ಉಡುಪಿ | ರಸ್ತೆಬದಿ ನಿಂತಿದ್ದ ತಂದೆ-ಮಗನಿಗೆ ಡಿಕ್ಕಿ ಹೊಡೆದ ಬೈಕ್‌: ತಂದೆ ಸಾವು

  • ತೀವ್ರ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಮಗ
  • ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ವೇಗವಾಗಿ ಬಂದ ಬೈಕ್‌ ಒಂದು ರಸ್ತೆ ಬದಿಯಲ್ಲಿ ನಿಂತಿದ್ದ ತಂದೆ-ಮಗನಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟಿರುವ ದು‍ರ್ಘಟನೆ ಉಡುಪಿ ಜಿಲ್ಲೆಯ ಶಿರ್ವದ ಬಂಟಕಲ್ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮಗನಿಗೆ ಗಂಭೀರ ಗಾಯಗಳಾಗಿವೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ಶರಣಪ್ಪ ಬಾಲಪ್ಪ ಗಂಜಿಹಾಳ (40) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಆತನ ಆರು ವರ್ಷದ ಮಗ ಶ್ರವಣ್‌ ಕುಮಾರ್ಗೆ ತೀವ್ರ ಗಾಯಗಳಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಶರಣಪ್ಪ ಬುಧವಾರ ರಾತ್ರಿ ಸುಮಾರು 7 ಗಂಟೆಯ ಹೊತ್ತಿನಲ್ಲಿ ದಿನಸಿ ತರಲು ಬಂಟಕಲ್‌ ಪೇಟೆಗೆ ತನ್ನ ಮಗನೊಂದಿಗೆ ತೆರಳಿದ್ದರು. ಬಂಟ್‌ಕಲ್‌ನ ಆಶಾ ಕಾಂಪ್ಲೆಕ್ಸ್‌ ಬಳಿ ಮಗನೊಂದಿಗೆ ನಿಂತಿರುವಾಗ ವೇಗವಾಗಿ ಬಂದ ಬೈಕ್‌ ಒಂದು ಡಿಕ್ಕಿ ಹೊಡೆದಿದೆ. ಬೈಕ್‌ ಹೊಡೆದ ರಭಸಕ್ಕೆ ಶರಣಪ್ಪ ಹಾಗೂ ಆತನ ಮಗ ತೀವ್ರ ಗಾಯಗೊಂಡಿದ್ದರು. ಬೈಕ್‌ ಸವಾರ ಬೈಕ್‌ನ್ನು ಹಾಗೆ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಸಾರ್ವಜನಿಕರು ಇಬ್ಬರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಗದಗ | ಸರ್ಕಾರಿ ಶಾಲಾ ಶಿಕ್ಷಕಿಯ ಬೇಜವಾಬ್ದಾರಿ ವರ್ತನೆ: ಗ್ರಾಮಸ್ಥರ ಆಕ್ರೋಶ

ಚಿಕಿತ್ಸೆ ಫಲಿಸದೆ ಶರಣಪ್ಪ ಸಾವನ್ನಪ್ಪಿದ್ದಾರೆ. ಮಗ ಶ್ರವಣ್‌ ಕುಮಾರ್‍‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೈಕ್‌ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್