ರಾಷ್ಟ್ರ ರಾಜಧಾನಿಯಲ್ಲಿ ಕಸಾಪ | ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಉದ್ಘಾಟನೆ

  • ಸಮಗ್ರ ಕನ್ನಡ ಅಭಿವೃದ್ಧಿಗಾಗಿ ಕಾನೂನು ತರುವ ಚಿಂತನೆ: ಜೋಶಿ
  • ಪ್ರತಿ ಕನ್ನಡಿಗನೂ ಕನ್ನಡದ ರಾಯಭಾರಿಯಾಗಿ ಕನ್ನಡ ಬೆಳೆಸಿ

“ಕರ್ನಾಟಕದಲ್ಲಿ ಶೇ. 64 ರಷ್ಟು ಮಂದಿ ಮಾತ್ರ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಕನ್ನಡ ಶಾಲೆಗಳು ತೀರ ದುಃಸ್ಥಿತಿಯಲ್ಲಿವೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ರಾಯಭಾರಿಯಾಗಿ ಕನ್ನಡವನ್ನು ಉಳಿಸಿ ಬೆಳೆಸಬೇಕು. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆ ಮತ್ತು  ಕನ್ನಡ ಸಾಹಿತ್ಯ ಪರಿಷತ್ತು ಯಾವುದೂ ಉಳಿಯುವುದಿಲ್ಲ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು. 

ದೆಹಲಿಯ ಕರ್ನಾಟಕ ಸಂಘದ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕರ್ನಾಟಕ ಕಾನೂನು ಆಯೋಗವು ಸಮಗ್ರ ಕನ್ನಡ ಅಭಿವೃದ್ಧಿಗಾಗಿ ಕಾನೂನನ್ನು ಜಾರಿಗೆ ತರುವ ಚಿಂತನೆ ನಡೆಸುತ್ತಿದೆ” ಎಂದು ತಿಳಿಸಿದರು.

“ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತಿಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡದೆ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಕಾಳಜಿ ಇರುವ ಎಲ್ಲ ಕನ್ನಡಿಗರ ಮನೆ ಬಾಗಿಲಿಗೆ ಕೊಂಡೊಯ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋಟಿ ಸದಸ್ಯರನ್ನು ನೋಂದಣಿ ಮಾಡಿಸಬೇಕೆಂಬ ಮಹತ್ವದ ಗುರಿ ನಮ್ಮದಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ರೈತನ ಮೇಲೆ ಕರಡಿ ದಾಳಿ: ರೈತನ ಸ್ಥಿತಿ ಗಂಭೀರ

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಅಧ್ಯಕ್ಷ ಸಿ ಎಂ ನಾಗರಾಜ, ಗೌರವ ಕಾರ್ಯದರ್ಶಿ ಚಂದ್ರಶೇಖರ ಎನ್ ಪಿ ಹಾಗೂ ಗೌರವ ಕೋಶಾಧ್ಯಕ್ಷ ಸಂತೋಷ್ ಜೆ ಅವರಿಗೆ ಆದೇಶ ಪತ್ರ ನೀಡಲಾಯಿತು. ನಂತರ ಅಧ್ಯಕ್ಷ ಸಿ ಎಂ ನಾಗರಾಜ ಅವರಿಗೆ ಕನ್ನಡ ಬಾವುಟ ನೀಡಿ ದೆಹಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧಿಕೃತ ಘೋಷಣೆ ಮಾಡಲಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್