ಆರು ರೀತಿಯಲ್ಲಿ ಪಿಎಸ್‌ಐ ನೇಮಕಾತಿ ಹಗರಣ: ನೊಂದ ಅಭ್ಯರ್ಥಿಗಳಿಂದ ಹಲವು ಸಂಗತಿ ಬಯಲು

PSI  Recruitment
  • ಆರು ರೀತಿಯಲ್ಲಿ ಪಿಎಸ್‌ಐ ನೇಮಕಾತಿ ಹಗರಣ
  • 78 ಅಭ್ಯರ್ಥಿಗಳ ಓಎಮ್‌ಆರ್‌ ಶೀಟ್‌ ನಕಲು ಆರೋಪ

ಐದನೂರ ನಲವತ್ತೈದು ಪಿಎಸ್‌ಐ-ಸಿವಿಲ್‌ ನೇಮಕಾತಿ ಪರೀಕ್ಷೆ ಮತ್ತು ಆಯ್ಕೆ ಪಟ್ಟಿಯಲ್ಲಿ ನಡೆದಿರುವ ಅಕ್ರಮ ರಾಜ್ಯದ ಸಾವಿರಾರು ಅಭ್ಯರ್ಥಿಗಳಲ್ಲಿ ನಿರಾಶೆ, ಹತಾಶೆಗೆ ಕಾರಣವಾಗಿದೆ.  ಕೇವಲ 20 ಪ್ರಶ್ನೆಗೆ ಉತ್ತರಿಸಿದ ಅಭ್ಯರ್ಥಿ ವೀರೇಶ್‌ಗೆ 120 ಅಂಕ ನೀಡಿರುವುದು ಅಕ್ರಮಕ್ಕೆ ಸಾಕ್ಷಿ. ಈಗ ನೊಂದ ಅಭ್ಯರ್ಥಿಗಳು ಈ ಹಗರಣದ ವಿರುದ್ಧ ದನಿ ಎತ್ತಿದ್ದು, ಅಕ್ರಮದ ಬಗ್ಗೆ ಹಲವು ಸಂಗತಿಗಳನ್ನು ಬಯಲು ಮಾಡಿದ್ದಾರೆ. 

ʼ545ರಲ್ಲಿ ಶೇ.80 ರಷ್ಟು ಅಂದರೆ 300ಕ್ಕೂ ಹೆಚ್ಚು ಪೋಸ್ಟ್‌ಗಳು ಮೊದಲೇ ಬುಕ್‌ ಆಗಿವೆ. 56 ಸಾವಿರ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆʼ ಎಂದು ನೊಂದ ಅಭ್ಯರ್ಥಿ ರವಿಶಂಕರ್‌ ಮಾಲಿಪಾಟೀಲ್ ಈದಿನ.ಕಾಮ್‌ಗೆ ತಿಳಿಸಿದರು.

ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಆರೋಪದ ಬಗ್ಗೆ ದ್ವನಿ ಎತ್ತಿರುವ ನೊಂದ ಅಭ್ಯರ್ಥಿ ರವಿಶಂಕರ್‌ ಮಾಲಿಪಾಟೀಲ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮತ್ತಷ್ಟು ಆಘಾತಕಾರಿ ಅಂಶಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

“ಪಿಎಸ್‌ಐ ನೇಮಕಾತಿ ಹಗರಣ ಒಟ್ಟು ಆರು ರೀತಿಯಲ್ಲಿ ನಡೆದಿದೆ. ಮೊದಲನೆಯದ್ದು ಪ್ರಶ್ನೆ ಪತ್ರಿಕೆ ವಿಚಾರದಲ್ಲಿ. ಮೊದಲ ಪ್ರಶ್ನೆ ಪತ್ರಿಕೆ ಪ್ರಬಂಧಕ್ಕೆ 20 ಅಂಕ, ಅನುವಾದಕ್ಕೆ 20 ಅಂಕ ಹಾಗೂ ಸಂಕ್ಷಿಪ್ತಗೊಳಿಸುವಿಕೆಗೆ 10 ಅಂಕ ನಿಗದಿ ಪಡಿಸಲಾಗಿದೆ. ಇಲ್ಲಿ ಪ್ರಾಮಾಣಿಕವಾಗಿ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ, " ಎಂದು ಅವರು ದೂರಿದರು.  

“ಎರಡನೇ ಪರೀಕ್ಷೆ ಒಟ್ಟು 200 ಅಂಕಗಳಿಗೆ ನಡೆಯುತ್ತದೆ. ಎರಡನೇ ಪತ್ರಿಕೆಯಲ್ಲಿ 100 ಪ್ರಶ್ನೆಗಳಿಗೆ 150 ಅಂಕ ನಿಗದಿಪಡಿಸಿ, ಒಂದು ಪ್ರಶ್ನೆಗೆ ಒಂದೂವರೆ ಅಂಕ ನೀಡಲಾಗುತ್ತದೆ. ಕಲಬುರಗಿಯಲ್ಲಿ ಓಎಮ್‌ಆರ್‌ ಶೀಟ್‌ ಅಕ್ರಮ ನಡೆದಿದೆ. ಕೇವಲ ವೀರೇಶ್‌ ಒಬ್ಬನೇ ಅಲ್ಲ, ಈ ರೀತಿಯಾಗಿ 78 ಜನರಿಗೆ ಓಎಮ್‌ಆರ್‌ ಶೀಟ್‌ ಅಕ್ರಮವಾಗಿ ಪರೀಕ್ಷೆ ನಂತರ ತುಂಬಿಕೊಡಲಾಗಿದೆ,” ಎಂದು ರವಿಶಂಕರ್‌ ಆರೋಪಿಸಿದರು.

ಇದನ್ನು ಓದಿದ್ದೀರಾ? ಪಿಎಸ್‌ಐ ನೇಮಕಾತಿ ಅಕ್ರಮ| ನಿಷ್ಪಕ್ಷಪಾತ ತನಿಖೆ ಸಾಧ್ಯವೇ? ಮಾಜಿ ಪೊಲೀಸ್‌ ಅಧಿಕಾರಿಗಳು ಏನಂತಾರೆ?

“ಮೂರನೆಯದ್ದು ದೈಹಿಕ ಸಾಮರ್ಥ್ಯದ ವಿಚಾರ. ಎತ್ತರ ಕಡಿಮೆ ಇರುವ ಅಭ್ಯರ್ಥಿಗಳಿಗೆ ಲಕ್ಷ ಲಕ್ಷ ಹಣ ಪಡೆದು ಅವಕಾಶ ನೀಡಲಾಗಿದೆ. ಇನ್ನು ನಾಲ್ಕನೆಯದ್ದು ಸಿಟ್ಟಿಂಗ್‌ ವ್ಯವಸ್ಥೆ. ಅಂದರೆ ಚೆನ್ನಾಗಿ ಬರೆಯುವವರನ್ನು ಗುರುತಿಸಿ ಯಾರಿಗೆ ಬರೆಯಲು ಬರುವುದಿಲ್ಲವೋ ಅವರ ಬಳಿ ಸೀಟ್‌ ನಂಬರ್‌ ಬರುವ ಹಾಗೆ ನೋಡಿಕೊಂಡು ಪರೀಕ್ಷೆ ಬರೆಸುವುದು.

ಐದನೆಯದ್ದು ಬ್ಲೂಟೂಥ್‌. ಒಂದು ಡ್ರೆಸ್‌ ಕೋಡ್‌ ಮಾಡಲಾಗುತ್ತದೆ. ಆ ಡ್ರೆಸ್‌ ಕೋಡ್‌ ಇರುವರನ್ನು ಪರೀಕ್ಷಾ ಕೇಂದ್ರದ ಕಾವಲುಗಾರರು ತಪಾಸಣೆ ನಡೆಸದೇ ಪರೀಕ್ಷಾ ಕೊಠಡಿಗೆ ಬಿಡುವುದು. ಇಂಥ ಅಭ್ಯರ್ಥಿಗಳಿಗೆ ಕೇವಲ ಬ್ಲೂಟೂಥ್‌ ಬಳಸಿ ಉತ್ತರಗಳನ್ನು ಹೊರಗಿನಿಂದ ಹೇಳಿಸಿ ಪರೀಕ್ಷೆ ಬರೆಸಿದ್ದಾರೆ," ಎಂದು ಅವರು ತಿಳಿಸಿದರು.

“ಆರನೇಯದ್ದು ಟೋಟಲ್‌ ಡೀಲ್. ಇದಕ್ಕೆ ಒಳಪಡುವ ಅಭ್ಯರ್ಥಿಗಳು ಅರ್ಜಿಯೊಂದನ್ನು ಹಾಕಿ ಸುಮ್ಮನಾಗುತ್ತಾರೆ. ನಂತರ ನೇರವಾಗಿ ಅವರಿಗೆ ಕೆಲಸದ ಆರ್ಡ್‌ರ್‌ ಕಾಪಿ ಕೈಗೆ ಬಂದು ಸೇರುತ್ತದೆ. ಈ ಹಗರಣದ ಬಗ್ಗೆ ಗೃಹ ಸಚಿವರಿಗೆ ನೇರವಾಗಿ ಭೇಟಿಯಾಗಿ ನನ್ನ ಬಳಿ ಇರುವ ದಾಖಲೆಗಳನ್ನು ತೋರಿಸಿರುವೆ. ಕೂಡಲೇ ಅವರು ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ಕೊಟ್ಟರು. ನಮಗೆ ರಾಜ್ಯಾದ್ಯಂತ ಪಿಎಸ್‌ಐ ನಕಲಿ ನೇಮಕಾತಿ ಬಗ್ಗೆ ತನಿಖೆ ನಡೆಯಬೇಕು. ಮರಳಿ 56 ಸಾವಿರ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು,” ಎಂದು ರವಿಶಂಕರ್‌ ಆಗ್ರಹಿಸಿದರು.

Image
PSI  Recruitment

ಸಿಐಡಿ ತನಿಖೆ, 8 ಮಂದಿ ಬಂಧನ 

ಪ್ರಕರಣ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು ವಾಸವಿರುವ ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಮನೆ ಸಿಐಡಿ ಡಿವೈಎಸ್‌ಪಿ ಶಂಕರಗೌಡ ನೇತೃತ್ವದ ತಂಡ ಭೇಟಿ ದಾಳಿ ನಡೆಸಿದಾಗ ದಿವ್ಯಾ ನಾಪತ್ತೆಯಾಗಿದ್ದರು. ಅವರ ಪತಿ ರಾಜೇಶ್‌ ಅವರನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು, ಆರೋಪಿಗೆ ನೆರವು ನೀಡಿರುವ ಆರೋಪದ ಮೇಲೆ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ದಿವ್ಯಾ ಅವರನ್ನು ಬಂಧಿಸಲು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಸಿಐಡಿ ಡಿವೈಎಸ್‌ಪಿ ಶಂಕರಗೌಡ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ದಿವ್ಯಾ ಹಾಗರಗಿ ಅವರಿಗೆ ಸೇರಿದ್ದ ಜ್ಞಾನಜೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಇದೇ ಶಾಲೆಯ ಮೂವರು ಮಹಿಳಾ ಕೊಠಡಿ ಮೇಲ್ವಿಚಾರಕರು ಮತ್ತು ಪರೀಕ್ಷೆ ಬರೆದಿದ್ದ ನಾಲ್ವರು ಅಭ್ಯರ್ಥಿಗಳು ಸೇರಿ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ನಮ್ಮಿಂದ ತನಿಖೆ ಚುರುಕುಗೊಂಡಿದೆ. ದಿವ್ಯಾ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಕಲಬುರಗಿ ಘಟನೆ ಅಷ್ಟೇ ಅಲ್ಲ, ರಾಜ್ಯಾದ್ಯಂತ ಈ ಬಗ್ಗೆ ತನಿಖೆ ನಡೆಸಲಾಗುವುದು,” ಎಂದು ಅವರು ವಿವರಿಸಿದರು.

ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಓಎಮ್‌ಆರ್‌ ಶೀಟ್‌ ಅಕ್ರಮ ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಮುಖ್ಯವಾಗಿ ಈ ಶಾಲೆಯು ಬಿಜೆಪಿ ನಾಯಕಿ ದಿವ್ಯಾ ಅವರಿಗೆ ಸಂಬಂಧಿಸಿದೆ ಎಂಬುದು ಗಮನಾರ್ಹ. ಅಲ್ಲದೇ ದಿವ್ಯಾ ಅವರ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆ ಎಂದು ಅಧಿಕಾರಿಗಳು ವರದಿ ನೀಡಿದ್ದರೂ ಬಿಜೆಪಿ ನಾಯಕಿ ಎಂಬ ಕಾರಣಕ್ಕೆ ಶಿಫಾರಸು ಮಾಡಿ ಅವರ ಕೇಂದ್ರದಲ್ಲಿ ಪಿಎಸ್‌ಐ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

ನಿಮಗೆ ಏನು ಅನ್ನಿಸ್ತು?
2 ವೋಟ್