ಎಸ್‌ಎಸ್‌ಎಲ್‌ಸಿ | ದಲಿತ ಕೂಲಿ ಕಾರ್ಮಿಕರ ಮಗ ರಾಜ್ಯಕ್ಕೆ 'ಟಾಪರ್'

  • ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅಮಿತ್
  • ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿರುವ ವಿದ್ಯಾರ್ಥಿ

ದಲಿತ ವಿದ್ಯಾರ್ಥಿ ಅಮಿತ್ ಆನಂದ್ ಮಾದರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜಯಪುರ ಜಿಲ್ಲೆಯ ಜುಮಾನಲ್‌ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿ ಅಮಿತ್, ತನ್ನೆಲ್ಲ ಸವಾಲುಗಳನ್ನು ಮೆಟ್ಟಿ 625 ಅಂಕಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.

"ಅಮಿತ್‌ ಅವರ ತಂದೆ ಆನಂದ್‌ ಅವರು ಅನಾರೋಗ್ಯದಿಂದ 10 ವರ್ಷಗಳ ಹಿಂದೆಯೇ ಸಾವನ್ನಪ್ಪಿದರು. ತಾಯಿ ಮಹಾದೇವಿ ಅವರು ದಿನಗೂಲಿ ಕೆಲಸ ಮಾಡಿ ದುಡಿದು ಮಗನಿಗೆ ಶಿಕ್ಷಣ ಕೊಡಿಸಿದ್ದಾರೆ. ತಾಯಿಯ ಶ್ರಮ, ಮಗನ ಶ್ರದ್ಧೆ ಫಲ ನೀಡಿದೆ" ಎಂದು ಅಮಿತ್ ಸಂಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಅಮಿತ್‌ ಸಾಧನೆ ಕುರಿತು ಕುಟುಂಬದವರು, ಶಾಲೆಯ ಶಿಕ್ಷಕರು ಹಾಗೂ ಇಡೀ ಹಳ್ಳಿಯ ಜನರು ಹೆಮ್ಮೆ ಪಡುತ್ತಿದ್ದಾರೆ. “ಅಮಿತ್ ಊಟ ನಿದ್ರೆ ಇಲ್ಲದೆ ಕಠಿಣ ಶ್ರಮವಹಿಸುತ್ತಿದ್ದ ” ಎಂದು ಬಿ.ಎ ವ್ಯಾಸಂಗ ಮಾಡುತ್ತಿರುವ ಆತನ ಅಕ್ಕ ಅಭಿಲಾಷ ಅವರು ಹೇಳಿದ್ದಾರೆ.

ಆತನ ಅಣ್ಣ ಅಮೋಘ್ ಸಿದ್ಧ, ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪುಸ್ತಕದ ಅಂಗಡಿಯಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತ, ತಮ್ಮನ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದಾರೆ.

ತಮ್ಮ ಸಾಧನೆ ಕುರಿತು ಈದಿನ.ಕಾಮ್‌ನೊಂದಿಗೆ ಮಾತನಾಡಿದ ಅಮಿತ್, "ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿರುವುದು ತುಂಬಾ ಖುಷಿಯಾಗಿದೆ. ಈ ಕ್ಷಣವನ್ನು ಎಂದಿಗೂ ಮರೆಯಲಾಗುವುದಿಲ್ಲ. ಫ್ರೌಢ ಶಿಕ್ಷಣಕ್ಕೆ ಕಾಲಿಟ್ಟಾಗಿನಿಂದಲೇ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಬೇಕೆಂಬ ಗುರಿಯನ್ನು ಹೊಂದಿದ್ದೆ. ಗುರಿಗೆ ತಕ್ಕಂತೆ ಶ್ರಮವಹಿಸಿದೆ. ದಿನದಲ್ಲಿ ಆರರಿಂದ ಎಂಟು ಗಂಟೆಗಳ ಕಾಲ ಓದುತ್ತಿದ್ದೆ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ರಾತ್ರಿ 11 ಗಂಟೆವರೆಗೂ ಅಭ್ಯಾಸ ಮಾಡುತ್ತಿದ್ದೆ. ನನ್ನ ಮನಸನ್ನು ಚಂಚಲವಾಗಲು ಬಿಡುತ್ತಿರಲಿಲ್ಲ” ಎಂದು ಹೇಳಿದರು.

“ಅನಕ್ಷರಸ್ಥ ತಂದೆ-ತಾಯಿಯೇ ನನ್ನ ಸಾಧನೆಗೆ ಸ್ಪೂರ್ತಿ. ಶಾಲೆಯ ಶಿಕ್ಷಕರು ಕೂಡ ಸ್ನೇಹ ಭಾವದಿಂದ ನನ್ನೊಂದಿಗೆ ನಡೆದುಕೊಳ್ಳತ್ತಿದ್ದರು. ಯಾವಾಗ ಏನನ್ನು ಕೇಳಿದರೂ ಹೇಳಿಕೊಡುತ್ತಿದ್ದರು. ಪಾಠವನ್ನು ಚೆನ್ನಾಗಿ ಅರ್ಥಮಾಡಿಸುತ್ತಿದ್ದರು. ಪರೀಕ್ಷೆಗೆ ಸಿದ್ಧವಾಗುವ ಕೆಲವು ಮುಖ್ಯ ವಿಧಾನಗಳನ್ನು ಕಲಿಸಿಕೊಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಮೊಬೈಲ್ ಪಡೆದು ಆನ್‌ಲೈನ್‌ ಶಿಕ್ಷಣವನ್ನು ಪಡೆಯುತ್ತಿದೆ. ವಿದ್ಯಾಭ್ಯಾಸಕ್ಕಾಗಿ ಸಣ್ಣಪುಟ್ಟ ಹಣಕಾಸಿನ ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ಅಮ್ಮ ಮತ್ತು ಅಣ್ಣ ದುಡಿದು ನಿಭಾಯಿಸುತ್ತಿದ್ದರು. ನನ್ನ ಮೇಲೆ ಒತ್ತಡ ಹೇರುತ್ತಿರಲಿಲ್ಲ. ಆದರೆ, ಅವರು ಕೆಲಸಕ್ಕೆ ಹೋದಾಗ ಮನೆಯಲ್ಲಿ ನೀರು ಹಿಡಿಯುವುದು, ಕಟ್ಟಿಗೆ ಹೊಡೆಯುವ ಕೆಲಸ ಮಾಡುತ್ತಿದ್ದೆ” ಎನ್ನುತ್ತಾರೆ ಅಮಿತ್.

“ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ, ಅವರ ಗ್ರಹಿಕೆ ತಪ್ಪು. ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ” ಎಂದು ತನ್ನ ಶಾಲೆಯ ಬಗ್ಗೆ ಅಮಿತ್ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. 

‘ಐಎಎಸ್‌’ ಅಧಿಕಾರಿ ಆಗಬೇಕೆಂಬ ಕನಸನ್ನು ಹೊಂದಿರುವ ಅಮಿತ್, ಓದುವುದನ್ನು ಮೈಗೂಡಿಸಿಕೊಂಡಿದ್ದಾರೆ. ಉನ್ನತ ವ್ಯಾಸಂಗ ಮಾಡಿ ಮನೆಯವರನ್ನು ಬಡತನದಿಂದ ಹೊರತರಬೇಕು ಎಂಬ ಆಕಾಂಕ್ಷೆ ಹೊಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಎಸ್‌ಎಸ್‌ಎಲ್‌ಸಿ|‌ ಉರ್ದು ಮನೆಮಾತಿನ ಶಾನಿಯಾ ಕನ್ನಡದಲ್ಲಿ ಪಡೆದಿದ್ದು 125ಕ್ಕೆ 125 ಅಂಕ!

ಗಣಿತದ ವಿಷಯದಲ್ಲಿ ಆಸಕ್ತಿ ಹೊಂದಿರುವ ಅಮಿತ್, ಕಷ್ಟವೆನಿಸುತ್ತಿದ್ದ ಇಂಗ್ಲಿಷ್ ವಿಷಯವನ್ನು ಹೆಚ್ಚು ಸಮಯ ಅಭ್ಯಾಸ ಮಾಡುತ್ತಿದ್ದರು. ಏಕಾಗ್ರತೆ ಕಾಪಾಡಿಕೊಳ್ಳಲು ಯೋಗಭ್ಯಾಸ ಮಾಡುತ್ತಿದ್ದರು. ಸದಾ ಓದುತ್ತಿದ್ದ ಅಮಿತ್‌ ಅವರನ್ನು ಕೆಲವು ಸ್ನೇಹಿತರು ಹೀಗಳೆದು, ಟೀಕಿಸುತ್ತಿದ್ದರು. ಆದರೆ, ಅವರ ಟೀಕೆಯ ಬಗ್ಗೆ ಅಮಿತ್ ಗಮನ ಹರಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಇದ್ದುಬಿಡುತ್ತಿದ್ದರು.

“ನಮಗೆ ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಸ್ಪಷ್ಟವಾಗಿರಬೇಕು. ಗುರಿ ಸಾಧಿಸುವ ಛಲ ಇರಬೇಕು. ಅದಕ್ಕೆ ತಕ್ಕ ಪ್ರಯತ್ನ ಇರಬೇಕು. ನಮ್ಮ ಕೈಯಲ್ಲಿ ಅಸಾಧ್ಯ ಎಂದು ಯೋಚಿಸಬಾರದು. ಶ್ರಮ ಇದ್ದರೆ ಖಂಡಿತ ಎಲ್ಲವೂ ಸಾಧ್ಯ” ಎಂದು ಅಮಿತ್‌ ವಿಶ್ವಾಸದ ಮಾತುಗಳನ್ನಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್