ತುಮಕೂರು | ದಲಿತ ಮಗುವಿನ ಗುಪ್ತಾಂಗ ಸುಟ್ಟಿದ್ದ ಪ್ರಕರಣ; ಅಂಗನವಾಡಿ ಶಿಕ್ಷಕಿ ವಜಾ

  • ಚಡ್ಡಿಯಲ್ಲಿ ಪದೇಪದೆ ಮೂತ್ರ ಮಾಡಿಕೊಳ್ಳುತ್ತಾನೆ ಎಂದು ಬೆದರಿಸಲು ಕೃತ್ಯ
  • ಘಟನೆ ನಡೆದು 20 ದಿನ ಕಳೆದಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ

ಮೂರು ವರ್ಷದ ದಲಿತ ಮಗುವಿನ ಗುಪ್ತಾಂಗವನ್ನು ಬೆಂಕಿ ಕಡ್ಡಿಯಿಂದ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗನಾಡಿ ಶಿಕ್ಷಕಿ ಮತ್ತು ಸಹಾಯಕಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಚಡ್ಡಿಯಲ್ಲಿ ಪದೇಪದೆ ಮೂತ್ರ ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಮೂರು ವರ್ಷದ ದಲಿತ ಮಗುವಿನ ಗುಪ್ತಾಂಗವನ್ನು ಅಂಗವಾಡಿ ಸಹಾಯಕಿ ಮತ್ತು ಶಿಕ್ಷಕಿ ಬೆಂಕಿ ಕಡ್ಡಿಯಿಂದ ಸುಟ್ಟಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಅಂಗನವಾಡಿಯಲ್ಲಿ ನಡೆದಿತ್ತು.

ಮಗುವಿನ ಗುಪ್ತಾಂಗ ಮತ್ತು ತೊಡೆಯ ಬಳಿ ಸುಟ್ಟ ಗಾಯಗಳನ್ನು ಮಗುವಿನ ಪೋಷಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಸೋಮವಾರ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಅಧಿಕಾರಿಗಳು ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹಾಗೂ ಪೋಷಕರ ಹೇಳಿಕೆ ಪಡೆದಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿಗಳು ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿಗೆ ನೋಟಿಸ್ ನೀಡಿ ತಪ್ಪೊಪ್ಪಿಗೆ ಪತ್ರ ಪಡೆದಿದ್ದರು.

ಘಟನೆ ನಡೆದು 15 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೂ ಮೊದಲೂ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಗ್ರಾಮದ ಕೆಲವು ಮುಖಂಡರು ಅಜ್ಜಿ ಮತ್ತು ಅಂಗನವಾಡಿ ಶಿಕ್ಷಕಿ ನಡುವೆ ಸಂದಾನ ಮಾಡಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು. ಆದರೆ, ಈ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅಂಗನಾಡಿ ಶಿಕ್ಷಕಿ ಮತ್ತು ಸಹಾಯಕಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಕುರಿತು ಸಿಡಿಪಿಒ ಜಿ ಹೊನ್ನಪ್ಪ  ಈ ದಿನ.ಕಾಮ್ ಜತೆಗೆ ಮಾತನಾಡಿ, “ಗೋಡೆಕೆರೆ ಗ್ರಾಮದ ಅಂಗನವಾಡಿಯಲ್ಲಿ ನಡೆದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿರುವ ಕಾರಣ ಅಂಗನಾಡಿ ಅಡುಗೆ ಸಹಾಯಕಿ ಮತ್ತು ಕಾರ್ಯಕರ್ತೆಯನ್ನು ವಜಾಗೊಳಿಸಲು ವರದಿ ಸಲ್ಲಿಸಲಾಗಿತ್ತು. ಅದರಂತೆ ಇಂದು ಕೆಲಸದಿಂದ ವಜಾ ಮಾಡಲಾಗಿದೆ. ಜತೆಗೆ ಇಂದು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಿದ್ದೇವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮುರುಘಾ ಶ್ರೀ ಬಂಧನಕ್ಕೆ ಹೆಚ್ಚಿದ ಒತ್ತಡ | ದಲಿತ ಸಂಘಟನೆಗಳಿಂದ ಮಠಕ್ಕೆ ಮುತ್ತಿಗೆಯ ಎಚ್ಚರಿಕೆ

ಅಂಗನವಾಡಿ ಶಿಕ್ಷಕಿ ವಜಾ; ತಹಶೀಲ್ದಾರ್‌

ಘಟನೆ ಕುರಿತು ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಶ್ವಿನಿ, ಈ ದಿನ.ಕಾಮ್ ಜತೆಗೆ ಮಾತನಾಡಿ, “ಗೋಡೆಕೆರೆ ಗ್ರಾಮದ ಅಂಗನಾವಾಡಿ ಕೇಂದ್ರದಲ್ಲಿ ನಡೆದಿರುವ ಘಟನೆ ಗಮನಕ್ಕೆ ಬಂದಿದೆ. ಅಂಗನಾಡಿ ಶಿಕ್ಷಕಿ ಮತ್ತು ಸಹಾಯಕಿಯನ್ನು ವಜಾಗೊಳಿಸುವಂತೆ ಪ್ರಸ್ತಾವನೆ ಬಂದಿತ್ತು. ಜತೆಗೆ ಅವರ ವಿರುದ್ಧ ಪ್ರಕರಣ ದಾಖಲಿಸಲು ತಿಳಿಸಲಾಗಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180