ತುಮಕೂರು | ಆ.12ರಂದು ಧ್ವಜ ಸಂಹಿತೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ‘ಧ್ವಜ ಸತ್ಯಾಗ್ರಹ’

  • ರಂಗಕರ್ಮಿ ಪ್ರಸನ್ನ ಸೇರಿದಂತೆ ಇನ್ನಿತರ ಗಾಂಧಿವಾದಿಗಳ ನೇತೃತ್ವ
  • ಪ್ರಗತಿಪರರು, ರೈತ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕರೆ 

ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ’ಗೆ ತಿದ್ದುಪಡಿ ತಂದು, ರಾಷ್ಟ್ರೀಯ ಧ್ವಜದ ಘನತೆಗೆ ಮತ್ತು ಅದರ ಮಹತ್ವಕ್ಕೆ ಧಕ್ಕೆ ತಂದಿದ್ದು, ಇದನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿ ಗಾಂಧಿವಾದಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಆಗಸ್ಟ್ 12ರ ಶುಕ್ರವಾರ ಬೆಳಗ್ಗೆ 10ಗಂಟೆಗೆ ಗ್ರಾಮ ಸೇವಾ ಸಂಘ, ಜನ ಸಂಗ್ರಾಮ ಪರಿಷತ್ ಹಾಗೂ ತುಮಕೂರು ಸರ್ವೋದಯ ಮಂಡಳಿಯವರ ಸಂಯುಕ್ತ ಆಶ್ರಯದಲ್ಲಿ ಖಾದಿ ಬಾವುಟ ಬಳಸಲು ಒತ್ತಾಯಿಸಿ ಮಂಡಿಪೇಟೆ ಸ್ವಾತಂತ್ರ್ಯ ಚೌಕದಿಂದ ರವೀಂದ್ರ ಕಲಾನಿಕೇತನದವರೆಗೆ ‘ಧ್ವಜ ಸತ್ಯಾಗ್ರಹ’ವನ್ನು ಹಮ್ಮಿಕೊಳಲಾಗಿದೆ.

ದೇಶದ ಎಲ್ಲ ಮನೆಗಳ ಮೇಲೆ ತಿರಂಗ ಧ್ವಜ ಹಾರಿಸುವ ನೆಪದಲ್ಲಿ ಪ್ಲಾಸ್ಟಿಕ್ ಮತ್ತು ಪಾಲಿಸ್ಟರ್ ಯಂತ್ರ ತಯಾರಿತ ಬಾವುಟಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಬಡ ನೇಕಾರರಿಂದ ತಯಾರಾಗುತ್ತಿದ್ದ ಖಾದಿ ಬಾವುಟಗಳನ್ನು ಕೇಳುವವರಿಲ್ಲದಂತಾಗಿದೆ.

ಪ್ರದರ್ಶಕ ರಾಷ್ಟ್ರೀಯತೆಯ ನೆಪದಲ್ಲಿ ಪರಿಸರ ಮಾಲಿನ್ಯ ಮಾಡುವ ಯಂತ್ರ ತಯಾರಿತ ಪ್ಲಾಸ್ಟಿಕ್ ಮತ್ತು ಪಾಲಿಸ್ಟರ್ ಬಾವುಟಗಳನ್ನು ಬಳಸಿ ಖಾದಿ ಧ್ವಜಗಳನ್ನು ಬದಿಗೆ ಸರಿಸಲಾಗಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ನಮಗೆ “ಬಾವುಟ ಬೇಡ, ಭೂಮಿಯ ಹಕ್ಕು" ಕೊಡಿ | ಶರಾವತಿ ಮುಳಗಡೆ ಸಂತ್ರಸ್ತರ ಹೋರಾಟ

ಈ ಸತ್ಯಾಗ್ರಹ ಚಳುವಳಿಗೆ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಹಾಡುಗಾರರು, ರೈತ ಕಾರ್ಮಿಕ ವಿದ್ಯಾರ್ಥಿ ಯುವ ಜನ ಗುಂಪುಗಳು, ನಗರದ ನಾಗರಿಕ ಬಂಧುಗಳೆಲ್ಲರು ಆಗಮಿಸಿ ರಾಷ್ಟ್ರೀಯ ಧ್ವಜದ ಪರಂಪರೆ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಎತ್ತಿ ಹಿಡಿಯುವಂತೆ ವಿನಂತಿಸಿದ್ದಾರೆ.

ಹಿರಿಯ ರಂಗಕರ್ಮಿ, ಚರಕ ಖ್ಯಾತಿಯ ಪ್ರಸನ್ನ ಹೆಗ್ಗೋಡು ಸಹಿತ ಅನೇಕ ಗಾಂಧಿವಾದಿಗಳು, ರೈತರು, ಪ್ರಗತಿಪರರು, ಪರಿಸರ ಪ್ರೇಮಿಗಳು ಹಾಗೂ ಅನೇಕ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್