ಬೀದರ್ ನೆಲದಲ್ಲಿ ಕಾಶ್ಮೀರಿ ಸೇಬು ಬೆಳೆದು ಯಶಸ್ವಿಯಾದ ರೈತ

  •  7 ಎಕರೆ ಜಮೀನಿನಲ್ಲಿ ಸೇಬು ಬೆಳೆದ ರೈತ
  • 8 ಲಕ್ಷ ಲಾಭದ ನಿರೀಕ್ಷೆ

ಬೀದರ್ ನೆಲದಲ್ಲಿ ಕಾಶ್ಮೀರಿ ಸೇಬು ಬೆಳೆಯಬಹುದು ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಪೂರ್ವಾಗ್ರಹವನ್ನು ಮೆಟ್ಟಿ ಕಾಶ್ಮೀರಿ ಸೇಬು ಬೆಳೆದು ರೈತರೊಬ್ಬರು ಯಶಸ್ವಿಯಾಗಿದ್ದಾರೆ. 

ಜಿಲ್ಲೆಯ ಹುಮನಾಬಾದ್ ತಾಲೂಕಿನ ಘಾಟಬೋರಾಳ್‌ ಗ್ರಾಮದ ರೈತ ಅಪ್ಪಾರಾವ್ ದಿಗಂಬರಾವ ಭೋಸ್ಲೆ ಅವರು ತಮ್ಮ 7 ಎಕರೆ ಜಮೀನಿನಲ್ಲಿ ಕಾಶ್ಮೀರಿ ಮೆಲೋಸಸ್ ಡೊಮೆಸ್ಟಿಕಾ ತಳಿಯ ಸೇಬು ಬೆಳೆಯುತ್ತಿದ್ದಾರೆ. 

7ನೇ ತರಗತಿವರೆಗೆ ಓದಿರುವ ಅವರು, ಬಾಲ್ಯದಿಂದಲೂ ಕೃಷಿಯಲ್ಲಿ ಒಲವು ಹೊಂದಿದ್ದರು. ಕೃಷಿಯಲ್ಲಿ ತೊಡಗಿದ ಅವರು, ಆರಂಭದಲ್ಲಿ ಸಾಂಪ್ರದಾಯಿಕ ಬೆಳೆಗಳಾದ ತೊಗರಿ ಮತ್ತು ಜೋಳ ಬೆಳೆಯುತ್ತಿದ್ದರು. ನಂತರ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಬಗ್ಗೆ ತಿಳಿದುಕೊಂಡರು. ಅದಕ್ಕಾಗಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಗೆ ಭೇಟಿ ನೀಡಿದರು. ಅಲ್ಲಿನ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 

ಕಳೆದ ವರ್ಷ ನವೆಂಬರ್‌ನಲ್ಲಿ ಹಿಮಾಚಲ ಪ್ರದೇಶಕ್ಕೂ ಭೇಟಿ ನೀಡಿದ್ದ ಅವರು, 222 ಸೇಬಿನ ಗಿಡಗಳನ್ನು ಖರೀದಿಸಿ ತಂದು, ತಮ್ಮ ಜಮೀನಿನಲ್ಲಿ ನೆಟ್ಟಿದ್ದಾರೆ. ಪ್ರತಿ ಗಿಡದ ನಡುವೆ 14 ಅಡಿ ಅಂತರವಿದೆ. ಮೊದಲಿಗೆ ಗುಂಡಿಗಳನ್ನು ತೋಡಿ, ಪ್ರತಿ ಗುಂಡಿಗೆ ಸಗಣಿ ಗೊಬ್ಬರ ತುಂಬಿಸಿ, ಮಣ್ಣಿನಿಂದ ಮುಚ್ಚಿ ಸಸಿಗಳನ್ನು ನೆಟ್ಟಿದ್ದಾರೆ. ಜಮೀನಿನಲ್ಲಿ 2 ಕೊಳವೆಬಾವಿಗಳಿದ್ದು, ಹನಿ ನೀರಾವರಿ ಮೂಲಕ ಅವುಗಳಿಗೆ ನೀರುಣಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರೈತರ ಬೆನ್ನೆಲುಬು ಮುರಿದ ಪೂರ್ವ ಮುಂಗಾರು

"ಮೊದಲ ಬಾರಿಗೆ ಫಲ ಕಟ್ಟಿರುವ ಪ್ರತಿ ಮರದಲ್ಲಿ ತಲಾ 20 ರಿಂದ 25 ಸೇಬುಗಳ ಇಳುವರಿ ದೊರೆತ್ತಿದೆ. ಅವು ಈಗ ಹಣ್ಣಾಗುತ್ತಿವೆ" ಎಂದು ಅಪ್ಪಾರಾವ್ ಹೇಳಿದ್ದಾರೆ.

ಸೇಬು ಬೆಳೆಗೆ ಇದುವರೆಗೆ 5.5 ಲಕ್ಷ ಖರ್ಚು ಮಾಡಿದ್ದು, 8ರಿಂದ 10 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
37 ವೋಟ್