ಉಡುಪಿ | ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಆಗ್ರಹ

ಕುಡುಬಿ ಜನಾಂಗ
  • ಪೋರ್ಚುಗೀಸರ ದಬ್ಬಾಳಿಕೆಗೆ ಹೆದರಿ ಕರ್ನಾಟಕಕ್ಕೆ ವಲಸೆ ಬಂದ ಜನಾಂಗ
  • ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದಲ್ಲಿರುವ ಸಮುದಾಯ 

ಅಲೆಮಾರಿ ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕುಡುಬಿ ಸಂಘದ ಮುಖಂಡರು ಮತ್ತು ಉಡುಪಿ ಶಾಸಕ ಕೆ ರಘುಪತಿ ಭಟ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಕುಡುಬಿ ಸಂಘದ ಅಧ್ಯಕ್ಷ ಎಂ ಕೆ ನಾಯಕ್, ‘ಈ ದಿನ.ಕಾಮ್’ ಜತೆಗೆ ಈ ಕುರಿತು ಮಾತನಾಡಿ, “ಕುಡುಬಿ ಜನಾಂಗ ಪೋರ್ಚುಗೀಸರ ದಬ್ಬಾಳಿಕೆಗೆ ಹೆದರಿ ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದರು. ಪ್ರಸ್ತುತ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ರಾಜ್ಯದಲ್ಲಿ ಅಂದಾಜು 30 ಸಾವಿರ ಜನಸಂಖ್ಯೆ ಇದ್ದು, ಇವರು ಕೃಷಿ ಕಾರ್ಮಿಕರಾಗಿಯೇ ಹಿಂದಿನಿಂದಲೂ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ಒಂದೆರಡು ಎಕರೆ ಜಮೀನು ಖರೀದಿ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು. 

“ಕುಡುಬಿ ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂದು ಸಮಾರು 35 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಪ್ರಸ್ತುತ ಇತರೆ ಹಿಂದುಳಿದ ವರ್ಗ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಕುಡುಬಿ ಜನಾಂಗವನ್ನು ಆರ್ಥಿಕವಾಗಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸದೃಢಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಎಸ್‌ಟಿ ಪಟ್ಟಿಗೆ ಸೇರಿಸಬೇಕು” ಎಂದು ಒತ್ತಾಯಿಸಿದರು.

“ಕುಡುಬಿ ಸಮುದಾಯದ ಆಚಾರ, ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಅಂಶಗಳ ಕುರಿತು ಅಧ್ಯಯನ ನಡೆಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ಮನವಿ ಮಾಡಿದರು.

“ಅನೇಕ ವರ್ಷಗಳಿಂದಲೂ ಹೋರಾಟ ನಡೆಯುತ್ತಿದ್ದು, ಶಾಸಕ ರಘುಪತಿ ಭಟ್ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ನಾವು ನೀಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಶ್ರೀರಾಮುಲು ಅವರು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಚರ್ಚಿಸಲು ಶೀಘ್ರ ಸರ್ವಪಕ್ಷ ಸಭೆ: ಸಿಎಂ ಬೊಮ್ಮಾಯಿ

ಮನವಿ ಸಲ್ಲಿಸುವ ವೇಳೆ ಉಡುಪಿ ಶಾಸಕ ರಘುಪತಿ ಭಟ್, ಕರ್ನಾಟಕ ರಾಜ್ಯ ಕುಡುಬಿ ಸಂಘದ ಕೋಶಾಧಿಕಾರಿ ಗಣಪತಿ ನಾಯಕ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ನಾಯಕ್, ಪದಾಧಿಕಾರಿಗಳಾದ ನರಸಿಂಹ ನಾಯಕ್, ಸುರೇಂದ್ರ ನಾಯಕ್ ಹಾಗೂ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180