ಶಿರಸಿ ಅರಣ್ಯವಾಸಿಗಳ ಹೋರಾಟ | ಅರಣ್ಯಾಧಿಕಾರಿಗಳ ಕಿರುಕುಳದ ವಿರುದ್ಧ ಸಿಡಿದೆದ್ದ ಜನ; ಬೃಹತ್‌ ಪಾದಯಾತ್ರೆ

Protest
  • 15 ದಿನಗಳ ಗಡುವಿನ ನಂತರವೂ ಅಫಿಡವಿಟ್‌ ಸಲ್ಲಿಸದ ಸರ್ಕಾರದ ನಡೆಗೆ ಖಂಡನೆ
  • ಮೂರು ತಾಸು ಕಾದರೂ ಸಮಸ್ಯೆ ಆಲಿಸಲು ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬುಧವಾರ ಸುಮಾರು ಹತ್ತು ಸಾವಿರ ಜನ ಬೃಹತ್‌ ಪಾದಯಾತ್ರೆ ನಡೆಸಿದರು. 

'ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ' ನೇತೃತ್ವದಲ್ಲಿ ಸಿದ್ಧಾಪುರದ ಬಿಳಗಿಯ ಮಾರಿಕಾಂಬೆ ದೇವಾಲಯದಿಂದ ತಹಶಿಲ್ದಾರ್  ಕಚೇರಿವರೆಗೂ 14 ಕಿ.ಮೀ. ಬೃಹತ್‌ ಪಾದಯಾತ್ರೆ ನಡೆಯಿತು. ಮೂರು ಗಂಟೆಗಳಿಗೂ ಹೆಚ್ಚು ಕಾಲ ಅರಣ್ಯವಾಸಿಗಳು ಧರಣಿ ಕೂತು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಬೃಹತ್‌ ಪಾದಯಾತ್ರೆಗೆ ಚಾಲನೆ ನೀಡಿದರು.

Eedina App

ಈ ವೇಳೆ ಮಾತನಾಡಿದ ಅವರು, "ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡುವುದು ಸರ್ಕಾರದ ಜವಾಬ್ದಾರಿ. ಆದರೆ ಕೇಂದ್ರ-ರಾಜ್ಯ ಸರ್ಕಾರಗಳು ಅದನ್ನು ನಿರ್ಲಕ್ಷ್ಯಿಸಿವೆ. ಹಾಗಾಗಿ ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯವಾಗಿದೆ. ಭೂಮಿ ಹಕ್ಕಿನ ಸಂಘಟನೆ ಜೊತೆಯಲ್ಲಿ ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿಯೂ ಇಚ್ಛಾಶಕ್ತಿ ಪ್ರದರ್ಶಿಸಬೇಕು" ಎಂದು ಕರೆ ಕೊಟ್ಟರು.

"ಜಿಲ್ಲೆಯಲ್ಲಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ ಅರಣ್ಯೀಕರಣ ಮಾಡುವ ಸಲುವಾಗಿ ನಿರಂತರ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ 15 ದಿನ ಗಡವು ನೀಡಿದರೂ ಸರ್ಕಾರ ಕ್ರಮ ಜರುಗಿಸಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಾದಯಾತ್ರೆಯುದ್ಧಕ್ಕೂ ಭೂಮಿ ಹಕ್ಕಿಗೆ ಒತ್ತಾಯಿಸಿದರು.

AV Eye Hospital ad
ಅರಣ್ಯವಾಸಿಗಳ ಪಾದಯಾತ್ರೆ

ಅರಣ್ಯವಾಸಿಗಳ ವಿಚಾರದಲ್ಲಿ ಸರ್ಕಾರ ನಿಲುವು ಸ್ಪಷ್ಟಪಡಿಸಲಿ

ಸುಪ್ರೀಂ ಕೋರ್ಟ್‌ನಲ್ಲಿ ಆರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರಣ್ಯವಾಸಿಗಳ ಪರ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅರಣ್ಯವಾಸಿಗಳಲ್ಲಿ ಗೊಂದಲವುಂಟುಮಾಡಿ ಹೋರಾಟದ ದಿಕ್ಕು ತಪ್ಪಿಸುವ ಕೃತ್ಯ ಎಸಗಬಾರದು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮವನ್ನು ಎದುರು ನೋಡಬೇಕಾಗುತ್ತದೆ" ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಶಿರಸಿಯಿಂದ ಬುಧವಾರ ಬೆಳಿಗ್ಗೆ 8.30ಕ್ಕೆ ಆರಂಭವಾದ ಬೃಹತ್‌ ಪಾದಯಾತ್ರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ 14 ಕಿಮೀ ಕಾಲ್ನಡಿಗೆಯಲ್ಲಿ ಸಾಗಿದ್ದರು. ಪ್ರತಿಭಟನೆಯ ಕುರಿತು ಮುಂಚೆಯೇ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ಆಲಿಸಲು ಬಾರದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಅರಣ್ಯವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಗೊಂಡ ಕ್ಷಣ 

ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌ ಕುಮಾರ ಹಾಗೂ ತಹಶೀಲ್ದಾರ್ ಭಂಡಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ನಂತರ ಅಸಮರ್ಪಕ ಜಿಪಿಎಸ್‌ ಮೂಲಕ ದಿನನಿತ್ಯ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಯಿಂದ ಉಂಟಾಗುತ್ತಿರುವ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ, ಪ್ರಕರಣ ದಾಖಲು ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಈ ಬಗ್ಗೆ ಸಮಿತಿಯ ಅಧ್ಯಕ್ಷರಾದ ರವೀಂದ್ರ ನಾಯ್ಕ್‌ ಅವರು ಈ ದಿನ.ಕಾಮ್‌ಗೆ ಮಾಹಿತಿ ನೀಡಿ, "ಅರಣ್ಯವಾಸಿಗಳಿಗೆ ಭೂಮಿ ಹಕ್ಕುಪತ್ರ ನೀಡಬೇಕೆಂದು ನಿರಂತರವಾಗಿ 32 ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರವಾಗಿ ರಾಜ್ಯ ಸರ್ಕಾರ ಅಫಿಡವೀಟ್‌ ಸಲ್ಲಿಸಿದರೆ ಐದು ಲಕ್ಷಕ್ಕೂ ಅಧಿಕ ಅರಣ್ಯವಾಸಿಗಳು ನಿರಾಶ್ರಿತರಾಗುವುದು ತಪ್ಪುತ್ತದೆ ಎಂದು ಮನವಿ ಮಾಡಿದ್ದೆವು. ಕಳೆದ ಬಾರಿ ಸ್ಪೀಕರ್‌ ಕಾಗೇರಿ ಅವರ ಕಚೇರಿ ಮುಂದೆಯೂ ಪ್ರತಿಭಟನೆ ಮಾಡಿ ಒತ್ತಾಯಿಸಿದ್ದೆವು. ಆದರೆ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಬದಲಾಗಿ ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ; ಅದು ಆಗಬಾರದು" ಎಂದು ಆಗ್ರಹಿಸಿದರು.

"ಇಂದಿನ ಹೋರಾಟವನ್ನು ಪೊಲೀಸರು ನಿರ್ಲಕ್ಷ್ಯ ಮಾಡಿದ್ದು, ಹತ್ತು ಸಾವಿರ ಜನ ಸೇರುವ ನಿರೀಕ್ಷೆ ಮಾಡಿರಲಿಲ್ಲ. ಆ ನಂತರ ಜನಸಾಗರ ಕಂಡು 100 ಜನ ಪೊಲೀಸರನ್ನು ಕರೆಸಿದ್ದರು. ಆದರೆ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅಂತಿಮವಾಗಿ ತಹಶಿಲ್ದಾರ್‌, ಡಿಎಫ್‌ಓ ಅವರುಗಳು ಅರಣ್ಯವಾಸಿಗಳಿಗೆ ಕಿರುಕುಳ ಆಗದಂತೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಆದರೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯ. ಅರಣ್ಯವಾಸಿಗಳ ಬದುಕಿನ ಬಗ್ಗೆ ಚಿಂತನೆ ನಡೆಸಿ ಸುಪ್ರೀಂಕೋರ್ಟ್‌ನಲ್ಲಿ ಅಫಿಡವೀಟ್‌ ಸಲ್ಲಿಸಬೇಕೆಂದು ಮತ್ತೊಮ್ಮೆ ಬಲವಾಗಿ ಒತ್ತಾಯಿಸುತ್ತಿದ್ದೇನೆ" ಎಂದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ತಿ.ನ ಶ್ರೀನಿವಾಸ ಮೂರ್ತಿ, ರೈತ ಮುಖಂಡರಾದ ವೀರಭದ್ರ ನಾಯ್ಕ್‌, ರಾಘವೇಂದ್ರ ನಾಯ್ಕ್‌ ಕವಂಚೂರು, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ನೀರಗಾನ್, ವಿನಾಯಕ ನಾಯ್ಕ, ಕೆಟಿ ನಾಯ್ಕ, ಸುನೀಲ್ ನಾಯ್ಕ ಸಂಪಖಂಡ, ಆಕಾಶ ಕೊಂಡ್ಲಿ, ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರುಗಳು, ಜಿಲ್ಲೆಯ ಸಾವಿರಾರು ಅರಣ್ಯವಾಸಿಗಳು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app