ಉಡುಪಿ| ಬ್ರಹ್ಮಾವರ-ಸೀತಾನದಿ ಚತುಷ್ಪತ ರಸ್ತೆ; ಸಾವಿರಾರು ಮರಗಳ ಮಾರಣಹೋಮ 

Udupi
  • ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ
  • 'ಒಂದು ಗಿಡ ಕಡಿದರೆ ಹತ್ತು ಗಿಡ ನೆಡುವ ನಿಯಮವಿದೆ’

ಬ್ರಹ್ಮಾವರ-ಸೀತಾನದಿ ಚತುಷ್ಪಥ ರಸ್ತೆ ಯೋಜನೆ ಭಾಗವಾಗಿ ಚೇರ್ಕಾಡಿಯಿಂದ ಕರ್ಜೆವರೆಗಿನ ಸುಮಾರು ಐದು ಕೀಲೋಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದ್ದು, ಲೋಕೋಪಯೋಗಿ ಇಲಾಖೆ ಗುರುತಿಸಿ ಪಟ್ಟಿ ಮಾಡಿದ ಸುಮಾರು 1320 ಮರಗಳನ್ನು ಕಡಿಯಲು ಸಿದ್ಧತೆ ನಡೆಯುತ್ತಿದೆ.

ಚತುಷ್ಪಥ ರಸ್ತೆ ನಿರ್ಮಾಣ ಮಾಡಬೇಕೆಂಬುದು ಹಲವು ವರ್ಷಗಳ ಕನಸಾಗಿದ್ದು, ಹೆದ್ದಾರಿ ಯೋಜನೆಯಡಿ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಾಮಗಾರಿ ಕೆಲಸದ ಪೂರ್ಣ ಜವಾಬ್ದಾರಿಯನ್ನು ಉಡುಪಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

ಕರ್ಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 741 ಮರಗಳು ಹಾಗೂ ಚೇರ್ಕಾಡಿ ಭಾಗದಲ್ಲಿ ಸುಮಾರು 579 ಮರಗಳು ಕಾಮಗಾರಿ ಹಂತದಲ್ಲಿ ಕಡಿಯಲು ಪಿಡಬ್ಲ್ಯೂ ಡಿ ಇಲಾಖೆ ಗುರುತಿಸಿದೆ. ಮೊದಲ ಹಂತದ ಕಾಮಗಾರಿಯನ್ನು ಹೆಬ್ರಿಯಲ್ಲಿ ಪ್ರಾರಂಭಿಸಲು ಅನುವಾಗಿದ್ದು, ಸೆಪ್ಟೆಂಬರ್ 29ಕ್ಕೆ ಆರ್‌ಎಫ್‌ಓ ಕಚೇರಿಯಲ್ಲಿ ಸಭೆ ಕರೆದಿದೆ.

ಈ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಅರಣ್ಯ ಇಲಾಖೆ ಉಪವಿಭಾಗ ಕುಂದಾಪುರದ ಡಿಎಫ್‌ಓ ಆಶಿಶ್‌ ರೆಡ್ಡಿ,” ಸಂಬಂಧಪಟ್ಟ ಇಲಾಖೆ ಯಾವ ಮರಗಳನ್ನು ಕಡಿಯಬೇಕೆಂದು ಗುರುತಿಸಿ ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಸೆಪ್ಟೆಂಬರ್ 29ಕ್ಕೆ ಸಾರ್ವಜನಿಕ ಸಭೆ ಕರೆಯಲಾಗಿದೆ. ಎಲ್ಲವೂ ನಿಯಮದ ಪ್ರಕಾರವೇ ನಡೆಯುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಉಡುಪಿ | ಮಾಣಿ ಜಲಾಶಯದಲ್ಲಿ ಹೆಚ್ಚಿದ ಒಳಹರಿವು: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿ ತೀರದ ಜನರಿಗೆ ಸೂಚನೆ

“ಒಂದು ಮರ ಕಡಿದರೆ ಹತ್ತು ಮರ ನೆಡಬೇಕೆಂಬ (1:10 Seedling) ನಿಯಮವಿದೆ. ಕಾಮಗಾರಿ ಪ್ರಾರಂಭದ ಮೊದಲೇ 1:10 ಗಿಡ ನೆಡುವ ಪೂರ್ಣ ಖರ್ಚನ್ನು ಅರಣ್ಯ ಇಲಾಖೆಗೆ ರಸ್ತೆ ಕಾಮಗಾರಿ ಕೈಗೊಳ್ಳುವ ಇಲಾಖೆ ನೀಡಬೇಕು. ಕಾಮಗಾರಿ ಪೂರ್ಣಗೊಂಡ ಮೇಲೆ ಒಂದು ಕೀಲೋಮೀಟರ್ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ಸುಮಾರು 300 ಗಿಡಗಳನ್ನು ನೆಡಬೇಕಾಗಿದೆ. ರಸ್ತೆ ಬದಿಯಲ್ಲಿ ಗಿಡ ನೆಡುವ ಕೆಲಸಕ್ಕೆ ಸುಮಾರು 3 ಲಕ್ಷ ರೂಪಾಯಿ ಹಣವನ್ನು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಇಲಾಖೆ ನೀಡಬೇಕೆಂಬ ನಿಯಮವಿದೆ. ಈ ನಿಯಮವನ್ನು ಪರಿಷ್ಕರಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ” ಎಂದರು.

ಈದಿನ. ಕಾಮ್‌ ಜೊತೆ ಮಾತನಾಡಿದ ಹೆಬ್ರಿಯ ಅಭಿ ಪೂಜಾರಿ,”ರಸ್ತೆ ನಿರ್ಮಾಣ ಮಾಡಬೇಕೆಂಬುವುದು ನಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿದೆ. ರಸ್ತೆ ನಿರ್ಮಾಣದ ಜೊತೆ ಪರಿಸರವನ್ನು ಕಾಪಾಡಬೇಕಾಗಿರುವುದು ನಮ್ಮ ಹೊಣೆ. ಕೆಲವು ವಿಶಿಷ್ಟ ಜಾತಿಯ ಮರಗಳು ನಾಶವಾಗದಂತೆ ನೋಡಿಕೊಳ್ಳಬೇಕು. ವಿಶಿಷ್ಟ ಜಾತಿಯ ಮರಗಳಿದ್ದರೆ ಕಡಿಯುವ ಬದಲು ಪರ್ಯಾಯ ವ್ಯವಸ್ಥೆ ಮಾಡುವುದು ಒಳಿತು. ಕಡಿದಷ್ಟೇ ಮರವನ್ನು ಅದೇ ಭಾಗದಲ್ಲಿ ನೆಡಬೇಕು” ಎಂದು ಅಭಿಪ್ರಾಯಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್