ದಾವಣಗೆರೆ| ಕನಿಷ್ಠ ಬೆಂಬಲ ಬೆಲೆಗೆ ಅಗ್ರಹಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ನಿರ್ಧಾರ- ರಾಜ್ಯ ರೈತ ಸಂಘ

  • ಜುಲೈ 11ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ನಿರ್ಧಾರ
  • ಕಬ್ಬಿಗೆ 4500 ರೂಪಾಯಿ ಎಮ್‌ಎಸ್‌ಪಿ ನಿಗದಿ ಮಾಡುವಂತೆ ಒತ್ತಾಯ 

“ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಪಡಿಸಬೇಕು. ಕಾರ್ಖಾನೆಗಳಿಂದ ಬರಬೇಕಾದ ಹಳೆ ಬಾಕಿಯನ್ನು ರೈತರಿಗೆ ಶೀಘ್ರವೇ ಪಾವತಿಸಬೇಕು ಹಾಗೂ ರೈತರ ಮನೆಗಳ ವಿದ್ಯುತ್ ಸಂಪರ್ಕ ಕಡಿತ ಮತ್ತು ಹಳೆ ಬಿಲ್ ಬಾಕಿಯನ್ನು ವಸೂಲಿ ಮಾಡುವುದನ್ನು ನಿಲ್ಲಿಸಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ಎಂಎಸ್‌ಪಿ ನಿಗದಿ ಮಾಡುವಂತೆ ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ವಿರುದ್ದ ಜುಲೈ 11ರಂದು ಹಮ್ಮಿಕೊಂಡಿರುವ ಮುಖ್ಯಮಂತ್ರಿಗಳ ‘ಮನೆ ಮುತ್ತಿಗೆ’ ಹೋರಾಟದ ಪೂರ್ವಭಾವಿಯಾಗಿ ರಾಜ್ಯ ಕಾರ್ಯಕಾರಣಿ ಸಭೆಯನ್ನು ದಾವಣಗೆರೆಯಲ್ಲಿ ಶನಿವಾರ ನಡೆಸಲಾಗಿದೆ. 

“ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಹಳೆಯ ಮಾನದಂಡಗಳನ್ನೇ ಅನುಸರಿಸಿ ಕಾರ್ಖಾನೆಗಳಿಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯ ಎಸಗಿದೆ ಎಂದರು. 2022ರ ಫೆಬ್ರವರಿಗೆ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆಂದು ಹೇಳಿದ್ದ ಕೇಂದ್ರ ಸರ್ಕಾರ ರಸಗೊಬ್ಬರ ಮತ್ತು ಕೃಷಿಯ ಇತರೆ ಖರ್ಚುಗಳ ಬೆಲೆ ಗಗನಕ್ಕೇರಿಸಿ ವ್ಯವಸಾಯ ಉತ್ಪಾದನಾ ವೆಚ್ಚವನ್ನು ದ್ವಿಗುಣ ಗೊಳಿಸಿದೆಯೇ ಹೊರತು ರೈತರ ಆದಾಯವನ್ನು ಹೆಚ್ಚಿಸಲಿಲ್ಲ” ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?:ಪಠ್ಯಪುಸ್ತಕ ವಿವಾದ | ಪಠ್ಯ ಪರಿಷ್ಕರಣೆ ವಿರೋಧಿಸಿ ತಿಪಟೂರಿನಾದ್ಯಂತ ಪಾದಯಾತ್ರೆ

“ಕಳೆದ ನಾಲ್ಕು ವರ್ಷಗಳಿಂದ ಎಂಎಸ್‌ಪಿ ನಿಗದಿ ಮಾಡಿಲ್ಲ. ಈ ವರ್ಷ ಕಬ್ಬಿಗೆ 4500 ರೂಪಾಯಿ ಎಮ್‌ಎಸ್‌ಪಿ ನಿಗದಿ ಮಾಡಬೇಕು. ಅನೇಕ ಕಾರ್ಖಾನೆಗಳ ಮಾಲೀಕರು ರಾಜಕಾರಣಿಗಳಾಗಿದ್ದು ಈ ಕಾರ್ಖಾನೆಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್‍‌ಪಿ ಬೆಲೆಗಿಂತಲೂ ಕಡಿಮೆ ಬೆಲೆಗೆ ಕಬ್ಬನ್ನು ಖರೀದಿಸುತ್ತಿದ್ದಾರೆ. ಇದು ಕಬ್ಬು ಬೆಳೆಗಾರರಿಗೆ ಮಾಡುವ ದ್ರೋಹವಾಗಿದೆ. ಸರ್ಕಾರ ಈ ಬಗ್ಗೆ ಗಮನಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

“ವಿಶ್ವ ರೈತ ಚೇತನ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ವಿದ್ಯುತ್ ತಾರತಮ್ಯ ನೀತಿಯನ್ನು ವಿರೋಧಿಸಿ ‘ಕರನಿರಾಕರಣ ಚಳವಳಿ’ ನಡೆಸಿ ರೈತರು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ ಎಂದು ಒಮ್ಮತದಿಂದ ಘೋಷಿಸಲಾಗಿತ್ತು. ಆದರೆ, ಕಳೆದ ನಾಲ್ಕು ತಿಂಗಳಿಂದ ಸರ್ಕಾರ ಹಳೆ ಬಾಕಿ ಹೆಸರಿನಲ್ಲಿ ವಸೂಲಿಗೆ ಮುಂದಾಗಿದೆ. ಬಿಲ್ ಪಾವತಿಸದಿದ್ದಕ್ಕೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಎಲ್ಲರ ಮನೆಗೂ ಬೆಳಕು ನೀಡುವುದಾಗಿ ಜಾಹೀರಾತು ನೀಡುವ ಸರ್ಕಾರ ರೈತರ ಮನೆಯ ವಿದ್ಯುತ್ ಕಡಿತಗೊಳಿಸುತ್ತಿದೆ” ಎಂದು ಸರ್ಕಾರದ ವಿರುದ್ದ ನಾಗೇಂದ್ರ ಕಿಡಿಕಾರಿದ್ದಾರೆ.

ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮುಖಂಡರಾದ ನುಲೇನೂರು ಎಂ. ಶಂಕರಪ್ಪ, ರವಿಕಿರಣ್ ಪೂಣಚ್ಚ, ಶಶಿಧರಸ್ವಾಮಿ, ಅರುಣ್ ಕುಮಾರ್ ಕುರುಡಿ, ಈಚಗಟ್ಟದ ಕರಿಸಿದ್ದಪ್ಪ, ಮಹಿಳಾ ರೈತ ಹೋರಾಟಗಾರ್ತಿಯರಾದ ಅಕ್ಕಮಹಾದೇವಿ, ಮಂಜುಳಾ ಅಕ್ಕಿ ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ದಾವಣೆಗೆರೆ ಜಿಲ್ಲಾ ಸಂಯೋಜಕ ವಿನಯ್‌ಕುಮಾರ್‍‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್