ತುಮಕೂರು | ಕಾನೂನಾತ್ಮಕ ಹೋರಾಟದಲ್ಲಿ ಪೌರಕಾರ್ಮಿಕರೊಂದಿಗೆ ಇರುತ್ತೇನೆ: ನಾಗ್‌ಮೋಹನ್‌ದಾಸ್‌

  • "ಪೌರಕಾರ್ಮಿಕರ ಕೆಲಸಗಳಿಗೆ ತಂತ್ರಜ್ಞಾನ ಬಳಕೆಯಾಗುತ್ತಿಲ್ಲ"

  • ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮಕ್ಕಳಲ್ಲಿ ವಿಷಬೀಜ ಬಿತ್ತಲಾಗುತ್ತಿದೆ"

ಮುಂಜಾಗ್ರತ ಪರಿಕರಗಳಿಲ್ಲದೆ ಮಲಗುಂಡಿ ಸ್ವಚ್ಛಮಾಡುವಾಗ ಹಲವಾರು ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ. ಆದರೆ, ಅವರನ್ನು ಮಲಗುಂಡಿಗಳಿಗೆ ಇಳಿಸಿದ ಅಧಿಕಾರಿಗಳನ್ನು ಯಾವ ಶಿಕ್ಷೆಗೂ ಒಳಪಡಿಸಿಲ್ಲ. ಈ ವಿಚಾರದಲ್ಲಿ ಸರ್ಕಾರವೇ ಮೊದಲ ಅಪರಾಧಿ” ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಆರೋಪಿಸಿದ್ದಾರೆ.

"ಪೌರ ಕಾರ್ಮಿಕರಿಗೆ ಸಮಾನ ಕೆಲಸ ಮತ್ತು ವೇತನಕ್ಕಾಗಿ ಒತ್ತಾಯಿಸಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. “ಒಡೆದು ಆಳುವ ನೀತಿಯಿಂದಾಗಿ ಪೌರಕಾರ್ಮಿಕರಾದ ಕಸ ಗುಡಿಸುವವರು, ಕಸ ಎತ್ತುವವರು, ಕಸ ಸಾಗಿಸುವವರ ಧ್ವನಿ ಹೆಚ್ಚಾಗದಂತೆ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕಳ್ಳತನ, ದರೋಡೆ, ಭಯೋತ್ಪಾದನೆ, ಸಮಾಜ ವಿರೋಧಿ ಕೃತ್ಯಗಳು ಹೆಚ್ಚಾಗಿವೆ. ಇವುಗಳ ನಿವಾರಣೆ ಮಾಡಿ ನಿರುದ್ಯೋಗಿಗಳ ಕಡೆ ಸರ್ಕಾರ ಗಮನ ಹರಿಸಬೇಕು. ಆದರೆ, ಸರ್ಕಾರಕ್ಕೆ ನಿರುದ್ಯೋಗ ಒಂದು ರಾಜಕೀಯ ವಿಷಯವಾಗಿದೆಯೇ ಹೊರತು, ಇದರ ಹಿಂದಿನ ಅರ್ಥಿಕ ಸಮಸ್ಯೆಗಳ ಪರಿಚಯವೇ ಇಲ್ಲ. ಎಲ್ಲವನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ” ಎಂದು ಅವರು ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಹಾಸನ | ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡದಂತೆ ಮನವಿ

"ಸಮಾನ ಶಿಕ್ಷಣ ಎಂಬುದು ಮರೀಚಿಕೆಯಾಗಿದೆ. ಐಸಿಎಇ, ಸಿಬಿಎಸ್‌ಐ, ಖಾಸಗಿ, ಸರಕಾರಿ, ಅನುದಾನಿತ, ಅನುದಾನರಹಿತ ಹೀಗೆ ಹಲವು ಭಾಗಗಳಾಗಿ ವಿಂಗಡಿಸಿ, ಬಡವರು, ತಳಸಮುದಾಯದ ಮಕ್ಕಳನ್ನು ಗುಣಮಟ್ಟದ ಶಿಕ್ಷಣದಿಂದ ವಂಚಿಸಲಾಗುತ್ತಿದೆ. ದೊಡ್ಡ ಕಟ್ಟಡ, ಪೀಠೋಪಕರಣ, ಪ್ರಯೋಗಾಲಯಗಳೇ ಶಿಕ್ಷಣವೆಂದು ಸರ್ಕಾರಗಳು ತಿಳಿದಂತಿದೆ. ಮಾನವೀಯ ಕಳಕಳಿ, ಸಾಮಾಜಿಕ ಸ್ಪಂದನೆ ಇಲ್ಲದ ಶಿಕ್ಷಣ, ಜನರ ಕಷ್ಟಗಳಿಗೆ ಪರಿಹಾರ ದೊರಕಿಸುವಂತಹ ಶಿಕ್ಷಣ ಇಲ್ಲವಾಗಿದೆ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮಕ್ಕಳಲ್ಲಿ ವಿಷಬೀಜ ಬಿತ್ತಿ, ಅವರ ಮನಸ್ಸುಗಳನ್ನು ಹಾಳು ಮಾಡಲಾಗುತ್ತಿದೆ" ಎಂದು ನಾಗಮೋಹನ್ ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

"ದೇಶದಲ್ಲಿ 60.4 ಲಕ್ಷ ಹುದ್ದೆಗಳು ಖಾಲಿಯಿದ್ದು, ಕರ್ನಾಟಕದಲ್ಲಿ ಮಂಜೂರಾದ ಹುದ್ದೆಗಳು 2.59 ಲಕ್ಷಗಳಿವೆ. ಆ ಹುದ್ದೆಗಳಿಗೆ ರೋಸ್ಟರ್ ಪದ್ದತಿ ಅನುಸರಿಸಿದರೇ ತಳಸಮುದಾಯದವರಿಗೂ ಉದ್ಯೋಗ ದೊರೆಯುತ್ತದೆ. ಈ ಮೂಲಕ ತಳಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರುತ್ತಾರೆ. ಆದರೆ, ಈ ಸಮುದಾಯಗಳನ್ನು ಜೀತಗಾರರಂತೆ ದುಡಿಸಿಕೊಳ್ಳಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ. 

"ರಾಜ್ಯದ 29 ಇಲಾಖೆಗಳಲ್ಲಿ ಶೇ.30 ರಷ್ಟು ಉದ್ಯೋಗಿಗಳು ಹೊರಗುತ್ತಿಗೆ ಆಧಾರದಲ್ಲಿಯೇ ನೇಮಕಗೊಂಡವರು. ಇವರಿಗೆ ಯಾವುದೇ ಕಾರ್ಮಿಕ ಕಾಯ್ದೆ ಅನ್ವಯ ಆಗಲ್ಲ. ಇದು ಈ ದೇಶದ ದುರಂತ" ಎಂದು ನಿವೃತ್ತ ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ. 

ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಇಷ್ಟೊಂದು ಮುಂದುವರೆವೆ. ಆದರೆ, ತಂತ್ರಜ್ಞಾನವು ಪೌರಕಾರ್ಮಿಕರ ಕೆಲಸಗಳಿಗೆ ಬಳಕೆಯಾಗುತ್ತಿಲ್ಲ. ಇಂದಿಗೂ ಶೌಚಗುಂಡಿಗೆ ಪೌರಕಾರ್ಮಿಕರೇ ಇಳಿದು ಸ್ವಚ್ಚಗೊಳಿಸಬೇಕಿದೆ. ಒಂದು ವರದಿಯ ಪ್ರಕಾರ ವರ್ಷಕ್ಕೆ 300 ಜನ ಪೌರಕಾರ್ಮಿಕರು ಶೌಚಗುಂಡಿಗಳಲ್ಲಿ ಸಾವನ್ನಪ್ಪಿದ್ದಾರೆ" ಎಂದು ಅವರು ವಿವರಿಸಿದ್ದಾರೆ. 

"ಪೌರಕಾರ್ಮಿಕರ ಕಾನೂನಾತ್ಮಕ ಹೋರಾಟದಲ್ಲಿ ನಾನು ಸದಾ ಜೊತೆಗಿರುತ್ತೇನೆ .ಜನಪರ ಹೋರಾಟಗಳೇ ಜನರ ಸಮಸ್ಯೆಗಳ ಪರಿಹಾರಕ್ಕೆ ಇರುವ ಮದ್ದು. ಹಾಗಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು" ಎಂದು ನಾಗಮೋಹನ್ ದಾಸ್ ಅವರು ಪೌರಕಾರ್ಮಿಕರಿಗೆ ಕರೆ ನೀಡಿದ್ದಾರೆ.

“ಪೌರಕಾರ್ಮಿಕರನ್ನು ಘನತೆಯಿಂದ ನಡೆಸಿಕೊಳ್ಳದಿರುವುದು ಈ ದೇಶದ ದುರಂತ. ಒಂದು ದಿನ ಕೆಲಸಕ್ಕೆ ಸಾಮೂಹಿಕ ರಜೆ ಹಾಕಿದರೆ, ಇಡೀ ದೇಶವೇ ಕೊಚ್ಚೆಗುಂಡಿಯಂತಾಗುತ್ತದೆ. ಹಾಗಾಗಿ ಪೌರಕಾರ್ಮಿಕರ ವೇತನ ಕುರಿತಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಪೌರಕಾರ್ಮಿಕರನ್ನು ತಮ್ಮ ಬದುಕಿನ ಉನ್ನತೀಕರಣದತ್ತ ಗಮನಹರಿಸಬೇಕು. ನಮ್ಮಂತೆ ನಮ್ಮ ಮಕ್ಕಳು ಪೌರಕಾರ್ಮಿಕರಂತೆ ನೋಡಿಕೊಂಡರೆ, ಅದಕ್ಕಿಂತ ದೊಡ್ಡ ಬದಲಾವಣೆ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಪೌರಕಾರ್ಮಿಕರು ಚಿಂತನೆ ನಡೆಸಬೇಕಿದೆ” ಎಂದು ಹಿರಿಯ ಚಿಂತಕ ಕೆ. ದೊರೆರಾಜು ಹೇಳಿದ್ದಾರೆ.

ಪ್ರತಿಭಟನಾ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ನಾಯ್ಕ, ಸಿಐಟಿಯುನ ಎನ್.ಕೆ. ಸುಬ್ರಮಣ್ಯ,  ಸಿ. ವೆಂಕಟೇಶ್, ಕುಮಾರ್, ಶಿವರಾಜು, ಸ್ಯಾಮ್ ಸನ್, ಲಕ್ಮಣ್ ಹಂದ್ರಾಳ್, ಶಾನೂನು ಗುಡ್ಡಾರ್, ಪ್ರಕಾಶ್, ರಾಮಯ್ಯ, ಸಪಾಯಿ, ಓಬಳೇಶ್ ಸೇರಿದಂತೆ ಹಲವರು ಇದ್ದರು. 

ಮಾಸ್ ಮೀಡಿಯಾ ತುಮಕೂರು ಜಿಲ್ಲಾ ಸಂಯೋಜಕ ರವಿಶಂಕರ್ ಮಾಹಿತಿ ಆಧರಿಸಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app