
- ಅರ್ಜಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಗಡುವು ನವೆಂಬರ್ 21 ರವರೆಗೆ ವಿಸ್ತರಣೆ
- ಇತರೆ ಪಕ್ಷಗಳಿಂದ ಕಾಂಗ್ರೆಸ್ಸಿಗೆ ಬರಲು ಕೆಲವು ನಾಯಕರು ಉತ್ಸುಕ: ಈಶ್ವರ ಖಂಡ್ರೆ
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಗಡುವನ್ನು ನವೆಂಬರ್ 21 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅರ್ಜಿ ಸಲ್ಲಿಕೆಗೆ ನವೆಂಬರ್ 15 ಕೊನೇ ದಿನವಾಗಿತ್ತು. ಆದರೆ ಈ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆ, ಮೂಲೆಗಳಿಂದ ಪಕ್ಷದವರು ಮತ್ತು ಅನ್ಯ ಪಕ್ಷಗಳಿಂದ ಕಾಂಗ್ರೆಸ್ಗೆ ಬರಲು ಇಚ್ಛಿಸಿರುವ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನ್ಯ ಪಕ್ಷಗಳಿಂದ ಕಾಂಗ್ರೆಸ್ಗೆ ಬರಲು ಇಚ್ಛಿಸಿರುವ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಗೆ ದಿನಾಂಕ ಮುಂದೂಡಲಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸಂಪರ್ಕಿಸಿದಾಗ, “224 ವಿಧಾನಸಭಾ ಕ್ಷೇತ್ರಗಳ ಪೈಕಿ ಇನ್ನೂ ಬಹತೇಕರು ಅರ್ಜಿ ಸಲ್ಲಿಸಿರುವುದಿಲ್ಲ. ಪಕ್ಷ ಸಂಘಟನೆಯಲ್ಲಿ ಕೆಲವರು ತೊಡಗಿರುವುದರಿಂದ ಸಮಯ ವಿಸ್ತರಿಸಲಾಗಿದೆ. ಹಾಗೆಯೇ ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್ಸಿಗೆ ಬರಲು ಕೆಲವು ನಾಯಕರು ಉತ್ಸುಕವಾಗಿದ್ದಾರೆ. ಅವರೆಲ್ಲ ನಮ್ಮ ನಾಯಕರ ಸಂಪರ್ಕದಲ್ಲಿದ್ದು, ಬೇಗ ಪಕ್ಷಕ್ಕೆ ಬರುತ್ತಾರೆ. ಈ ದಿನಾಂಕ ವಿಸ್ತರಣೆ ಅವರಿಗೂ ಅನುಕೂಲವಾಗುತ್ತದೆ” ಎಂದು ತಿಳಿಸಿದರು.
ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ನ ಶಾಸಕ ಶಿವಲಿಂಗಗೌಡರವರು ಮುಂದೆ ಕಾಂಗ್ರೆಸ್ ಸೇರಿ ಪಕ್ಷದ ಅಭ್ಯರ್ಥಿಯಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವೊಬ್ಬ ಸ್ಥಳೀಯ ನಾಯಕರೂ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್ಗೆ ಅರ್ಜಿ ಹಾಕದಿರುವುದು ಬೇರೆ ಪಕ್ಷದಿಂದ ಬರುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿದೆ.
ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಕಾಂಗ್ರೆಸ್ ಕಚೇರಿ ಮುಂದೆ ದೊಡ್ಡ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿದ್ದು ಕಂಡು ಬಂತು.
ಕಾಂಗ್ರೆಸ್ ಪಕ್ಷವು ಟಿಕೆಟ್ ಅರ್ಜಿಗಾಗಿ 5 ಸಾವಿರ ಶುಲ್ಕ ನಿಗದಿಪಡಿಸಿದೆ. ಅರ್ಜಿಯೊಂದಿಗೆ 2 ಲಕ್ಷ ರೂ. ಡಿಡಿಯನ್ನು ನೀಡಬೇಕು. ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಖರೀದಿಸಿದ್ದಾರೆ. ಆದರೆ, ಸೋಮವಾರದವರೆಗೆ 400 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.

ಡಿ ಕೆ ಶಿವಕುಮಾರ ಪರವಾಗಿ ಇಂದು ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಕನಕಪುರ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪರವಾಗಿ ಶಾಸಕ ರವಿ ಅವರು ಮಂಗಳವಾರ ಅರ್ಜಿ ಸಲ್ಲಿಸಿದರು.
ಕೆಪಿಸಿಸಿ ಖಜಾಂಚಿಗಳಾದ ವಿನಯ್ ಕಾರ್ತಿಕ್, ಕನಕಪುರ ಬ್ಲಾಕ್ ಅಧ್ಯಕ್ಷರಾದ ವಿಜಯ್ ದೇವ್ ಮತ್ತು ಮುೂರ್ತಿ, ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆಂಪರಾಜು, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಯೋಜಕ ಜಿ ಸಿ ರಾಜು, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ನಾರಾಯಣ್ ಅರ್ಜಿ ಸ್ವೀಕರಿಸಿದರು.