
- ಅರೆ ಬೆತ್ತಲೆ ಪ್ರತಿಭಟನೆ, ನಂತರ ತಲೆ ಬೋಳಿಸಿಕೊಳ್ಳುವುದಾಗಿ ಎಚ್ಚರಿಕೆ
- ಭಿಕ್ಷಾಟನೆ ಮಾಡಿ ಅಲೆಮಾರಿಗಳಿಂದ ವಿಭಿನ್ನ ಪ್ರತಿಭಟನೆ
ಕಳೆದ ನಾಲ್ಕು ದಿನಗಳಿಂದ ಬುಡಕಟ್ಟು ಸಮುದಾಯದ ಜನರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿ ಬುಧವಾರ ಪಟ್ಟಣದಲ್ಲಿ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಅಲೆಮಾರಿಗಳು ವಾಸಿಸುತ್ತಿರುವ ಜಾಗಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ನಾಡ ಕಚೇರಿ ಎದುರು ಅಕ್ಟೋಬರ್ 2ರಿಂದ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದಾರೆ. ಆದರೆ ಈವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಆಲಿಸಿಲ್ಲ.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಮುಖಂಡ ಹಂದಿಜೋಗಿ ರಾಜಣ್ಣ, ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೆ, ಈವರೆಗೂ ಯಾವ ಅಧಿಕಾರಿಯೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ನಾವು ಕೆಲಸ ಕಾರ್ಯ ಬಿಟ್ಟು ಧರಣಿ ಕುಳಿತಿರುವುದರಿಂದ ನಮ್ಮಲ್ಲಿ ಇದ್ದ ಅಕ್ಕಿ, ದಿನಸಿ ಎಲ್ಲವೂ ಖಾಲಿಯಾಗಿತ್ತು. ಹಾಗಾಗಿ ಪಟ್ಟಣದಲ್ಲಿ ಊಟಕ್ಕಾಗಿ ಭಿಕ್ಷಾಟನೆ ಮಾಡಿದ್ದೇವೆ” ಎಂದು ತಿಳಿಸಿದರು.
“ಭಿಕ್ಷಾಟನೆಗೆ ಹೋದ ವೇಳೆ ಅನೇಕರು ಕೈಲಾದ ಸಹಾಯ ಮಾಡಿದ್ದಾರೆ. ಕೆಲವರು ಹಣ ನೀಡಿದರೆ ಮತ್ತೆ ಕೆಲವರು ಅಕ್ಕಿ ಬೇಳೆ ನೀಡಿದರು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ವಸತಿ ಸೌಲಭ್ಯಕ್ಕಾಗಿ ಆಮರಣಾಂತ ಹೋರಾಟ ಆರಂಭಿಸಿದ ಅಲೆಮಾರಿ ಸಮುದಾಯ
ತಲೆ ಬೋಳಿಸಿಕೊಳ್ಳುವುದಾಗಿ ಎಚ್ಚರಿಕೆ
“ಅಧಿಕಾರಿಗಳು ಗುರುವಾರವೂ ಯಾವುದೇ ಸ್ಪಂದನೆ ಮಾಡದಿದ್ದರೆ, ಅರೆ ಬೆತ್ತಲೆ ಪ್ರತಿಭಟನೆ ಮಾಡಲಾಗುವುದು. ಅದರ ಮಾರನೆ ದಿನ ಪುರುಷರು ತಲೆ ಬೋಳಿಸಿಕೊಳ್ಳುತ್ತೇವೆ. ಅದಕ್ಕೂ ಸ್ಪಂದಿಸದಿದ್ದರೆ, ಮಹಿಳೆಯರು ತಲೆ ಕೂದಲು ಬೋಳಿಸಿಕೊಂಡು ಪ್ರತಿಭಟನೆ ಮಾಡಲಿದ್ದೇವೆ. ಹೀಗೆ ಹಂತ ಹಂತವಾಗಿ ಹೋರಾಟದ ತೀವ್ರತೆ ಹೆಚ್ಚಿಸಲಾಗುವುದು” ಎಂದು ಹಂದಿಜೋಗಿ ರಾಜಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.