ಚಾಮರಾಜನಗರ | ಕಾಡಂಚಿನ ನಿವಾಸಿಗಳ ನಿತ್ಯ ಸಂಕಟಕ್ಕೆ ತಾತ್ಕಾಲಿಕ ಪರಿಹಾರ

  • ಗರ್ಭಿಣಿ, ಅನಾರೋಗ್ಯ ಪೀಡಿತರನ್ನು ಡೋಲಿಯಲ್ಲೇ ಹೊತ್ತೊಯ್ಯವ ಸ್ಥಿತಿ ಇತ್ತು 
  • ಮಲೆ ಮಹದೇಶ್ವರ ಅರಣ್ಯ ವಲಯದ 15 ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ

ದಟ್ಟವಾದ ಕಾಡಂಚಿನ 18 ಗ್ರಾಮಗಳಲ್ಲಿ ಅನೇಕ ಕುಟುಂಬಗಳು ಆಧುನಿಕ ಜಗತ್ತಿಗೂ ತಮಗೂ ಸಂಪರ್ಕವೇ ಇಲ್ಲದಂತೆ ಬದುಕು ಸಾಗಿಸುತ್ತಿವೆ. ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಡೋಲಿ ಮೇಲೆಯೇ ಹೊತ್ತು ಸಾಗಿಸುವ ದುಃಸ್ಥಿತಿ ಇಂದಿಗೂ ಇದೆ.

ಇದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಸುತ್ತಮುತ್ತಲಿನ ಗ್ರಾಮಗಳ ಕಥೆ. ಈ ಅರಣ್ಯ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ಗ್ರಾಮಗಳಿವೆ. ಮಲೆ ಮಹದೇಶ್ವರ ಬೆಟ್ಟವೇ ಈ ಗ್ರಾಮಗಳ ಜನರಿಗೆ ಆಶ್ರಯ ತಾಣ. ಗ್ರಾಮಸ್ಥರ ಅಗತ್ಯಗಳು, ಆರೋಗ್ಯ, ಪಡಿತರ ಹೀಗೆ ಪ್ರತಿಯೊಂದಕ್ಕೂ 8 ರಿಂದ 12 ಕಿ.ಮೀ ಕಾಡುದಾರಿಯಲ್ಲಿ ನಡೆದು ಸಾಗಬೇಕು. ಮಲೆ ಮಹದೇಶ್ವರ ವನ್ಯಧಾಮದ ಸುತ್ತಲಿನ ಬಹುತೇಕ ಗ್ರಾಮಗಳಲ್ಲಿ  ‘ಬೇಡಗಂಪಣ’ ಮತ್ತು ಆದಿವಾಸಿ ‘ಸೋಲಿಗ’ ಸಮುದಾಯದ ಜನರು ವಾಸವಿದ್ದಾರೆ.

ಕಾಡಂಚಿನ ಈ 18 ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ. ರೋಗಿಯನ್ನು ಡೋಲಿಯಲ್ಲಿ ಮಲಗಿಸಿ ಹೆಗಲ ಮೇಲೆಯೇ ಕಿಲೋಮೀಟರ್‌ಗಟ್ಟಲೇ ಹೊತ್ತು ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ಜತೆಗೆ ಕಾಡು ಪ್ರಾಣಿಗಳ ಸಮಸ್ಯೆಯನ್ನು ಎದುರಿಸಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರುವ ಸಂಭವವೇ ಹೆಚ್ಚು..

ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಕಾಡು ಪ್ರಾಣಿಗಳ ಭಯದ ನಡುವೆ ಹೆಜ್ಜೆ ಹಾಕುವ ಪರಿಸ್ಥಿತಿ  ಇತ್ತು. ಹೆಚ್ಚು ಮಕ್ಕಳು ಭಯದಿಂದ ವಿಧ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲಿಯೇ ಉಳಿದುಬಿಡುತ್ತಿದ್ದರು. ಪೋಷಕರು ಕೂಡ ಕಾಡು ಪ್ರಾಣಿಗಳ ಭಯದಿಂದ ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದರು. ವಾರಕ್ಕೆ ಒಂದು ದಿನ ಶಿಕ್ಷಕರೇ ಇಲ್ಲಿಗೆ ಬಂದು ಪಾಠ ಮಾಡಿ ಹೋಗುತ್ತಾರೆ.

ಈ ಬಗ್ಗೆ ಸ್ಥಳೀಯ ನಿವಾಸಿ ಮಾದೇಶ, ಈ ದಿನ.ಕಾಮ್ ಜತೆಗೆ ಮಾತನಾಡಿ, “ಪಡಿತರ ತೆಗೆದುಕೊಂಡು ಹೋಗಲು ಮಲೆ ಮಹದೇಶ್ವರ ಬೆಟ್ಟಕ್ಕೆ ಬರಬೇಕು. ಪಡಿತರವನ್ನು ತಲೆಯ ಮೇಲೆಯೇ ಹೊತ್ತು ಸಾಗಿಸಬೇಕಿತ್ತು. ಇಲ್ಲಿನ ಬಹುತೇಕರು ಶಾಲೆ ಮೆಟ್ಟಿಲನ್ನೇ ಹತ್ತಿದವರಲ್ಲ. ಜತೆಗೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಕಂಡರೆ ಭಯ. ಹಾಗಾಗಿ ಸಮಸ್ಯೆಗಳ ಕುರಿತು ಈವರೆಗೂ ಯಾರೂ ಧ್ವನಿ ಎತ್ತಿದವರಲ್ಲ“ ಎಂದು ವಿವರಿಸಿದರು.

“ಈ ಗ್ರಾಮಗಳಿಗೆ ಮೂಲ ಸೌಕರ್ಯಗಳೇ ಇಲ್ಲ. ಪಡಿತರ ಇತ್ಯಾದಿಗಳಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ವೇಳೆ ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ನಿದರ್ಶನಗಳು ಸಾಕಷ್ಟಿವೆ. ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ವೇಳೆ ದಾರಿ ಮಧ್ಯೆಯೇ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗು ಮೃತಪಟ್ಟಿರುವ ಘಟನೆಗಳು ನಡೆದಿವೆ. ಅದೇ ರೀತಿ ರೋಗಿಗಳೂ ಮೃತಪಟ್ಟಿದ್ದಾರೆ” ಎಂದು ಸಮಸ್ಯೆಗಳನ್ನು ತೆರೆದಿಟ್ಟರು.

ಅರಣ್ಯ ಇಲಾಖೆ ಸ್ಪಂದನೆ: 
ಚಾಮರಾಜನಗರ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಾಲ್ಕು ಜೀಪ್‌ಗಳನ್ನು ಖರೀದಿಸಿದ್ದು, ಶನಿವಾರದಿಂದಲೇ ಅವುಗಳ ಸಂಚಾರ ಪ್ರಾರಂಭವಾಗಿದೆ. ಇದರಿಂದ ತಾತ್ಕಾಲಿಕ ಪರಿಹಾರ ಸಿಕ್ಕ ಖುಷಿಯಲ್ಲಿ ಗ್ರಾಮಸ್ಥರು ಇದ್ದಾರೆ.

ಅತ್ಯಂತ ದುರ್ಗಮ ರಸ್ತೆಗಳಲ್ಲಿಯೂ ಸಂಚರಿಸುವ ಸಾಮರ್ಥ್ಯವನ್ನು ಈ ಜೀಪ್‌ಗಳು ಹೊಂದಿವೆ. ಶುಕ್ರವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ಅವರು ವಾಹನಗಳಿಗೆ ಚಾಲನೆ ನೀಡಿದ್ದಾರೆ. ಈ ವಾಹನಗಳ ಖರೀದಿಗಾಗಿ ಜಿಲ್ಲಾಡಳಿತ 55 ಲಕ್ಷ ರೂಪಾಯಿ ವೆಚ್ಚ ಮಾಡಿದೆ.

Image

ಮಾರ್ಗಗಳು:

ನಾಲ್ಕು ಮಾರ್ಗಗಳಿಗೆ ನಾಲ್ಕು ಜೀಪ್‌ಗಳನ್ನು ನಿಯೋಜಿಸಲಾಗಿದೆ. ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಇಂಡಿಗನತ್ತ, ಮೆದಗನಾಣೆ, ಮೆಂದಾರೆ, ನಾಗಮಲೆ ಮಾರ್ಗ,  ಪಡಸಲನತ್ತ – ಪಾಲಾರ್ ಮಾರ್ಗ, ಕೊಕ್ಬರೆ, ತೇಕಾಣೆ, ತೋಕೆರೆ, ದೊಡ್ಡಾಣೆ ಮಾರ್ಗ, ಹನೂರು ವನ್ಯಜೀವಿ ವಲಯದ ಕಾಂಚಳ್ಳಿ, ಪಚ್ಚೆದೊಡ್ಡಿ ಮಾರ್ಗಗಳನ್ನು ಗುರುತು ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್‌ ಕುಮಾರ್‌ ವಿರುದ್ಧ ಜಾತಿ ನಿಂದನೆ ಪ್ರಕರಣ

ಉಚಿತ ಸೇವೆ:

ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಜೀಪ್‌ಗಳನ್ನು ಅರಣ್ಯ ಇಲಾಖೆಯೇ ನಿರ್ವಹಿಸಲಿದ್ದು, ಚಾಲಕರನ್ನೂ ನೇಮಿಸಿದೆ. ಆರೋಗ್ಯ ಸಮಸ್ಯೆ, ಶಾಲಾ ಮಕ್ಕಳು ಹಾಗೂ ಪಡಿತರ ತರಲು ಹೋಗುವವರು ಈ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಉಳಿದಂತೆ ಇತರೆ ಕೆಲಸಗಳಿಗೆ ಪ್ರಯಾಣಿಸುವವರಿಗೆ ನಿರ್ವಹಣೆ ವೆಚ್ಚ ಸರಿದೂಗಿಸಲು ಕನಿಷ್ಠ ಹಣ ನಿಗದಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

“ಗರ್ಭಿಣಿಯರು, ಅನಾರೋಗ್ಯಕ್ಕೆ ತುತ್ತಾದವರನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ತರುತ್ತಿದ್ದರು. ಈ ವೇಳೆ ಸಾವು ನೋವು ಸಂಭವಿಸುತ್ತಿದ್ದವು. ವಾರಕ್ಕೆ ಒಮ್ಮೆ ಮಾತ್ರ ಶಿಕ್ಷಕರು ಗ್ರಾಮಕ್ಕೆ ಭೇಟಿ ನೀಡಿ ಪಾಠ ಮಾಡುತ್ತಿದ್ದರು. ಗ್ರಾಮಸ್ಥರು ಪಡಿತರವನ್ನು ತಲೆಯ ಮೇಲೆಯೇ ಹೊತ್ತು ತರುತ್ತಿದ್ದರು. ಈ ಎಲ್ಲವನ್ನೂ ಗಮನಿಸಿದ್ದೆ. ಹಾಗಾಗಿ ಜಿಲ್ಲಾಡಳಿತದ ಜತೆಗೆ ಚರ್ಚಿಸಿ ವಾಹನ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.

“ಅರಣ್ಯ ವ್ಯಾಪ್ತಿಯ ಗ್ರಾಮಗಳಾದ್ದರಿಂದ ಇಲ್ಲಿ ರಸ್ತೆ ನಿರ್ಮಾಣ ಮಾಡುವಂತಿಲ್ಲ. ಇಲ್ಲಿಗೆ ಬೇರೆ ವಾಹನಗಳ ಪ್ರವೇಶ ತುಂಬಾ ಕಡಿಮೆ, ಆದ್ದರಿಂದ ಕಚ್ಚಾ ರಸ್ತೆಗಳೇ ಇವೆ. ಸದ್ಯ 15 ಗ್ರಾಮಗಳಿಗೆ ವಾಹನಗಳ ವ್ಯವಸ್ಥೆ ಮಾಡಿದ್ದು, ಇನ್ನೂ ಕೆಲವು ಗ್ರಾಮಗಳಿಗೆ ವಿಸ್ತರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ” ಎಂದು ಡಿಸಿಎಫ್ ವಿ. ಏಡುಕೊಂಡಲು ಮಾಹಿತಿ ನೀಡಿದರು.

ಒಟ್ಟಿನಲ್ಲಿ ಅರಣ್ಯದ ದುರ್ಗಮ ಹಾದಿಯಲ್ಲಿ ಓಡಾಡುತ್ತಿದ್ದ ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವಾಹನಗಳು ಆಂಬ್ಯುಲೆನ್ಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ. ಅರಣ್ಯ ಇಲಾಖೆ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. 

ನಿಮಗೆ ಏನು ಅನ್ನಿಸ್ತು?
2 ವೋಟ್