ಬಿಜೆಪಿಯ ಧರ್ಮ ರಾಜಕಾರಣದ ಹಸು ಬರಡಾಗಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕು

Siddaramaiah
  • ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೂ ಕೈ ಹಾಕಿದ ಬಿಜೆಪಿ ನಾಯಕರು: ವ್ಯಂಗ್ಯ 
  • ಕಳ್ಳರ ಜೊತೆ ಶಾಮೀಲಾಗುವ ಡೋಂಗಿ ಚೌಕಿದಾರ ನಾನಲ್ಲ: ಸಿದ್ದರಾಮಯ್ಯ ತಿರುಗೇಟು

ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೂ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.

ಹಿಂದಿ ಹೇರಿಕೆ ಕುರಿತಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಬರೆಹದ ಮೂಲಕ ಪ್ರತಿಕ್ರಿಯಿಸಿದ್ದು, “ಹಿಂದಿ ಭಾಷೆಯ ಪರ ವಕಾಲತು ಮಾಡಲು ಹೊರಟಿರುವ ಸಿ ಟಿ ರವಿ, ಮುರುಗೇಶ್ ನಿರಾಣಿ, ರಮೇಶ್ ಜಿಗಜಿಣಗಿ ಮೊದಲಾದವರಿಗೆ ಆ ಭಾಷೆಯ ಬಗ್ಗೆಯೂ ಪ್ರೀತಿ ಇಲ್ಲ. ಇವರೆಲ್ಲ ತಮ್ಮ ದೆಹಲಿ ದೊರೆಗಳನ್ನು ಓಲೈಸಲು ಹೊರಟಿದ್ದಾರಷ್ಟೇ," ಎಂದು ಟೀಕಿಸಿದ್ದಾರೆ.

“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಅವರನ್ನು ಓಲೈಸಲು ಸರತಿ ಸಾಲಲ್ಲಿ ನಿಂತಿದ್ದಾರೆ. ʼಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ. ಕನ್ನಡ‌ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ನಾನು ರಾಜಕೀಯ ಜೀವನ ಪ್ರಾರಂಭಿಸಿದವನು. ನಾನು ಇಂದು, ಮುಂದು, ಎಂದೆಂದೂ ಒಬ್ಬ ಕನ್ನಡದ ಕಾವಲುಗಾರ. ಕಳ್ಳರ ಜೊತೆ ಶಾಮೀಲಾಗುವ ಡೋಂಗಿ ಚೌಕಿದಾರ ನಾನಲ್ಲ,” ಎಂದು ಹರಿಹಾಯ್ದಿದ್ದಾರೆ. 

ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ

“ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ, ನೆಲದ ಸಾರ್ವಭೌಮ ಭಾಷೆ. ಇದನ್ನೂ ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನ ಅರಿವಿರಲಿ. ಇಂಗ್ಲೀಷ್, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವವಿದೆ. ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಪ್ರಥಮ ಪೂಜೆ,” ಎಂದಿದ್ದಾರೆ.

ಇದನ್ನು ಓದಿದ್ದೀರಾ? ಹಿಂದಿ ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರಕ್ಕೆ ಈಶಾನ್ಯ ರಾಜ್ಯಗಳ ವಿರೋಧ

“ನಮ್ಮದು ಒಕ್ಕೂಟ ವ್ಯವಸ್ಥೆಯ ದೇಶ. ರಾಜ್ಯಗಳು ಭಾಷೆಯ ಆಧಾರದಲ್ಲಿ ರಚನೆಯಾಗಿವೆ. ಭಾಷಾವಾರು ಪ್ರಾಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಮನ್ನಿಸಬೇಕಾಗುತ್ತದೆ. ಕನ್ನಡ ನಮಗೆ‌ ಮಾತೃಭಾಷೆ ಮತ್ತು ಪರಿಸರದ ಭಾಷೆ ಕೂಡಾ ಹೌದು. ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು ʼಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...ʼ ಎನ್ನುವ  ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ, ಇದು ನಮ್ಮ ಜೀವದ ಉಸಿರು. ಮಾತೃಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ, ಮಾತೃಭಾಷೆ ಎಂದರೆ ನಮ್ಮ ಭಾವನೆ, ಸಂಬಂಧ, ತನ್ನತನದ ಪ್ರಜ್ಞೆ, ಸಂಸ್ಕೃತಿ, ಇತಿಹಾಸ, ನೆಲ, ಜಲ, ಸಂಪತ್ತು," ಎಂದಿದ್ದಾರೆ.

Image
Siddaramaiah
ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಹೇಳಿಕೆ ಉಲ್ಲೇಖಿಸಿ ಪೋಸ್ಟ್ ಮಾಡಿದ‌ ಚಿತ್ರ 

ನಮ್ಮೆದುರು ಗೋಕಾಕ್ ಹೋರಾಟದ ಮಾದರಿ ಇದೆ

"ನಮ್ಮದು ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಇದು ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಮೂರ್ಖರಿಗೆ ತಿಳಿದಿರಲಿ. ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಬಿಜೆಪಿ ನಾಯಕರ ಕುತಂತ್ರದ ರಾಜಕಾರಣವನ್ನು ಸ್ವಾಭಿಮಾನಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ.‌ ನಮ್ಮೆದುರಿಗೆ ಗೋಕಾಕ್ ಹೋರಾಟದ ಮಾದರಿ ಇದೆ,” ಎಂದು ಬಿಜಿಪಿ ನಾಯಕರಿಗೆ ಎಚ್ಚರಿಸಿದ್ದಾರೆ.

"ಕಾಂಗ್ರೆಸ್ ಬಹು ಧರ್ಮ, ಬಹುಭಾಷೆ ಮತ್ತು ಬಹುತ್ವವನ್ನು ಒಪ್ಪಿಕೊಂಡು ಅಪ್ಪಿಕೊಂಡ ಪಕ್ಷ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವುದು ಜನವಿರೋಧಿ‌ ಮಾತ್ರವಲ್ಲ ಸಂವಿಧಾನ ವಿರೋಧಿ ಕೂಡಾ ಆಗಿದೆ. ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ‌ ಯಶಸ್ಸು ಕಾಣುವುದನ್ನು‌ ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ,” ಮನವಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್