ಉಡುಪಿ | ಸಾವರ್ಕರ್ ಪೋಸ್ಟರ್‌ಗೆ ಬಿಜೆಪಿ ಮುಖಂಡ ಮಾಲಾರ್ಪಣೆ: ಬಾವುಟ ತೆಗೆದು ಹಾಕಿದ ಪೊಲೀಸರು

  • ಕಟೌಟ್ ತೆರವು ಮಾಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದ ಕಾಂಗ್ರೆಸ್‌
  • ಸಾವರ್ಕರ್ ಕಟೌಟ್‌ ಹಾಕುವುದಕ್ಕೆ ವಿರೋಧವಿಲ್ಲ ಎಂದ ಎಸ್‌ಡಿಪಿಐ

ಆಗಸ್ಟ್ 15 ರಂದು ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ಮಹಾಸಭಾ ಮುಖಂಡರು ವಿಡಿ ಸಾವರ್ಕರ್ ಅವರ ಫ್ಲೆಕ್ಸ್ ಹಾಕಿದ್ದ ಕುರಿತು ವಿವಾದ ಸೃಷ್ಟಿಯಾಗಿತ್ತು. ಇದೀಗ, ಅಲ್ಲಿನ ಸಾವರ್ಕರ್‌ ಕಟೌಟ್‌ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಹಾರ ಹಾಕಿ, ಅದರ ಪಕ್ಕದಲ್ಲಿ ಎರಡು ಕೇಸರಿ ಧ್ವಜಗಳನ್ನು ನೆಟ್ಟಿದ್ದರು. ಧ್ವಜಗಳನ್ನು ಹಾಕಲು ಅನುಮತಿ ಇಲ್ಲ ಎಂದು ಪೊಲೀಸರು ಅವುಗಳನ್ನು ತೆಗೆದುಹಾಕಿದ್ದಾರೆ. 

"75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಕೋಮುಗಲಭೆ ಸೃಷ್ಟಿಸುತ್ತಿವೆ. ಆದರೆ, ಈಗಿನ ಸರ್ಕಾರ ಅವರನ್ನು ಮೊಗ್ಗಿನಲ್ಲೇ ಚಿವುಟಿ ಹಾಕುತ್ತದೆ. ಸಾವರ್ಕರ್ ಅವರ ಕಟೌಟ್ ತೆರವು ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಬೆದರಿಕೆ ಹಾಕಿತ್ತು. ಆದರೆ, ನಾವು ಅದೇ ಸ್ಥಳದಲ್ಲಿ ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತೇವೆ" ಎಂದು ಯಶಪಾಲ್ ಸುವರ್ಣ ಹೇಳಿದ್ದು, ಮತ್ತಷ್ಟು ವಿರೋಧ ಮತ್ತು ವಿವಾದಕ್ಕೆ ಕಾರಣವಾಗಿದೆ. 

'ಮುಸ್ಲಿಂ ಪ್ರದೇಶಗಳಲ್ಲಿ' ಸಾವರ್ಕರ್ ಭಾವಚಿತ್ರಗಳನ್ನು ಏಕೆ ಅಳವಡಿಸಲಾಗುತ್ತದೆಂದು ಸಿದ್ದರಾಮಯ್ಯ ಕೇಳಿದ್ದಾರೆ. ಸಿದ್ಧರಾಮಯ್ಯ ಅವರ ಮನೆ ಮುಂದೆಯೂ ಸಾವರ್ಕರ್ ಅವರ ಭಾವಚಿತ್ರವನ್ನು ಸ್ಥಾಪಿಸಲು ನಾವು ಹಿಂಜರಿಯುವುದಿಲ್ಲ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. 

ಸಾವರ್ಕರ್ ಭಾವಚಿತ್ರ ಅಳವಡಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ, "ಸಾವರ್ಕರ್ ಕಟೌಟ್‌ ಹಾಕುವುದಕ್ಕೆ ನಮ್ಮ ಪಕ್ಷದ ವಿರೋಧವಿಲ್ಲ. ಆದರೆ, ಅದರ ಮೇಲೆ ‘ಹಿಂದು ರಾಷ್ಟ್ರ’ ಎಂದು ಬರೆಯುವುದನ್ನು ವಿರೋಧಿಸುತ್ತೇವೆ. ಎದ್ದಿರುವ ದಬ್ಬಾಳಿಕೆ, ಪ್ರತಿಗಾಮಿ ಶೀರ್ಷಿಕೆಗಳು ಮತ್ತು ಘೋಷಣೆಗಳನ್ನು ವಿರೋಧಿಸುತ್ತೇವೆ" ಎಂದು ಹೇಳಿದ್ದಾರೆ.

 ಈ ಸುದ್ದಿ ಓದಿದ್ದೀರಾ?: ಸಾವರ್ಕರ್‌ ಫ್ಲೆಕ್ಸ್ ಹರಿದವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಮಾಜಿ ಸಚಿವ

"ಸಾವರ್ಕರ್‌ ಬ್ರಿಟಿಷರಲ್ಲಿ ಕ್ಷೆಮೆ ಕೇಳಿದಾತ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನೂ ಇಲ್ಲ. ಅವರು ಹಿಂದುತ್ವದ ಹೆಸರಿನಲ್ಲಿ ಜನರ ನಡುವೆ ದ್ವೇಷ ಸೃಷ್ಟಿಸಿದವರು. ಅವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನೆನಪಿಸಿಕೊಳ್ಳುವುದು, ಗೌರವಿಸುವುದು, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರ ವೀರರಿಗೆ ಅಪಮಾನ" ಎಂದು ಸಾಮಾಜಿಕ ಕಾರ್ಯಕರ್ತ ಸರೋವರ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್