ಟಿಪ್ಪು ಬ್ಯಾನರ್ ಹರಿದ ಪ್ರಕರಣ| ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

  • ಬೆಂಗಳೂರು ನಗರದ‌ ಕೆಲವೆಡೆ ಟಿಪ್ಪು ಫ್ಲೆಕ್ಸ್ ಹರಿದು ಹಾಕಲಾಗಿತ್ತು
  • ಕಾಂಗ್ರೆಸ್ ಮುಖಂಡ ಮಂಜುನಾಥ್ ದೂರು ದಾಖಲಿಸಿದ್ದರು

ಟಿಪ್ಪು ಸುಲ್ತಾನ್ ಭಾವಚಿತ್ರದ ಫ್ಲೆಕ್ಸ್ ಮತ್ತು ಕಟೌಟ್‌ಗಳನ್ನು ಹರಿದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಭಾನುವಾರ ನಾಗಸಂದ್ರದಲ್ಲಿ ಬಂಧಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ʼಸ್ವಾತಂತ್ರ್ಯ ನಡಿಗೆʼ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಬೆಂಗಳೂರು ನಗರದ ಕೆ ಆರ್ ವೃತ್ತ ಹಾಗೂ ಹಡ್ಸನ್ ವೃತ್ತದಲ್ಲಿ ಅಳವಡಿಸಿದ್ದ ಟಿಪ್ಪು ಭಾವ ಚಿತ್ರ ಇರುವ ಫ್ಲೆಕ್ಸ್‌ಗಳನ್ನು ಪುನೀತ್ ಕೆರೆಹಳ್ಳಿ ಮತ್ತು ಆತನ ಸಂಗಡಿಗರು ಹರಿದುಹಾಕಿದ್ದರು. ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ಭಾವಚಿತ್ರ ವಿವಾದಕ್ಕೆ ಪ್ರತೀಕಾರವಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಆತ ಹೇಳಿಕೆ ನೀಡಿದ್ದ ವೀಡಿಯೋ ವೈರಲ್‌ ಆಗಿತ್ತು. 

ಈ ಬಗ್ಗೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪೀಣ್ಯದ ನಾಗಸಂದ್ರದಲ್ಲಿ ಭಾನುವಾರ ತನ್ನ ಚಿಕ್ಕಪ್ಪನ ಮನೆಯಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಪುನೀತ್ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ ನಡಿಗೆ| ಟಿಪ್ಪು ಫ್ಲೆಕ್ಸ್ ಕಿತ್ತು ಹಾಕಿದ ಘಟನೆ: ಕ್ರಮಕೈಗೊಳ್ಳಲು ಡಿ ಕೆ ಶಿವಕುಮಾರ್ ಆಗ್ರಹ

ಪುನೀತ್ ಕೆರೆಹಳ್ಳಿ, ಅನಂತ್ ರಾವ್, ಕಿರಣ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆತಂದು ಬಂಧನ ಪ್ರಕ್ರಿಯೆ ಮುಗಿಸಿದ್ದಾರೆ. ಭಾನುವಾರ ಸಂಜೆಯ ನಂತರ ನ್ಯಾಯಾಧೀಶರ ಮುಂದೆ ಬಂಧಿತರನ್ನು ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್