
- ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮುಂಭಾಗದ ಹೆದ್ದಾರಿ ಬಳಿ ಕೃತ್ಯ
- ಗುಬ್ಬಿ ಪಟ್ಟಣ ಪಂಚಾಯಿತಿ 9ನೇ ವಾರ್ಡ್ನ ಮಾಜಿ ಸದಸ್ಯ ನರಸಿಂಹಮೂರ್ತಿ ಹತ್ಯೆ
ಗುಬ್ಬಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಮಚ್ಚು, ಲಾಂಗ್ನಿಂದ ಹಲ್ಲೆ ನಡೆಸಿ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ (50) ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಹೆದ್ದಾರಿ ಪಕ್ಕದಲ್ಲಿ ಕೊಲೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಸ್ನೇಹಿತರ ಜತೆ ಚಹಾ ಕುಡಿಯುತ್ತ ಕುಳಿತಿದ್ದಾಗ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಗುಬ್ಬಿ ಪಟ್ಟಣ ಪಂಚಾಯಿತಿ 9ನೇ ವಾರ್ಡ್ನ ಮಾಜಿ ಸದಸ್ಯರಾಗಿದ್ದ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ ಡಿಎಸ್ಎಸ್ ತಾಲೂಕು ಸಂಚಾಲಕರಾಗಿದ್ದರು. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣದ ವಿಚಾರವಾಗಿ ಹಳೆ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇನ್ನೂ ದೃಢಪಟ್ಟಿಲ್ಲ.

ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ವಿಷಯ ತಿಳಿದು ಶವಾಗಾರಕ್ಕೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಭೇಟಿ ನೀಡಿ, ನರಸಿಂಹಮೂರ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ದಲಿತರ ಆಕ್ರೋಶ:
ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇತ್ತೀಚೆಗೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿತ್ತು. ತಾಲ್ಲೂಕಿನ ಕರಿಶೆಟ್ಟಿ ಹಟ್ಟಿ ಬಳಿ ಎರಡು ವಾರಗಳ ಹಿಂದೆ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ನರಸಿಂಹಮೂರ್ತಿ ಅವರ ಮೃತದೇಹವನ್ನು ತುಮಕೂರಿನ ಶವಾಗಾರದಲ್ಲಿ ತಂದಿರಿಸಲಾಗಿದ್ದು, ತಾಲೂಕಿನಾದ್ಯಂತ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಕೊಲೆ, ಹಲ್ಲೆಗಳು ಶೋಷಣೆಯಿಂದ ದಲಿತರು ಆಕ್ರೋಶಗೊಂಡಿದ್ದಾರೆ. ತಾಲೂಕು ಮತ್ತು ಜಿಲ್ಲೆಯ ದಲಿತ ಸಮುದಾಯದ ಜನ ಶವಾಗಾರದ ಮುಂದೆ ನೆರೆದಿದ್ದು, ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಡಿಎಸ್ಎಸ್ ನಾಯಕನ ಶವವನ್ನು ನೋಡಲು ಬಹುಸಂಖ್ಯೆಯ ಜನ ಸೇರಿದ್ದಾರೆ. ನರಸಿಂಹಮೂರ್ತಿ ಕೊಲೆ ಸಂಬಂಧ ತಿಪಟೂರಿನಲ್ಲಿ ಅಪರಾಧಿಗಳನ್ನು ಬಂಧಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಹರಿದಾಡಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಕುಟುಂಬದವರು ಮತ್ತು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ.