ಬೆಂಗಳೂರು ಗ್ರಾಮಾಂತರ | ಚರ್ಮಗಂಟು ರೋಗಕ್ಕೆ ತುತ್ತಾದ ರಾಸುಗಳಿಗೆ ಚಿಕಿತ್ಸೆ; 833 ಗುಣಮುಖ

  • ಸ್ವಚ್ಛತೆಗೆ ಆದ್ಯತೆ, ನಿಯಂತ್ರಣ ಕ್ರಮ ಅನುಸರಿಸಿದರೆ ಜಾನುವಾರು ʼಸೇಫ್‌ʼ
  • ಚರ್ಮಗಂಟು ರೋಗ ನಿಂತ್ರಣಕ್ಕೆ ಮೇಕೆ ಸಿಡುಬು ರೋಗದ ಲಸಿಕೆ ಬಳಕೆ

ರಾಸುಗಳಿಗೆ ಇನ್ನಿಲ್ಲದಂತೆ ಕಾಡುತ್ತಿರುವ ಚರ್ಮಗಂಟು ರೋಗಕ್ಕೆ ನಿಗದಿತವಾದ ಚುಚ್ಚುಮದ್ದು ಇಲ್ಲದ ಕಾರಣ ರೋಗದ ಲಕ್ಷಣ ಹಾಗೂ ಹಂತವನ್ನು ಗಮನಿಸಿ ಚಿಕಿತ್ಸೆ ಮಾಡಲಾಗುತ್ತಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 833 ರಾಸುಗಳು ಗುಣಮುಖವಾಗಿವೆ.

ಜಿಲ್ಲೆಯ 1,62,000 ಜಾನುವಾರುಗಳಲ್ಲಿ ಅ.20ರ ತನಕದ ಮಾಹಿತಿ ಪ್ರಕಾರ 1,094 ರಾಸುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು, 30 ದನಕರುಗಳು ಸಾವನ್ನಪ್ಪಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿರುವ ಪರಿಣಾಮ ಬಹುತೇಕ ರಾಸುಗಳು ರೋಗದಿಂದ ಗುಣಮುಖಗೊಂಡಿವೆ.

Eedina App

ಈ ಬಗ್ಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ ಜಿ ಎಂ ನಾಗರಾಜ್‌ ಅವರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, "ರೋಗದ ತೀವ್ರತೆಯನ್ನು ಗಂಭಿರವಾಗಿ ಪರಿಗಣಿಸಿದ್ದು, ಪಶುಪಾಲನಾ ಇಲಾಖೆ ಮತ್ತು ಬೆಂಗಳೂರು ಹಾಲು ಒಕ್ಕೂಟದಿಂದ ಲಸಿಕೆ ಹಾಕುವ ಅಭಿಯಾನವನ್ನು ಆರಂಭಿಸಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಇದುವರೆಗೂ 58,394 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನು 20,000 ಡೋಸ್‌ ದಾಸ್ತಾನಿದ್ದು, ಹೆಚ್ಚುವರಿ ಲಸಿಕೆ ಬರಲಿದೆ" ಎಂದರು.

ರೋಗಕ್ಕೆ ನೀಡುವ ಲಸಿಕೆ ಯಾವುದು?

AV Eye Hospital ad

"ಚರ್ಮಗಂಟು ರೋಗಕ್ಕಾಗಿಯೇ ಲಸಿಕೆ ಇಲ್ಲ. ಆದುದರಿಂದ ಭಾರತ ಸರ್ಕಾರದ ತಜ್ಞರಿಂದ ಶಿಫಾರಸ್ಸು ಮಾಡಲಾದ ಮೇಕೆ ಸಿಡುಬು ರೋಗದ ಲಸಿಕೆಯನ್ನೇ ಈ ರೋಗಕ್ಕೆ ನೀಡಲಾಗುತ್ತಿದೆ. ಚರ್ಮಗಂಟು ರೋಗ ಕಾಣಿಸಿಕೊಂಡ 5 ಕಿ.ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಇರುವ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದೆ" ಎಂದು ಡಾ. ನಾಗರಾಜ್‌ ತಿಳಿಸಿದರು. 

"ಪಶು ಇಲಾಖೆ ಆಸ್ಪತ್ರೆಗಳ ಮುಂದೆ ಚರ್ಮಗಂಟು ರೋಗದ ಕುರಿತು ಫ್ಲೆಕ್ಸ್‌ ಹಾಕಿ, ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ. ಇದು ಆತಂಕಕಾರಿಯಾದ ರೋಗವಲ್ಲ, ಆದರೆ, ರೋಗ ಕಾಣಿಸಿಕೊಂಡ ಕೂಡಲೇ ಪಶು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಮಾಡಿಸಬೇಕು. ತಡ ಮಾಡಿದರೆ ರಾಸುಗಳು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ" ಎಂದು ಅವರು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಸತ್ಯಶೋಧನೆ | ಜಾನುವಾರು ಚರ್ಮಗಂಟು ರೋಗ ಮನುಷ್ಯರಿಗೂ ಹರಡುತ್ತದೆಯೇ?

"ರೋಗ ಕಂಡು ಬಂದ ನಂತರ ಚಿಕಿತ್ಸೆ ಮಾಡಿಸುವ ಬದಲು ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಆದ್ಯತೆ ಆಗಬೇಕು. ಕೊಟ್ಟಿಗೆ, ಚರಂಡಿ, ಗುಂಡಿಗಳಲ್ಲಿನ ನೀರು ನಿಲ್ಲದಂತೆ ಸ್ವಚ್ಛ ಮಾಡಬೇಕು. ಸೊಳ್ಳೆ ಉತ್ಪತ್ತಿಯಾಗುವ ಕಡೆ ಫಾಗ್ಗಿಂಗ್‌ ಮಾಡಿಸುತ್ತಿದ್ದೇವೆ. ತೆರೆದ ಬಾವಿ, ಕೆರೆಗಳಲ್ಲಿ ಸಾಮೂಹಿಕವಾಗಿ ಜಾನುವಾರುಗಳಿಗೆ ನೀರು ಕುಡಿಸುವುದನ್ನು, ಜಾನುವಾರು ಸಾಗಾಣಿಕೆ, ರೋಗಪೀಡಿತ ರಾಸುಗಳೊಂದಿಗೆ ಆರೋಗ್ಯಯುತ ಜಾನುವಾರುಗಳನ್ನು ಇರಿಸುವುದನ್ನು ನಿಷೇಧಿಸಬೇಕು. ಹಲವೆಡೆ ಸೊಳ್ಳೆಪರದೆ ಬಳಸಲು ಸಲಹೆ ನೀಡಲಾಗಿದೆ" ಎಂದು ಡಾ. ನಾಗರಾಜ್‌ ಅವರು ಮಾಹಿತಿ ನೀಡಿದರು.

"ಚರ್ಮಗಂಟು ರೋಗದ ಹರಡುವ ಮತ್ತು ಅದರ ನಿಯಂತ್ರಣ ಕ್ರಮಗಳು ಹಾಗೂ ರೋಗ ಬಾಧಿಸುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ಮಾಡುವ ವಿಧಾನ ಕುರಿತು ಪಶು ಇಲಾಖೆ ಸಿಬ್ಬಂದಿಗೆ ತಜ್ಞ ವೈದ್ಯರಿಂದ ತರಬೇತಿ ಕೊಡಿಸಲಾಗುತ್ತಿದೆ. ಜೊತೆಗೆ ಮನೆ ಔಷಧಿ ಬಳಸಿ ರೈತರು ಚಿಕಿತ್ಸೆ ನೀಡುವ ಕುರಿತಂತೆಯೂ ಮನವರಿಕೆ ಮಾಡಿಕೊಡಲಾಗುತ್ತಿದೆ" ಎಂದು ಅವರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app