ತುಮಕೂರು | ಅರಣ್ಯಾಧಿಕಾರಿಗಳಿಂದ ರೈತನ ಮೇಲೆ ಹಲ್ಲೆ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

  • ಬಗರ್ ಹುಕುಂ ಮತ್ತು ಸಾಗುವಳಿ ವಿಚಾರವಾಗಿ ಪ್ರತಿಭಟನೆ
  • ರೈತರು, ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ 

ರೈತನ ಮೇಲೆ ಅರಣ್ಯಾಧಿಕಾರಿ ಹಲ್ಲೆ ನಡೆಸಿರುವುದನ್ನು ಖಂಡಿಸಿ, ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘಟನೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ನೆಪದಲ್ಲಿ ಗುಬ್ಬಿ ತಾಲೂಕು ವಲಯ ಅರಣ್ಯ ಅಧಿಕಾರಿಯೊಬ್ಬರು ರೈತನ ಮೇಲೆ ಹಲ್ಲೆ ಮಾಡಿರುವ ಘಟನೆ ಚೇಳೂರು ಯಾದವರಗಟ್ಟಿಯಲ್ಲಿ ಜುಲೈ 4ರ ರಾತ್ರಿ ನಡೆದಿದೆ.

Eedina App

ಗುಬ್ಬಿ ತಾಲ್ಲೂಕು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರು ಬಸವರಾಜು ಎಂಬ ರೈತನ ಮನೆಗೆ ಏಕಾಏಕಿ ನುಗ್ಗಿದ್ದು, ಬಸವರಾಜು ಅವರ ಕುಟುಂಬದ ಸದಸ್ಯರನ್ನು ಹೆದರಿಸಿ, ಬಸವರಾಜು ಅವರ ಮೇಲೆ ಮನಸ್ಸೋಇಚ್ಚೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ರೈತ ಬಸವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಅಧಿಕಾರದ ದರ್ಪ, ಸಾಮಾನ್ಯ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘವು ಪ್ರತಿಭಟನೆ ನಡೆಸಿತು.

AV Eye Hospital ad

ಈ ಹಿಂದೆಯು ಬಗರ್ ಹುಕುಂ ಮತ್ತು ಸಾಗುವಳಿಗೆ ಸಂಬಂಧಿಸಿದಂತೆ ದೊಡ್ಡಮಟ್ಟದ ಹೋರಾಟವನ್ನು, ಅರಣ್ಯ ಇಲಾಖೆಯಿಂದ ದೌರ್ಜನ್ಯಕ್ಕೆ ಒಳಗಾದ ಭೂ ಹಿಡುವಳಿದಾರರು ಮತ್ತು ರೈತ ಮುಖಂಡರು ಸೇರಿ, ಅಧಿಕಾರಿಗಳ ದರ್ಪ, ಅಧಿಕಾರದ ದುರುಪಯೋಗ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲಾಯಿತು.

ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಸಮಸ್ಯೆಗಳ ಆಗರವಾದ ಕರ್ಕಿಹಳ್ಳಿ ಗ್ರಾಮ: ಅಧಿಕಾರಿಗಳ ನಿರ್ಲಕ್ಷ್ಯ

"ಈ ಹಿಂದೆ ಪ್ರತಿಭಟನೆಗಳಾದಾಗ ವೇಳೆ ಮಧ್ಯಪ್ರವೇಶಿದ್ದ ಜಿಲ್ಲಾಡಾಳಿತವು ಶೀಘ್ರದಲ್ಲೇ ಅರಣ್ಯ ಇಲಾಖೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದಾಗುತ್ತಿರುವ ಸಮಸ್ಯೆಗಳ ವಿರುದ್ಧ ಕ್ರಮಕೈಗೊಳ್ಳುವ ಆಶ್ವಾಸನೆ ನೀಡಿದ್ದರು. ಆದರೆ, ಅರಣ್ಯ ಇಲಾಖೆಯು ಪುನಃ ಗುಬ್ಬಿ ತಾಲೂಕಿನ ರೈತನ ಮೇಲೆ ದೌರ್ಜನ್ಯ ನಡೆಸುತ್ತಿದೆ" ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರಿಂದ, ಗುಬ್ಬಿ ತಾಲೂಕಿನ ದಲಿತರು ಮತ್ತು ರೈತರ ಮೇಲೆ ಹಲ್ಲೆ, ದೌರ್ಜನ್ಯದ ಪ್ರಕರಣಗಳು ಎಲ್ಲೆಮೀರಿದೆ. ಇವುಗಳನ್ನು ಮನಗಂಡು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯೆ ವಹಿಸಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡ ಗೋವಿಂದರಾಜು, ಗುಬ್ಬಿ ತಾಲೂಕು ರೈತ ಮುಖಂಡ ಲೋಕೇಶ್, ಪ್ರಾಂತ ರೈತ ಸಂಘದ ಅಜ್ಜಪ್ಪ , ಉಮೇಶ್, ಹಿರಿಯ ಪರಿಸರ ಹೋರಾಟಗಾರ ಯತಿರಾಜು, ಕಂಬಣ್ಣ ಮತ್ತು ರೈತ ಮುಖಂಡ ಪೂಜಾರಪ್ಪ ಹಾಗೂ ಸಂತ್ರಸ್ತ ರೈತರು ಪಾಲ್ಗೊಂಡಿದ್ದರು.

ಮಾಸ್ ಮೀಡಿಯಾ ತುಮಕೂರು ಜಿಲ್ಲಾ ಸಂಯೋಜಕ ರವಿಶಂಕರ್ ಮಾಹಿತಿ ಆಧರಿಸಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app