್ತೆ ರಾಜ್ಯ ರಾಜಕಾರಣದ ಕೇಂದ್ರಕ್ಕೆ ತಂದು ನಿಲ್ಲಿಸಿದ ಜನಾಭಿಮಾನ!

ಸುದೀರ್ಘ 44 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಸಿದ್ದರಾಮಯ್ಯ ಅವರು ಸದ್ಯದ ಕಾಲಘಟ್ಟದಲ್ಲಿ ಜನನಾಯಕ (ಮಾಸ್ ಲೀಡರ್) ಪರಂಪರೆಯ ಕೊನೆ ಕೊಂಡಿಯಂತೆ ಕಾಣುತ್ತಿದ್ದಾರೆ. ರಾಜಕೀಯ ಪಂಡಿತರು, ಪ್ರತಿಪಕ್ಷಗಳಷ್ಟೇ ಅಲ್ಲದೆ, ಸ್ವತಃ ಕಾರ್ಯಕ್ರಮದ ಆಯೋಜಕರ ಅಂದಾಜು ಮೀರಿ ಹರಿದುಬಂದ ಅಪಾರ ಜನಸಾಗರ, ಸಿದ್ದರಾಮಯ್ಯ ಅವರನ್ನು ಮತ್ತೆ ರಾಜ್ಯ ರಾಜಕಾರಣದ ಕೇಂದ್ರಕ್ಕೆ ತಂದು ನಿಲ್ಲಿಸಿದೆ.
Siddaramaiah

ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಕುರಿತು ಕೆಲವು ಸ್ವಪಕ್ಷೀಯರು, ಪ್ರತಿಪಕ್ಷಗಳ ನಾಯಕರು ಹಾಗೂ ಕೆಲವು ಮಾಧ್ಯಮಗಳು ನಡೆಸಿದ್ದ ಸರಣಿ ಟೀಕೆ, ವ್ಯಂಗ್ಯ, ಅಪಪ್ರಚಾರಗಳೆಲ್ಲವೂ ಸಿದ್ದರಾಮಯ್ಯ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಅಭಿಮಾನದ ಹೊಳೆಯಲ್ಲಿ ಕೊಚ್ಚಿಹೋಗಿವೆ.

ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಈವರೆಗೂ ಯಾವುದೇ ರಾಜಕೀಯ ನಾಯಕನಿಗೆ ಸಿಗದ ಗೌರವ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಂದಿದೆ!

ಸುದೀರ್ಘ 44 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಸಿದ್ದರಾಮಯ್ಯ ಅವರು ಸದ್ಯದ ಕಾಲಘಟ್ಟದಲ್ಲಿ ಜನನಾಯಕ (ಮಾಸ್ ಲೀಡರ್) ಪರಂಪರೆಯ ಕೊನೆ ಕೊಂಡಿಯಂತೆ ಕಾಣುತ್ತಿದ್ದಾರೆ. 

ಶಾಮನೂರು ಶಿವಶಂಕರಪ್ಪ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಬುಧವಾರ (ಆಗಸ್ಟ್‌ 3) ಆಯೋಜಿಸಿದ್ದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ನಿರೀಕ್ಷೆಗೂ ಮೀರಿ ಯಶಸ್ಸುಕಂಡಿದೆ. ಸುಮಾರು 5-6 ಲಕ್ಷ ಜನ ಸೇರಬಹುದೆಂಬ ಅಂದಾಜಿನಲ್ಲಿ ʼಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿʼ ಇತ್ತು. ಅದಕ್ಕೆ ಬೇಕಾದ ಸಿದ್ಧತೆಯನ್ನೂ ಸಮಿತಿ ಮಾಡಿಕೊಂಡಿತ್ತು. ಬೆಣ್ಣೆನಗರಿಯತ್ತ ಮಂಗಳವಾರ ರಾತ್ರಿಯಿಂದಲೇ ಹರಿದು ಬರುತ್ತಿದ್ದ ಜನಸಾಗರ, ಬುಧವಾರದ ಬೆಳಗಾಗುತ್ತಲೇ ಲಕ್ಷ ಲಕ್ಷ ಸಂಖ್ಯೆಯಲ್ಲಿ ಲಗ್ಗೆಯಿಟ್ಟಿತು. ಪರಿಣಾಮ, ಬೆಳಿಗ್ಗೆ 9 ಗಂಟೆ ಹೊತ್ತಿಗೇ ಕಾರ್ಯಕ್ರಮದ ಮುಖ್ಯ ವೇದಿಕೆಯಿಂದ 6 ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಯಿತು.

ನಿರೀಕ್ಷೆ ಮೀರಿ ಬಂದ ಅಭಿಮಾನಿಗಳು 

224 ವಿಧಾನಸಭಾ ಕ್ಷೇತ್ರಗಳಿಂದಲೂ ಜನಸಾಗರ ಹರಿದು ಬಂದಿದ್ದು ಗಮನಾರ್ಹ. ಮುಖ್ಯ ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಐದು ಬೃಹತ್‌ ವೇದಿಕೆಗಳಲ್ಲಿ ಹಾಕಿದ್ದ 4 ಲಕ್ಷ ಆಸನಗಳೂ ಪೂರ್ಣವಾಗಿ ಭರ್ತಿಯಾಗಿದ್ದವು. ಸಿದ್ದರಾಮಯ್ಯ ಅವರು 12 ಗಂಟೆಗೆ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಒಂದೆರಡು ನಿಮಿಷಗಳ ಕಾಲ ಚಪ್ಪಾಳೆ, ಕೇಕೆ, ಸಿಳ್ಳೆಗಳೇ ಗುಂಯ್‌ಗುಟ್ಟಿದವು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯ ವೇದಿಕೆಗೆ ಆಗಮಿಸಿದ್ದು 2.35ಕ್ಕೆ. ಅಷ್ಟೊತ್ತಿಗಾಗಲೇ ಅಭಿಮಾನಿಗಳ ಬಾಯಿ ಸಿಹಿ ಮಾಡಲು ಸಿದ್ಧಪಡಿಸಿದ್ದ 6 ಲಕ್ಷ ಮೈಸೂರ್‌ ಪಾಕ್‌ ಖಾಲಿಯಾಗಿದ್ದವು. ದಾವಣಗೆರೆಯಿಂದ 8 ಕಿ.ಮೀ ಹೊರವಲಯದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿದ್ದ ಮುಖ್ಯ ವೇದಿಕೆಯಿಂದ ಎರಡೂ ಕಡೆಗೆ ತಲಾ 10-12 ಕಿ.ಮೀವರೆಗೂ ವಾಹನ ಸಂಚಾರ ಸ್ಥಗಿತವಾಗಿತ್ತು. ಒಟ್ಟು 24 ಕಿ.ಮೀ ದೂರದವರೆಗೂ ವಾಹನಗಳ ಸಮೇತ ಸುಮಾರು ಐದಾರು ಲಕ್ಷ ಜನ ರಸ್ತೆಯಲ್ಲಿಯೇ ನಿಂತಿದ್ದರು. 

Image
Siddaramaiah Fans
ಚಿತ್ರ: ಮುಸ್ತಫಾ ಅಳವಂಡಿ

ಯುವ ಸಮೂಹವೇ ಹೆಚ್ಚು

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 14 ಲಕ್ಷ ಜನ ಪಾಲ್ಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಿಖರವಾಗಿ 14 ಲಕ್ಷ ಅಂತ ಹೇಳದೇ ಇದ್ದರೂ 10 ಲಕ್ಷಕ್ಕೂ ಮೀರಿದ ಜನಸಮೂಹ ಸೇರಿದ್ದಂತೂ ನಿಜ. ಮುಖ್ಯವಾಗಿ, ಈ ಸಮಾರಂಭದಲ್ಲಿ 18-30 ವರ್ಷದೊಳಗಿನ ಯುವ ಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಗಮನಾರ್ಹ.

ಕೆಲವು ಯುವಕರು ಸಿದ್ದರಾಮಯ್ಯ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದು ಕಂಡು ಬಂತು. ಮತ್ತೆ ಕೆಲವು ಯುವಕರು ಫೇಸ್‌ ಆರ್ಟ್‌ ನಲ್ಲಿ ʼNext CM ಸಿದ್ದರಾಮಯ್ಯʼ ಎಂದು ಮುಖದ ಮೇಲೆ ಬಣ್ಣ ಬಣ್ಣದ ಅಕ್ಷರಗಳಲ್ಲಿ ಬರೆಯಿಸಿಕೊಂಡಿದ್ದು ಗಮನ ಸೆಳೆಯಿತು.

 ಡೊಳ್ಳು ಕುಣಿತ

ಬೆಳಗಾವಿ ಜಿಲ್ಲೆಯ ಅಥಣಿಯಿಂದ ಆಗಮಿಸಿದ್ದ ಕಲಾವಿದರ ʼಡೊಳ್ಳು ಕುಣಿತʼ ಆಕರ್ಷಣೀಯವಾಗಿತ್ತು. ಕುರುಬ ಸಮುದಾಯ ಗೌರವಿಸುವ ಭಂಡಾರವನ್ನು ಸಿದ್ದರಾಮಯ್ಯ ಅಭಿಮಾನಿಗಳು ಹಣೆಗೆ ಹಚ್ಚಿಕೊಂಡು ಲವಲವಿಕೆಯಿಂದ ಓಡಾಡುತ್ತಿದ್ದರು. ಸಿದ್ದರಾಮಯ್ಯ ಅವರ ವಿಧಾನಸಭಾ ಕ್ಷೇತ್ರವಾದ ಬಾದಾಮಿ ತಾಲ್ಲೂಕಿನಿಂದ ಆಗಮಿಸಿದ್ದ ಕಲಾವಿದರು ಕರಡಿ ಮಜಲು ನುಡಿಸಿದ್ದು ಗಮನ ಸೆಳೆಯಿತು.

Image
Siddaramaiah fans
ಚಿತ್ರ: ಮುಸ್ತಫಾ ಅಳವಂಡಿ

ಸಿದ್ದರಾಮಯ್ಯರ ಋಣ ತೀರಿಸಲಾಗದು!

ಯಾದಗಿರಿಯಿಂದ ಆಗಮಿಸಿದ್ದ ಯುವ ಸಮೂಹದ ಜತೆ ಈ ದಿನ.ಕಾಮ್‌ ಮಾತಿಗಿಳಿದಾಗ, “ನಮಗೆ ಒಂದು ರೂಪಾಯಿ ಕೂಡ ಯಾವುದೇ ನಾಯಕರು ಕೊಟ್ಟಿಲ್ಲ. ಸಿದ್ದರಾಮಯ್ಯ ಅವರ ಮೇಲಿರುವ ಅಭಿಮಾನದಿಂದ ಎರಡು ದಿನ ಮೊದಲೇ ಬಂದು ನಾವಿಲ್ಲಿ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ. ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡುವುದೇ ನಮ್ಮ ಕನಸು” ಎಂದರು.  

ಕಲಬುರಗಿಯಿಂದ ಆಗಮಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್ ಚಾಲಕ ಮಹೇಶ್‌ ಎಂಬುವರು ಈ ದಿನ.ಕಾಮ್‌ ಜೊತೆ ಮಾತನಾಡಿ, "ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ನಾನು ಚಾಲಕನಾಗಿ ಬಂದಿರುವುದೇ ಹೆಮ್ಮೆ ಅನಿಸುತ್ತಿದೆ. ಇಂಥ ಕಾರ್ಯಕ್ರಮವನ್ನು ನನ್ನ ಜೀವನದಲ್ಲಿ‌ ಎಂದೂ ಕಂಡಿಲ್ಲ. ಬಂದಿರುವ ಜನಸಾಗರ ನೋಡಿ ಸಿದ್ದರಾಮಯ್ಯ ಅವರ ಮೇಲೆ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತಿದೆ” ಎಂದರು.   

Image
Siddaramaiah
ಚಿತ್ರ: ಮುಸ್ತಫಾ ಅಳವಂಡಿ

ಎರಡು ಹೊತ್ತು ಉಪವಾಸ ಇದ್ದರೆ ನಮಗೇನು ಲಾಸ್‌ ಇಲ್ಲ!

ಊಟದ ವಿಚಾರವಾಗಿ ಬೀದರ್‌ನಿಂದ ಆಗಮಿಸಿದ್ದ ಕೆಲವು ಯುವಕರ ಜೊತೆ ಈ ದಿನ.ಕಾಮ್‌ ಮಾತಿಗಿಳಿದಾಗ, “ನಮಗೆ ಇಲ್ಲಿ ಊಟ ಸಿಕ್ಕಿಲ್ಲ ಎಂಬ ಬೇಜಾರು ಏನೂ ಇಲ್ಲ. ಐದು ವರ್ಷಗಳ ಕಾಲ ನಮ್ಮ ಊರಿನ ಎಷ್ಟೋ ಕುಟುಂಬಗಳ ಹಸಿವು ನೀಗಿಸಿದ ಅನದಾತ ಸಿದ್ದರಾಮಯ್ಯ. ಅವರ ಜನ್ಮದಿನ ಕಣ್ಣಾರೆ ನೋಡಲು ಬಂದಿದ್ದೇವೆ. ಎರಡು ಹೊತ್ತು ಉಪವಾಸ ಇದ್ದರೆ ನಾವು ಕಳೆದುಕೊಳ್ಲುವುದು ಏನೂ ಇಲ್ಲ” ಎಂದು ಭಾವನಾತ್ಮಕವಾಗಿ ನುಡಿದರು.  

ಬದಲಾವಣೆಯ ಗಾಳಿಯ ಸಂದೇಶವೇ?

ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾದ ಅದ್ಭುತ್‌ ಚಿತ್ರಗಳಲ್ಲಿ ಅಕ್ಷರಶಃ ಜನ ಸಮೂಹ ಹೊಳೆಯಂತೆ ಹರಿದಿದ್ದು ಕಂಡುಬಂತು. ಒಂದು ಪಕ್ಷದ ರಾಜಕೀಯ ಸಮಾವೇಶಕ್ಕೆ 10 ಲಕ್ಷದಷ್ಟು ಜನ ಸೇರಿದ ಇತಿಹಾಸವಿಲ್ಲ ಕರ್ನಾಟಕದ ಮಟ್ಟಿಗಂತೂ ಇಲ್ಲ. ಆದರೆ ಸಿದ್ದರಾಮಯ್ಯ ಎನ್ನುವ ಒಂದೇ ಹೆಸರಿಗೆ ಲಕ್ಷಾಂತರ ಅಭಿಮಾನಿಗಳು ದಾವಣಗೆರೆಗೆ ಆಗಮಿಸಿದ್ದು, ರಾಜಕೀಯ ಪಂಡಿತರು, ಪ್ರತಿಪಕ್ಷಗಳ ನಾಯಕರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಅಷ್ಟೇ ಅಲ್ಲ; ಸ್ವತಃ ಕಾರ್ಯಕ್ರಮದ ಆಯೋಜಕರ ನಿರೀಕ್ಷೆಯನ್ನೂ ಮೀರಿ ದುಪ್ಪಟ್ಟು ಜನ ಹರಿದುಬಂದಿದ್ದಾರೆ. 

ಅವರ ಮೇಲಿನ ಈ ಅಭಿಮಾನ ಕೇವಲ ಅವರ ಹೋರಾಟದ, ಜನಪರ ಕಾಳಜಿಯ ರಾಜಕಾರಣ ಮತ್ತು ವರ್ಚಸ್ವಿ ವ್ಯಕ್ತಿತ್ವಕ್ಕೆ ಮಾರುಹೋದ ಜನಾಭಿಮಾನವೇ? ಅಥವಾ ರಾಜ್ಯದಲ್ಲಿ ಸದ್ಯ ಮೇಲುಗೈ ಸಾಧಿಸಿರುವ ಧರ್ಮದ್ವೇಷ, ಹುಸಿ ರಾಷ್ಟ್ರೀಯತೆ ಮತ್ತು ಕಡು ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಜನತೆ ಸಿದ್ದರಾಮಯ್ಯ ಅವರಲ್ಲಿ ನಾಳೆಯ ನೆಮ್ಮದಿಯ ದಿನಗಳ ಭರವಸೆ ಕಾಣುತ್ತಿದ್ದಾರೆಯೇ? ಎಂಬುದನ್ನು ಮುಂದಿನ ದಿನಗಳು ಹೇಳಲಿವೆ.

ಆದರೆ, ಸದ್ಯಕ್ಕಂತೂ ಸಿದ್ದರಾಮಯ್ಯ ಅವರ ಮೇಲಿನ ಈ ಅಪಾರ ಅಭಿಮಾನ ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಸ್ತುವಾಗಿದೆ. ಅದರಲ್ಲೂ ವಿಶೇಷವಾಗಿ ಆ ಅಭಿಮಾನದ ಸಾಗರದಲ್ಲಿ ಯುವ ಸಮೂಹದ ಪಾಲು ದೊಡ್ಡದಿತ್ತು ಎಂಬುದು ರಾಜ್ಯ ರಾಜಕಾರಣದ ಬದಲಾವಣೆಯ ಗಾಳಿಯ ಸಂದೇಶವೇ ಎಂಬ ಮಾತುಗಳು ಸಮಾವೇಶದಲ್ಲಿ ಮತ್ತೆ ಮತ್ತೆ ಕಿವಿಗೆ ಬಿದ್ದವು.

ನಿಮಗೆ ಏನು ಅನ್ನಿಸ್ತು?
4 ವೋಟ್