ತುಮಕೂರು | ಅಕ್ರಮ ಬಂದೂಕು ತಯಾರಿಸುತ್ತಿದ್ದ ಬಡಗಿ ಬಂಧನ

  • 'ಶಸ್ತ್ರಾಸ್ತ್ರ ಕಾಯ್ದೆ' ಅಡಿ ಒಂಭತ್ತು ಆರೋಪಿಗಳ ಬಂಧನ
  • ಸ್ವಂತ ಮನೆಯಲ್ಲೇ ಅಕ್ರಮ ನಾಡ ಬಂದೂಕು ತಯಾರಿ

ಅಕ್ರಮವಾಗಿ 'ಸಿಂಗಲ್-ಬ್ಯಾರೆಲ್ ಮಜಲ್‌-ಲೋಡಿಗ್‌ ಬಂದೂಕು' ತಯಾರಿಸಿ, ಮಾರಾಟ ಮಾಡುತ್ತಿದ್ದ ಒಂಭತ್ತು ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿ  ತುಮಕೂರಿನಲ್ಲಿ ಬಂಧಿಸಲಾಗಿದೆ.

"ಪ್ರಮುಖ ಆರೋಪಿ ಕೃಷ್ಣಪ್ಪ (42) ವೃತ್ತಿಯಲ್ಲಿ ಬಡಗಿಯಾಗಿದ್ದು, ಆತ ಬಂದೂಕುಗಳನ್ನೂ ತಯಾರಿಸುತ್ತಿದ್ದ. ತುಮಕೂರು ತಾಲೂಕಿನ ದುರ್ಗದಹಳ್ಳಿ ಹಳೆಕೋಟೆಯಲ್ಲಿರುವ ತಮ್ಮ ಮನೆಯಲ್ಲಿ 'ಬ್ಯಾರೆಲ್ ಮಜಲ್‌ ಲೋಡಿಂಗ್‌ ಬಂದೂಕು' ಮತ್ತು ಸ್ಪೋಟಕಗಳನ್ನು ತಯಾರಿಸಲು ಬೇಕಾದ ಗನ್‌ ಪೌಡರ್ ಹಾಗೂ ಇತರ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ" ಎಂದು ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ?: ಬೀದರ್ | ಸೋಯಾ ಬೆಳೆಗೆ ಬಸವನ ಹುಳುವಿನ ಭಾದೆ: ಕಂಗಾಲದ ರೈತರು

"ಆರೋಪಿ ಕೃಷ್ಣಪ್ಪ, ತಾನು ತಯಾರಿಸಿದ ನಾಡ ಬಂದೂಕುಗಳನ್ನು 10,000 ದಿಂದ 20,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು" ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. 

ಬಂದೂಕುಗಳನ್ನು ತಯಾರಿಸಲು ಬಳಸುವ ಲೋಹದ ಪೈಪ್‌ಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ಆರೋಪಿ, ಬಾಳನಕಟ್ಟೆಯ ಮೊಹಮ್ಮದ್ ಅಯಾಝ್ ಅಹ್ಮದ್ (54) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ನಾಡ ಬಂದೂಕುಗಳನ್ನು ಪಡೆದುಕೊಂಡಿದ್ದ ಚಿಕ್ಕನಾಗಯ್ಯ, ಶಿವರಾಜು, ನಾರಾಯಣ, ನರಸಿಂಹಮೂರ್ತಿ, ನರಸರಾಜು, ಸಿದ್ದಗಂಗಪ್ಪ ಮತ್ತು ಮಾರುತೇಶ್ ಟಿ.ವಿ ಎಂಬ ಆರೋಪಿಗಳಿಂದಲೂ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದು, ಎಲ್ಲರ ವಿರುದ್ಧವೂ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app