ಕೋಡಿಹಳ್ಳಿ ಚಂದ್ರಶೇಖರ್‌| ಪರ್ಯಾಯ ರಾಜಕೀಯ ನಡೆಯ ತೀರ್ಮಾನ

Formers
  • ಏ. 21ರಂದು ರೈತರ ಬೃಹತ್ ಸಮಾವೇಶ, ಹೊಸ ಪಕ್ಷ ಅಸ್ತಿತ್ವಕ್ಕೆ ತರುವ ಸೂಚನೆ
  • ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ

ರಾಜ್ಯದಲ್ಲಿರುವ ಎರಡು ರಾಷ್ಟ್ರೀಯ ಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿದ್ದು, ಪರ್ಯಾಯ ನಡೆ ಕುರಿತು ಒಂದು ನಿಲುವಿಗೆ ಬರಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಹಾಸನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬುಧವಾರ ಹಮ್ಮಿಕೊಂಡ 'ಮಡಿದ ರೈತರಿಗೆ' ಶ್ರದ್ಧಾಂಜಲಿ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಿರ್ಣಯ ರೂಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ಏ. 21ರಂದು ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ತೆಗೆಯುವುದಾಗಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈವರೆಗೂ ಅದರ ಗೋಜಿಗೆ ಹೋಗಿಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಕಾಯ್ದೆ  ಹಿಂಪಡೆಯದಿದ್ದರೆ ಏ. 21ರಂದು ಇದಕ್ಕೆ ಸಂಬಂಧಪಟ್ಟಂತೆ ನಾವೇ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದರು.

"ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ರೈತ ವಿರೋಧಿ ನಡೆ ಅನುಸರಿಸುತ್ತಿರುವ ಆಳುವ ಪಕ್ಷಗಳಿಗೆ ಸೆಡ್ಡು ಹೊಡೆಯಬೇಕು. ಮೊಬೈಲ್ ಮಾರುವ ಹುಡುಗ ಮುಖ್ಯಮಂತ್ರಿ ವಿರುದ್ಧ ಚುನಾವಣೆ ಗೆಲ್ಲುತ್ತಾನೆಂದರೆ ರೈತನೊಬ್ಬ ಯಾಕೆ ಗೆಲ್ಲಬಾರದು. ಯುವಕರು, ಹೊಸ ತಲೆಮಾರಿನವರು ರಾಜಕೀಯ ಪ್ರವೇಶ ಮಾಡಬೇಕಿದೆ" ಎಂದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಈದಿನ.ಕಾಂನೊಂದಿಗೆ ಮಾತನಾಡಿ, "ರಾಜ್ಯದಲ್ಲಿ ಆಳ್ವಿಕೆ ನಡೆಸಿರುವ ಎಲ್ಲ ಪಕ್ಷಗಳು, ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ಈ ಹಿಂದಿನ ಬೆಳಗಾವಿ ಮತ್ತು ಬೆಂಗಳೂರು ಅಧಿವೇಶನಗಳಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲೂ ಹಿಂಪಡೆಯದಿದ್ದರೆ ಏ. 21ರಂದು ನಡೆಯುವ ರೈತರ ಸಮಾವೇಶದಲ್ಲಿ ಪರ್ಯಾಯ ರಾಜಕೀಯ ನಡೆಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಯುವಕರು, ರೈತರು ರಾಜಕೀಯದಲ್ಲಿ ಸಕ್ರಿಯರಾಗಬೇಕು ಅದಕ್ಕಾಗಿ ನಾವು ರೈತರ ಪ್ರತಿನಿಧಿಯಾಗಲು ಚಿಂತನೆ ನಡೆಸಿದ್ದೇವೆ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಲು ತಯಾರಿ ನಡೆಸಿದ್ದು, ಜನಾಭಿಪ್ರಾಯ, ರೈತರ ಬೆಂಬಲ ತಮಗೆ ಮತಗಳಾಗಿ ಪರಿವರ್ತನೆಗೊಳ್ಳುವ ಬಗ್ಗೆ ಆಶಯ ವ್ಯಕ್ತಪಡಿಸಿದರು.

ಅರಸೀಕೆರೆ ರೈತ ಸಂಘದ ಅಧ್ಯಕ್ಷ ಕೆ ಪಿ ಮೂರ್ತಿ, ಶಾಂತಿ ಗ್ರಾಮ ಹೋಬಳಿ ಅಧ್ಯಕ್ಷ ಬೋರಣ್ಣ, ಸಾಲಗಾಮೆ ಹೋಬಳಿ ಅಧ್ಯಕ್ಷ ಪುಟ್ಟರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಶ್ರೀಧರ್ ಶೆಟ್ಟಿ, ಜಿಲ್ಲಾಧ್ಯಕ್ಷ ಬಾಬು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್