ಸಚಿವಾಲಯ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ: ಸಭಾಧ್ಯಕ್ಷ ಕಾಗೇರಿ ಸ್ಪಷ್ಟನೆ

Vishveshwara Hegde Kageri
  • ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು: ಈ ದಿನ.ಕಾಮ್‌ಗೆ ಕಾಗೇರಿ ಸ್ಪಷ್ಟನೆ
  • ವಿಧಾನಸಭಾ ಸಚಿವಾಲಯದ ವಿವಿಧ ಹುದ್ದೆಗಳಿಗೆ ಕಳೆದ ಏಪ್ರಿಲ್‌ 26ರಂದು ಅಧಿಸೂಚನೆ ಪ್ರಕಟವಾಗಿತ್ತು 

ಕರ್ನಾಟಕ ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿ ವಿಚಾರವಾಗಿ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೆರೆ ಎಳೆದಿದ್ದು, “ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು” ಎಂದಿದ್ದಾರೆ.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಮೂರು ವರ್ಷದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಯ ಕಾರ್ಯಕ್ರಮದಲ್ಲಿ “ಸಚಿವಾಲಯದ ನೇಮಕಾತಿ ಹೇಗೆ ನಡೆಯಲಿದೆ” ಎಂದು ಈ ದಿನ.ಕಾಮ್‌ ಪ್ರಶ್ನಿಸಿದ್ದಕ್ಕೆ ಅವರು ಉತ್ತರಿಸಿದರು. 

ಕರ್ನಾಟಕ ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ 13ನೆಯ ನಿಯಮ ಅಸ್ಪಷ್ಟವಾಗಿದ್ದು, ನೇಮಕಾತಿ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಗೊಂದಲ ಸೃಷ್ಟಿಯಾಗಿರುವ ಬಗ್ಗೆ  ಹಿಂದೆ ಈ ದಿನ.ಕಾಮ್‌ ವರದಿ ಮಾಡಿತ್ತು. 

ಈ ಸುದ್ದಿ ಓದಿದ್ದೀರಾ? ಸಭಾಧ್ಯಕ್ಷರ ಮೂಗಿನ ಕೆಳಗೇ ಅಕ್ರಮ ನೇಮಕಾತಿ; ಕಣ್ಣು ತೆರೆಯುವರೇ ಕಾಗೇರಿ?

ವಿಧಾನಸಭೆ ಸಚಿವಾಲಯದಲ್ಲಿ ಮಾತೃ ವೃಂದದಲ್ಲಿನ ವಿವಿಧ ಹುದ್ದೆಗಳಿಗೆ ಮತ್ತು ಸ್ಥಳೀಯ ವೃಂದದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗಾಗಿ (ಹೈ-ಕ) ಗುರುತಿಸಲಾದ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವಿಧಾನಸಭೆ ಸಚಿವಾಲಯ ಪ್ರತ್ಯೇಕವಾಗಿ ಏಪ್ರಿಲ್‌ 26ರಂದು ಅಧಿಸೂಚನೆ ಹೊರಡಿಸಿತ್ತು.      

ನೇಮಕಾತಿ ಅಧಿಸೂಚನೆಯ 13ನೆಯ ನಿಯಮದಲ್ಲಿ , “ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳು, 2003ರ ನಿಯಮ 6(Viii) ರ ರೀತ್ಯಾ ಮಾನ್ಯ ಸಭಾಧ್ಯಕ್ಷರು ಸೂಚಿಸುವಂತೆ ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿತ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ಮೌಖಿಕ ಪರೀಕ್ಷೆ ಅಥವಾ ಈ ಎರಡೂ ವಿಧಾನಗಳನ್ನು ಅನುಸರಿಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು” ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ; ನಿಯಮದಲ್ಲೇ ಗೊಂದಲ!

ಹಾಗೆಯೇ ಆ ನಿಯಮದ ಮುಂದುವರಿಕೆಯಂತೆ ಕಾಣುವ 14ನೆಯ ನಿಯಮದಲ್ಲಿ, “ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಷರತ್ತುಗಳು) ನಿಯಮಾವಳಿಗಳು, 2003ರ ರೀತ್ಯಾ ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಕಾರ್ಯ ವಿಧಾನವನ್ನು ನಿಗದಿಪಡಿಸುವ ಅಧಿಕಾರ ಮಾನ್ಯ ಸಭಾಧ್ಯಕ್ಷರಿಗೆ ಮಾತ್ರ ಇರುತ್ತದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. 

ಆದರೆ, ಅರ್ಜಿ ಹಾಕುವ ಅಭ್ಯರ್ಥಿಗಳನ್ನು ಇಂಥದ್ದೇ ವಿಧಾನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂಬುದಕ್ಕೆ ಈ ಅಧಿಸೂಚನೆಯಲ್ಲಿ ಸ್ಪಷ್ಟತೆ ಇರಲಿಲ್ಲ. ಅಭ್ಯರ್ಥಿಗಳಿದ್ದ ಗೊಂದಲವನ್ನು ಕಾಗೇರಿಯವರು ಈಗ ಪರಿಹರಿಸಿದ್ದು, “ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಎಲ್ಲ ಮಾಹಿತಿ ನೀಡಿ” ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಮೆರಿಟ್‌ ಮೇಲೆ ಆಯ್ಕೆ ಮಾಡಲಾಗುವದು” ಎಂದು ಈ ದಿನ.ಕಾಮ್‌ಗೆ ಸ್ಪಷ್ಟಪಡಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್