
- ನರ್ಸಿಂಗ್ ಮತ್ತು ಡಿ ಗ್ರೂಪ್ ನೌಕರರನ್ನು ಸೇವೆಯಿಂದ ಕೈಬಿಟ್ಟಿರುವ ಸರ್ಕಾರ
- ಉದ್ಯೋಗ ಭದ್ರತೆ ನೀಡಲು ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಆಗ್ರಹ
ಕೊರೊನಾ ಸಂದರ್ಭದಲ್ಲಿ ಗುತ್ತಿಗೆಯಾಧಾರದಡಿ ಕೆಲಸ ಮಾಡಿದವರನ್ನು ಸೇವೆಯಿಂದ ಕೈಬಿಟ್ಟ ಸರ್ಕಾರದ ಕ್ರಮ ಖಂಡಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಅವರು, 2020ರಲ್ಲಿ ಸರ್ಕಾರದ ನಿರ್ದೇಶನದಂತೆ ಕೊರೊನಾ ಸೋಂಕು ನಿರ್ವಹಣೆ ವೇಳೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನರ್ಸ್- ಡಿ ದರ್ಜೆಯ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ 2022ರ ಮಾರ್ಚ್ 31ರಿಂದ ಈ ಸಿಬ್ಬಂದಿಯನ್ನು ಏಕಾಏಕಿ ಸೇವೆಯಿಂದ ಕೈಬಿಡಲಾಗಿದೆ. ಸರ್ಕಾರದ ಈ ಕ್ರಮದಿಂದ ನಾವು ಬೀದಿಗೆ ಬರುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನರ್ಸ್ಗಳು ಮತ್ತು ಡಿ ಗ್ರೂಪ್ ನೌಕರರನ್ನು ಹುದ್ದೆಯಲ್ಲಿ ಮುಂದುವರಿಸಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ಸರ್ಕಾರ ಕಾರಣ ನೀಡುತ್ತಿರುವುದು ಸರಿಯಲ್ಲ. ಕೊರೊನಾ ಸಂದರ್ಭದ 18 ತಿಂಗಳ ಸೇವೆಯನ್ನು ಪರಿಗಣಿಸಿ, ಸರ್ಕಾರ ಮಾನವೀಯ ದೃಷ್ಟಿಯಿಂದಲಾದರೂ ನಮ್ಮನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ: ವಿದ್ಯಾರ್ಥಿನಿಯರೊಂದಿಗೆ ಸುಧಾಮೂರ್ತಿ ಸಂವಾದ
ಆರೋಗ್ಯ ಇಲಾಖೆ, ಸೇವಾವಧಿಯಲ್ಲಿ ನಮಗೆ ನೀಡಬೇಕಿದ್ದ ಹೆಚ್ಚುವರಿ ಸಹಾಯಧನವನ್ನು ಇದುವರೆಗೂ ನೀಡಿಲ್ಲ. ಹೊರಗುತ್ತಿಗೆ ನೌಕರರನ್ನು ಪುನಃ ಸೇವೆಗೆ ತೆಗೆದುಕೊಳ್ಳಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಮಗೆ ಉದ್ಯೋಗ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಆರೋಗ್ಯ ಇಲಾಖೆ ಸಂಯುಕ್ತ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶೈಲಾ ಮೇರಿ, ಶುಶ್ರೂಷಕರು, ಡಿ ಗ್ರೂಪ್ ನೌಕರರು, ತಾಲೂಕು ಮತ್ತು ಜಿಲ್ಲಾ ಮಟ್ಟದ ಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿದ್ದರು.