ತುಮಕೂರು | ರಸ್ತೆ ಪ್ರಾಧಿಕಾರದಿಂದ ರೈತರ ಜಮೀನು ಒತ್ತುವರಿ: ಗುತ್ತಿಗೆದಾರರ ದೌರ್ಜನ್ಯಕ್ಕೆ ರೈತ ಬಲಿ

Tumkur
  • ನೋಟಿಸ್‌ ನೀಡದೆ ರೈತರ ಜಮೀನು ಒತ್ತುವರಿ 
  • ಮನನೊಂದು ಆತ್ಮಹತ್ಯೆಗೆ ಶರಣಾದ ರೈತ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲ್ಕಟ್ಟೆ ಪಾಳ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ರೈತರೊಬ್ಬರ ಕೃಷಿ ಜಮೀನಿನಲ್ಲಿ ಮಣ್ಣನ್ನು ತೆಗೆಯಲಾಗಿದ್ದು, ಬೆಳೆದಿದ್ದ ಬೆಳೆಯ ಮೇಲೆ ಬುಲ್ಡೋಜರ್ ಹರಿಸಲಾಗಿದೆ. ಬೆಳೆನಷ್ಟಕ್ಕೆ ಹಾಗೂ ಒತ್ತುವರಿ ಭೂಮಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಗುತ್ತಿಗೆದಾರರು ವಂಚಿಸಿದ್ದಾರೆ. ಇದೆಲ್ಲದರಿಂದ ಮನನೊಂದ ರೈತ ರಂಗಯ್ಯ ಅದೇ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ದೌರ್ಜನ್ಯದ ಬಗ್ಗೆ ರೈತ ರಂಗಯ್ಯ ಅವರ ಮೊಮ್ಮಗ ಪವನ್‌ಗೌಡ ಈ ದಿನ.ಕಾಮ್‌ಗೆ ವಿವರಿಸಿದ್ದಾರೆ. "ತಮ್ಮ ತಂದೆ ಶ್ರೀನಿವಾಸ್‌ ಮತ್ತು ಅವರ ಸಹೋದರರಿಗೆ (ರಂಗಯ್ಯರ ಮಕ್ಕಳು) ಸೇರಿದ ಜಮೀನು ರಾಷ್ಟ್ರೀಯ ಹೆದ್ದಾರಿ 150(ಎ) ಪಕ್ಕದಲ್ಲೇ ಇದೆ. ತಮ್ಮ ಕುಟುಂಬಕ್ಕೆ ಯಾವುದೇ ನೋಟಿಸ್‌ ನೀಡದೆ, ಪರಿಹಾರವನ್ನೂ ದೊರಕಿಸದೆ ಗುತ್ತಿಗೆ ಕಂಪನಿ 'ಸಾಯಿ ಅರ್ಥ್ ಮೂವರ್ಸ್‘ನ ಗುತ್ತಿಗೆದಾರರು ಏಪ್ರಿಲ್‌ ತಿಂಗಳಿನಲ್ಲಿ ಪೊಲೀಸರ ಬೆಂಗಾವಲಿನೊಂದಿಗೆ ಬುಲ್ಡೋಜರ್ ತಂದು ಅತಿಕ್ರಮವಾಗಿ ರೈತನ ಜಮೀನಿನಿಂದ ಮಣ್ಣು ಸಾಗಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ  ಕುಟುಂಬಸ್ಥರ ಮೇಲೆ ದೌರ್ಜನ್ಯ ಎಸಗಿದ್ದಾರೆ," ಎಂದು ವಿವಸಿದ್ದಾರೆ. 

Eedina App

"ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಣ್ಣ ಸ್ಥಳಕ್ಕೆ ಬಂದು ಪೊಲೀಸರು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. 'ರೈತರ ಜಮೀನಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯಗಳಿಗೆ ಪೊಲೀಸರು ಕೈಯಾಡಿಸಲು ನಿರ್ದೇಶನ ನೀಡಿದ ರಾಜಕಾರಣಿ ಯಾರೆಂದು' ಪ್ರಶ್ನಿಸಿದರು. ಆಷ್ಟೊತ್ತಿಗಾಗಲೇ ಐದು ಗುಂಟೆ ಜಮೀನನ್ನು ಗುತ್ತಿಗೆದಾರ ಕಬಳಿಸಿದ್ದರು. ಪ್ರಶ್ನೆಗೆ ಉತ್ತರಿಸಲಾಗದ ಗುತ್ತಿಗೆದಾರ, 'ಬಳಸಿಕೊಳ್ಳಲಾದ ಭೂಮಿಗೆ ಎರಡು ದಿನಗಳೊಳಗೆ ಮೂರು ಲಕ್ಷ ರೂ. ಪರಿಹಾರ ನೀಡುತ್ತೇವೆಂದು' ಹೇಳಿದ್ದರು. ಮೂರು ದಿನವಾದರೂ ಗುತ್ತಿಗೆದಾರ ಹಣ ತಲುಪಿಸಲೇ ಇಲ್ಲ" ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ: ನಿರಂತರ ಧರಣಿ ನಡೆಸುತ್ತಿರುವ ರೈತರು

AV Eye Hospital ad

"ಮುಕ್ತಾಯಗೊಂಡ ಹೆದ್ದಾರಿ ಕಾಮಗಾರಿಯನ್ನು ನೋಡಿ, 'ಪರಿಹಾರದ ಹಣ ಮತ್ತು ಭೂಮಿ' ಎರಡನ್ನೂ ಕಳೆದುಕೊಂಡೆನೆಂದು ತಿಂಗಳ ಹಿಂದೆ ತಮ್ಮ ಅಜ್ಜ ರಂಗಯ್ಯ ಆತ್ಮಹತ್ಯೆ ಮಾಡಿಕೊಂಡರು. ನಮಗೆ ಪರಿಹಾರ ಸಿಗಲಿಲ್ಲ. ಬದಲಾಗಿ ಒಂದು ಜೀವ ಹೋಗಿದೆ” ಎಂದು ಪವನ್‌ ಅಳಲು ತೋಡಿಕೊಂಡಿದ್ದಾರೆ.

“ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡಿದ್ದರಿಂದ ಹಲವಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಅವರ್‍ಯಾರೂ ನಮ್ಮಂತೆ ಪ್ರಶ್ನೆ ಮಾಡಿಲ್ಲ. ಅವರಿಗೂ ಪರಿಹಾರ ದೊರೆತಿಲ್ಲ. ನಾವು ಪ್ರಶ್ನೆ ಮಾಡಿದ್ದರಿಂದ ಕೇವಲ 5 ಕುಂಟೆ ಭೂಮಿ ಹೋಗಿದೆ. ಒಂದು ವೇಳೆ ನಾವು ಸುಮ್ಮನಿದ್ದಿದ್ದರೆ ನಮ್ಮ ಕುಟುಂಬದ 18 ಕುಂಟೆ ಜಮೀನು ಪ್ರಾಧಿಕಾರದ ವಶವಾಗುತ್ತಿತ್ತು” ಎಂದರು.

Tumkur

“ಜಮೀನು ಒತ್ತುವರಿ ಮಾಡುವಾಗ ಯಾರಾದರೂ ಅಡ್ಡಿ ಬಂದರೆ ‘ನೀವು ದಾಖಲೆಯನ್ನು ಕೊಡಿ ನಿಮಗೆ ಪರಿಹಾರ ಕೊಡಿಸುತ್ತೇವೆ’ ಎಂದು ಹೇಳುತ್ತಾರೆ. ಆದರೆ, ಮುಂದೆ ಯಾವ ಪರಿಹಾರವೂ ಕೊಡುವುದಿಲ್ಲ. ನಮಗೂ ಮೊದಲು ಹೀಗೆ ಹೇಳಿದ್ದರು. ಆದರೆ ನಾವು ಅವರ ಮಾತಿಗೆ ಮರುಳಾಗಲಿಲ್ಲ. ನಮಗೆ ಈಗಲೇ ಪರಿಹಾರ ಕೊಡಿ ಎಂದು ಪಟ್ಟು ಹಿಡಿದಿದ್ದೆವು” ಎಂದು ಹೇಳಿದರು.

"ಜುಲೈ 26ರ ಬೆಳ್ಳಿಗ್ಗೆ 6 ಗಂಟೆಗೆ ಸುಮಾರು 60ರಿಂದ 70 ಪೊಲೀಸ್‌ ಸಿಬ್ಬಂದಿಗಳ ಬೆಂಗಾವಲಿನಲ್ಲಿ ಬಂದು ರಸ್ತೆ ಕಾಮಗಾರಿ ನಡೆಸಿದ್ದಾರೆ. ಪೊಲೀಸರನ್ನು ತೋರಿಸಿ ಹೆದರಿಸಿದ್ದಾರೆ” ಎಂದು ಪವನ್‌ ಆರೋಪಿಸಿದ್ದಾರೆ.

Tumkur

“ಇಷ್ಟೇಲ್ಲಾ ನಡೆಯುತ್ತಿರುವಾಗ ತಾಲೂಕು ಆಡಳಿತವಾಗಲಿ, ಸ್ಥಳೀಯ ಆಡಳಿತವಾಗಲಿ ಗಮನ ಕೊಡಲಿಲ್ಲ. ಒಂದು ಹೆಣ ಬಿದ್ದ ಮೇಲೆಯೇ ಎಲ್ಲರೂ ಎಚ್ಚೆತ್ತು ಕೊಂಡಿದ್ದಾರೆ. ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಲೂ, ಯಾವುದೇ ಸಾಕ್ಷಿ ಇಟ್ಟುಕೊಳ್ಳದ ಪೊಲೀಸರು ಪ್ರಾಧಿಕಾರದ ಪರವಾಗಿ ವಾದಿಸಿದರು. ಜಮೀನಿನ ಸರ್ವೇ ನಡೆಸಿದ ತಹಶೀಲ್ದಾರರು, ಪ್ರಾಧಿಕಾರದೊಂದಿಗೆ ಮಾತನಾಡುವುದಾಗಿ ಹೇಳಿದರು. ರಸ್ತೆ ಪೂರ್ಣಗೊಂಡ ಮೇಲೆ ಗುತ್ತಿಗೆದಾರರಿಗೆ ಅವಾರ್ಡ್‌ ನೋಟಿಸ್‌ ನೀಡಿದ್ದಾರೆ. ರಸ್ತೆಯೆಲ್ಲಾ ಮುಗಿದ ನಂತರ ಯಾವ ನೋಟಿಸ್‌ ನೀಡಿದರೆ ಫಲವೇನು?" ಎಂದು ಪವನ್ ಬೇಸರ ವ್ಯಕ್ತಪಡಿಸಿದ್ದಾರೆ.

ಈದಿನ.ಕಾಮ್‌ ಜೊತೆ ಮಾತನಾಡಿದ ರೈತ ಪರ ಹೋರಾಟಗಾರ ಷಡಕ್ಷರಿ ತರ್ಬೆನಹಳ್ಳಿ, “ಒತ್ತುವರಿ ಮಾಡಲು ಹೋರಟ ಜಮೀನು ಸರ್ಕಾರಿ ಜಮೀನನಲ್ಲ, ಗೋಮಾಳವಲ್ಲ. ರೈತ ಕಷ್ಟಪಟ್ಟು ಸಂಪಾದಿಸಿದ ಸ್ವಂತ ಜಮೀನು. ಖಾಸಗಿ ಜಮೀನಾಗಿದ್ದರಿಂದ ಮಾಹಿತಿ ನೀಡಿ, ಪರಿಹಾರದ ಬಗ್ಗೆ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಜನಪ್ರತಿನಿಧಿಗಳು ರೈತರ ಭೂಮಿಯನ್ನು ಒತ್ತುವರಿ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ" ಎಂದು ದೂರಿಸಿದ್ದಾರೆ. 

Tumkur

"ಯಾವುದೇ ಕಾಮಗಾರಿ ಕೈಗೊಳ್ಳುವ ವೇಳೆ ಕಾನೂನಾತ್ಮಕವಾಗಿ ರೈತದೊಂದಿಗೆ ಚರ್ಚಿಸಿ, ಪರಿಹಾರ ಒದಗಿಸಿದರೆ ಯಾವ ರೈತರೂ ಕೆಲಸಕ್ಕೆ ಅಡ್ಡಿಬರುವುದಿಲ್ಲ. ಕೆಲವು ಕುಟುಂಬಗಳಲ್ಲಿ ಒಂದರಿಂದ ಎರಡು ಕುಂಟೆ ಭೂಮಿ ಇರುತ್ತದೆ. ಆ ಸ್ಪಲ್ಪ ಜಾಗವನ್ನು ಹೀಗೆ ಒತ್ತುವರಿ ಮಾಡಿದರೆ, ಆ ಕುಟುಂಬ ಏನು ಮಾಡಬೇಕು? ಪರಿಹಾರ ನೀಡದೆ ಒತ್ತುವರಿ ಮಾಡಿದರೆ ಆ ಕುಟುಂಬ ಎಲ್ಲಿಗೆ ಹೋಗಬೇಕು? ಒಂದು ಕುಂಟೆ ಜಾಗ ಐದು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ” ಎಂದು ತಿಳಿಸಿದರು.

“ಆಡಳಿತಾತ್ಮಕ ಶಕ್ತಿಯನ್ನು ಬಳಸಿಕೊಂಡು ಒಬ್ಬ ಬಡ ರೈತನ ಜಮೀನಿನ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದರೆ, ನಾವು ಯಾರ ಆಡಳಿತದಲ್ಲಿದ್ದೇವೆ? ಇದರ ಮೂಲಕ ಬೇರೆ ರೈತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tumkur

“ಸ್ಥಳಕ್ಕೆ ಹೋಗಿ ಕಾಮಗಾರಿ ತಡೆದಾಗ ನಮ್ಮನ್ನು ಹೆದ್ದಾರಿ ಪ್ರಾಧಿಕಾರದ ಕಾನೂನಿನಡಿಯಲ್ಲಿ ಶಿಕ್ಷಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಯಾವ ಸೂಚನೆ ಕೊಡದೆ ಅತಿಕ್ರಮ ಪ್ರವೇಶ ಮಾಡಿದವರು, ನಮ್ಮ ಮೇಲೆ ಪ್ರಕರಣ ದಾಖಲಿಸಲು ಹೇಗೆ ಸಾಧ್ಯ? ಕಾನೂನು ಉಲ್ಲಂಘಿಸಿ ಬಂದವರು ಕಾನೂನು ಪಾಠ ಮಾಡುತ್ತಾರೆ. ಇದೇ ರೀತಿ ಮುಂದುವರಿಸಿದರೆ ಹೋರಾಟ ಮಾಡುತ್ತೇವೆ” ಎಂದರು.

ಈ ದಿನ.ಕಾಮ್‌ ಜೊತೆ ಮಾತನಾಡಿದ ಚಿಕ್ಕನಾಯಕನಹಳ್ಳಿ ತಹಶೀಲ್ದಾರೆ ತೇಜಸ್ವಿನಿ, “ಕುಟುಂಬದ ಮೂರು ಗುಂಟೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಜುಲೈ 26ರ ನಂತರ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅಲ್ಲಿಯವರೆಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಸರ್ವೇ ನಡೆಸಿ ನೋಟಿಸ್‌ ನೀಡಿದ್ದೇವೆ. ಪರಿಹಾರವನ್ನು ಅವರ ಕುಟುಂಬ ರಾಷ್ಟ್ರೀಯ ಪ್ರಾಧಿಕಾರದಿಂದ ಪಡೆದುಕೊಳ್ಳಬೇಕು. ನಮ್ಮ ಕಡೆಯಿಂದ ಯಾವ ರೀತಿಯ ಸಹಾಯವಾಗಬೇಕೊ ಅದನ್ನು ಮಾಡಿದ್ದೇವೆ. ಈಗ ಯಾವುದೇ ಸಮಸ್ಯೆಯಿಲ್ಲ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app