ತುಮಕೂರು | ಮಾಜಿ ಮತ್ತು ಹಾಲಿ ಶಾಸಕರ ಕೊಲೆಗೆ ಸಂಚು?; ಆರೋಪ-ಪ್ರತ್ಯಾರೋಪ

THUMAKURU
  • ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೇಳಿಕೆ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್ ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಬಿ ಸುರೇಶ್ ಗೌಡ ಆರೋಪಿಸಿದ್ದಾರೆ. ಅವರ ಆರೋಪವನ್ನು ಅಲ್ಲಗಳೆದಿರುವ ಶಾಸಕ ಗೌರಿಶಂಕರ್, 'ತನ್ನನ್ನು ಕೊಲ್ಲಲು ಸುರೇಶ್‌ಗೌಡ ಸಂಚು ರೂಪಿಸಿದ್ದಾರೆ' ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇತ್ತೀಚೆಗೆ ಅರಿಯೂರು ಗ್ರಾಮದಲ್ಲಿ ಸುರೇಶ್‌ಗೌಡ ಹುಟ್ಟುಹಬ್ಬ ಆಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುರೇಶ್‌ಗೌಡ, "ಶಾಸಕ ಡಿ.ಸಿ ಗೌರಿಶಂಕರ್‍‌ ತನ್ನ ಕೊಲೆಗೆ ಸುಪಾರಿ ನೀಡಿದ್ದಾರೆ" ಎಂದು ಆರೋಪಿಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

“ಗೌರಿ ಶಂಕರ್ ಅವರು ನನ್ನನ್ನು ಕೊಲೆ ಮಾಡಲು ಬೆಂಗಳೂರಿನ ಜೈಲಿನಲ್ಲಿರುವ ರೌಡಿಗಳಿಗೆ ಸುಫಾರಿ ಕೊಟ್ಟಿದ್ದಾರೆ. ಆದರೆ, ನನ್ನ ಒಂದು ಕೂದಲು ಮುಟ್ಟಲು ನನ್ನ ಕಾರ್ಯಕರ್ತರು ಬಿಡುವುದಿಲ್ಲ. ಗೌರಿಶಂಕರ್‍‌ ನಿನಗೆ ಧಮ್‌ ಇದ್ದರೆ ಸುಫಾರಿ ಕೊಡು. ನಾನೊಬ್ಬ ರೈತನ ಮಗ” ಎಂದು ಆವೇಶದಲ್ಲಿ ಮಾತನಾಡಿದ್ದರು.

ಸುರೇಶಗೌಡ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಗೌರಿಶಂಕರ್, ”ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಜನರ ಅನುಕಂಪ ಗಿಟ್ಟಿಸುವ ಸಲುವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಅನುಮಾನವಿದ್ದರೆ ಸಿಬಿಐಗೆ ತನಿಖೆ ನಡೆಸಲಿ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ನಗರಸಭೆ ಆಡಳಿತದಲ್ಲಿ ಅಧ್ಯಕ್ಷೆ ಪತಿ ಹಸ್ತಕ್ಷೇಪ: ಎಎಪಿ ಖಂಡನೆ

“ಕ್ಷೇತ್ರದಲ್ಲಿ ಕೋಮು ಗಲಭೆ ಸೃಷ್ಟಿಸಿ, ನನ್ನನ್ನೇ ಕೊಲೆ ಮಾಡಲು ಸಂಚು ರೂಪಿಸಿರಬಹುದು. ಅದಕ್ಕೆ ಮೊದಲೇ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ” ಎಂದು ಗೌರಿಶಂಕರ್‍‌ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180