
- ಸಂಸದರ ಮೇಲೆ ಮೂಡದ ಭರವಸೆ : ಅಧಿಕೃತ ಆದೇಶ ಕೈ ಸೇರಿದ ನಂತರವೇ ಹೋರಾಟ ಸ್ಥಗಿತ
- ಫೇಸ್ಬುಕ್ನಲ್ಲಿ ಹೇಳಿಕೆ ನೀಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ
ಸುರತ್ಕಲ್ ಟೋಲ್ಗೇಟ್ ರದ್ದು ಮಾಡಿರುವ ಸಂಬಂಧ ಸಂಸದ ನಳಿನ್ ಕುಮಾರ್ ಟ್ವೀಟ್ ಮಾಡುತ್ತಿದ್ದಂತೆಯೇ, ಸಂಸದರ ಮಾತಿನ ಮೇಲೆ ಹೋರಾಟಗಾರರಿಗೆ ಭರವಸೆ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಖಡಕ್ ಸಂದೇಶ ರವಾನಿಸಿದ್ದು, ಅಧಿಕೃತ ಆದೇಶ ಕೈ ಸೇರಿದ ನಂತರವೇ ಹೋರಾಟ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.
ಟೋಲ್ಗೇಟ್ ಹೋರಾಟ ಸಂಬಂಧ ಫೇಸ್ಬುಕ್ನಲ್ಲಿ ಹೇಳಿಕೆ ನೀಡಿರುವ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, "ಟೋಲ್ ತೆರವು ಹೋರಾಟ ಗೆಲುವಿನ ಸನಿಹ ತಲುಪಿದೆ. ಬಾಯಿ ಮಾತು, ಟ್ವೀಟ್, ಪೋಸ್ಟ್ಗಳನ್ನು ನಂಬಿ ಹಗಲು ರಾತ್ರಿ ಧರಣಿ ನಿಲ್ಲಿಸಲಾರೆವು. ಅಧಿಕೃತ ಆದೇಶ ಕೈ ಸೇರಿ, ಅಕ್ರಮ ಟೋಲ್ನಲ್ಲಿ ಸಂಗ್ರಹ ಸ್ಥಗಿತಗೊಂಡ ಮೇಲಷ್ಟೆ ಹಗಲು ರಾತ್ರಿ ಧರಣಿ ಮುಕ್ತಾಯಗೊಳ್ಳುತ್ತದೆ.' ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಸಂಜೆ 3.44ಕ್ಕೆ ಟ್ವೀಟ್ ಮಾಡಿ, "ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ" ಎಂದು ಮಾಹಿತಿ ನೀಡಿದ್ದರು. ಅವರ ಟ್ವೀಟ್ನ ಬೆನ್ನಲ್ಲೇ ಮುನೀರ್ ಕಾಟಿಪಳ್ಳ ಈ ಹೇಳಿಕೆಯನ್ನು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ : ಕೊನೆಗೂ 'ಸುರತ್ಕಲ್ ಟೋಲ್ಗೇಟ್' ರದ್ದು
"ಟೋಲ್ ರದ್ದುಗೊಂಡ ವಿಷಯ ನನಗೆ ಗೊತ್ತಿಲ್ಲ. ಇನ್ನಷ್ಟೇ ತಿಳಿದು ಬರಬೇಕಿದೆ" ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ವಿಭಾಗದ ಯೋಜನಾ ನಿರ್ದೇಶಕರಾದ ಲಿಂಗೇಗೌಡ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ ಈ ಹೇಳಿಕೆ ನೀಡಿದ್ದಾರೆ.
ಡಿವೈಎಫ್ಐ ಬೈಕ್ ರ್ಯಾಲಿಗೆ ತಡೆಯೊಡ್ಡಿದ ಪೊಲೀಸರು
ಈ ಮಧ್ಯೆ, ಸುರತ್ಕಲ್ ಟೋಲ್ಗೇಟ್ ರದ್ದುಗೊಳಿಸುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ನಡೆಯುತ್ತಿರುವ ರಾತ್ರಿ ಹಗಲ ಧರಣಿಗೆ ಬೆಂಬಲ ಸೂಚಿಸಿ, ಸೋಮವಾರದಂದು ನಗರದ ಉರ್ವಸ್ಟೋರ್ನಿಂದ ಸುರತ್ಕಲ್ಗೆ ಬೈಕ್ ರ್ಯಾಲಿ ನಡೆಸಲು ಡಿವೈಎಫ್ಐ ಕಾರ್ಯಕರ್ತರು ಮುಂದಾಗಿದ್ದರು. ಈ ನಡುವೆಯೇ, ಉರ್ವ ಠಾಣೆಯ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾದ ವೇಳೆ ಪೊಲೀಸರು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣವೇ ಪೊಲೀಸರು ನಾಯಕರ ಸಹಿತ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು, ರ್ಯಾಲಿಗೆ ತಡೆಯೊಡ್ಡಿದ್ದಾರೆ.
"ನಾಲ್ಕು ದಿನದ ಹಿಂದೆಯೇ ಮಂಗಳೂರು ನಗರದ ಡಿಸಿಪಿಗೆ ಅನುಮತಿಗಾಗಿ ಪತ್ರದ ಮೂಲಕ ಮನವಿ ನೀಡಲಾಗಿತ್ತು" ಎಂದು ಹೋರಾಟಗಾರರು ತಿಳಿಸಿದ್ದಾರೆ.

