ಸಾರಿಗೆ ನಿಗಮಗಳ ನೆರವಿಗೆ ಬಂದ ಸರ್ಕಾರ: ನಾಲ್ಕು ನಿಗಮಗಳಿಗೆ ₹1,059 ಕೋಟಿ ಬಿಡುಗಡೆ

  • ಭವಿಷ್ಯ ನಿಧಿಗಾಗಿ ₹800 ಕೋಟಿ, ಇಂಧನ ವೆಚ್ಚವಾಗಿ ₹259.27 ಕೋಟಿ ಬಿಡುಗಡೆ
  • ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ: ರಾಜ್ಯ ಸರ್ಕಾರದ ಷರತ್ತು

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಿಂದ ಕುಗ್ಗುತ್ತಿದ್ದು, ಸರ್ಕಾರ ಒಂದು ಬಾರಿಯ ಸಹಾಯವಾಗಿ ₹1,059 ಕೋಟಿ ಬಿಡುಗಡೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯ ನಿಧಿಗಾಗಿ ₹800 ಕೋಟಿ ಮತ್ತು ಇಂಧನ ವೆಚ್ಚವಾಗಿ ₹259.27 ಕೋಟಿ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಅನುದಾನವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಷರತ್ತು ವಿಧಿಸಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ಒಂದು ವಾರ್ಡ್‌ಗೆ ಒಂದೇ ಗಣೇಶ ಕೂರಿಸಬೇಕು: ತುಷಾರ್ ಗಿರಿನಾಥ್

ರಾಜ್ಯ ಸರ್ಕಾರವು ಹೆಚ್ಚುವರಿ ಅನುದಾನವನ್ನು 2022-23ನೇ ಸಾಲಿನ ಪೂರಕ ಅಂದಾಜು ಕಂತಿನಲ್ಲಿ ಒದಗಿಸುವ ಮೂಲಕ ಸರಿದೂಗಿಸುವುದಾಗಿ ತಿಳಿಸಿದೆ.

ಸರ್ಕಾರ ಬಿಡುಗಡೆ ಮಾಡಿದ ₹1,059 ಕೋಟಿ ಅನುದಾನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಗೆ ₹330 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ₹279 ಕೋಟಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಎಸ್ಆರ್‍‌ಟಿಸಿ)ಗೆ ₹320 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ ₹130 ಕೋಟಿ ಹಂಚಿಕೆ ಮಾಡಲಾಗಿದೆ.

ಹಲವು ತಿಂಗಳುಗಳಿಂದ ಸಾವಿರಾರು ನೌಕರರ ಭವಿಷ್ಯ ನಿಧಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಅನುದಾನ ಬಿಡುಗಡೆಯಿಂದ ನಾಲ್ಕು ನಿಗಮದ ಸಿಬ್ಬಂದಿಗೆ ಅನುಕೂಲವಾಗಿದೆ.

ನಾಲ್ಕು ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಮೊತ್ತ ನಿಗದಿತ ಅವಧಿಯೊಳಗೆ ಪಾವತಿ, ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರಕ್ಕೆ ಹಣಕಾಸಿನ ನೆರವು ನೀಡುವಂತೆ ಸರ್ಕಾರಕ್ಕೆ ನಿಗಮಗಳು ಮನವಿ ಸಲ್ಲಿಸಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್