ಶ್ರವಣಬೆಳಗೊಳದ ಪ್ರಾಕೃತ ವಿಶ್ವವಿದ್ಯಾಲಯ ಕಟ್ಟಡ ಹಸ್ತಾಂತರ

Shravanabelagola
  • ಪ್ರಾಕೃತ ವಿಶ್ವವಿದ್ಯಾಲಯ ಕಟ್ಟಡ ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರ
  • ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಉಪಸ್ಥಿತಿ

ದೇಶದ ಸಂಸ್ಕೃತಿ ಪರಂಪರೆಗೆ ಪ್ರಾಕೃತ ಭಾಷೆಯ ಕೊಡುಗೆ ಅಪಾರ. ಅದೇ ರೀತಿ ಐತಿಹಾಸಿಕ ಹಿರಿಮೆಯ, ಪುಣ್ಯಭೂಮಿ ಶ್ರವಣಬೆಳಗೊಳ ವಿಶ್ವದ ಶಾಂತಿಯ ಪ್ರತೀಕ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದರು. ಶ್ರವಣಬೆಳಗೊಳದ ಧವಳತೀರ್ಥಂನಲ್ಲಿ ಆಯೋಜಿಸಿದ್ದ ಪ್ರಾಕೃತ ವಿಶ್ವವಿದ್ಯಾಲಯ ಕಟ್ಟಡಗಳನ್ನು ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Image
Shravanabelagola

2018ರಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರಿಸಿದರು.

ಶ್ರವಣಬೆಳಗೊಳ ಜೈನಮುನಿಗಳು ನೆಲೆಸಿದ್ದ, ತಪಸ್ಸುಗೈದ ಪುಣ್ಯಭೂಮಿಯಾಗಿದ್ದು, ಇದರ ಅಭಿವೃದ್ಧಿಗೆ ಸಿಎಂ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಶ್ರವಣಬೆಳಗೊಳದ ಅಭಿವೃದ್ಧಿಗೆ ಶ್ರಮಿಸಿರುವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.

ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ, "ಶ್ರವಣಬೆಳಗೊಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಪಾರ ಕೊಡುಗೆ ನೀಡಿವೆ. ಕಳೆದ ಬಾರಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಶ್ರವಣಬೆಳಗೊಳ ಜೈನ ಕ್ಷೇತ್ರ ಅಭಿವೃದ್ದಿಗೆ ₹ 50 ಕೋಟಿ ಘೋಷಿಸಿದ್ದು, ಅದನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರು ನೆರವಾಗಬೇಕು. ಶ್ರವಣಬೆಳಗೊಳ ಬೆಳೆಯುತ್ತಿದ್ದು, ಹೊರ ವರ್ತುಲ ರಸ್ತೆ ನಿರ್ಮಾಣ ಅಗತ್ಯವಿದೆ. ಎಲ್ಲ ಮನೆಗಳನ್ನು ಒಳಚರಂಡಿ ವ್ಯವಸ್ಥೆಯ ವ್ಯಾಪ್ತಿಗೆ ತರಬೇಕಿದೆ. ಇದಕ್ಕೆ ಪೂರಕ ಅನುದಾನ ಒದಗಿಸಲು ಸಚಿವರು ಸಹಕರಿಸಬೇಕು" ಎಂದು ಮನವಿ ಮಾಡಿದರು. 

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, "ಪ್ರಾಕೃತ ಹಾಗೂ ಸಂಸ್ಕೃತ ಭಾಷೆಗಳು ದೇಶದಲ್ಲಿ ದೊಡ್ಡ ಇತಿಹಾಸ ಮತ್ತು ಪರಂಪರೆ ಹೊಂದಿದ್ದು, ಅವುಗಳನ್ನು ರಕ್ಷಿಸಲು ಎಲ್ಲರ ಸಹಕಾರ ಬೇಕು. ಜೈನ ಪರಂಪರೆಗೆ ಪ್ರಾಕೃತ ಭಾಷೆಯ ಕೊಡುಗೆ ದೊಡ್ಡದಿದೆ. ಈ ಭಾಷೆಯಲ್ಲಿ ಹಲವು ಮಹತ್ವದ ಘಟನೆಗಳು ದಾಖಲಾಗಿವೆ. ಶ್ರವಣಬೆಳಗೊಳಕ್ಕೆ 5 ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸ ಇದ್ದು, ಅವುಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ" ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು, ಉಪ ವಿಭಾಗಾಧಿಕಾರಿ ಬಿ ಎ ಜಗದೀಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ ಜಿ ನಿಖಿಲ್‌ಗೌಡ, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧ ಲೋಹಿತ್, ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎ ಸಿ ವಿದ್ಯಾಧರ್, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ. ಜಯಕುಮಾರ್, ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಎಂ ವಿ ಮುರಳಿ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್