ಉಡುಪಿ | ಅಮೃತ ಸರೋವರ ಯೋಜನೆಯಡಿ ಉದ್ಘಾಟನೆಗೆ ಸಿದ್ಧವಾದ ಕೆರೆಬೆಟ್ಟು ಗ್ರಾಮದ ಕೆರೆ

  • ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿ ಅಮೃತ ಸರೋವರ ಯೋಜನೆ ಜಾರಿ
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹6 ಲಕ್ಷ  ಅನುದಾನ

ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಆದೇಶದಂತೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕೆಲವು ಕೆರೆಗಳು ನಿರ್ಮಾಣಗೊಳ್ಳಲಿವೆ. ಮೊದಲ ಹಂತದಲ್ಲಿ ತಾಲೂಕಿನ ಕೆರೆಬೆಟ್ಟು ಗ್ರಾಮದಲ್ಲಿ ಕೆರೆ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 

ಅಮೃತ ಸರೋವರ ಯೋಜನೆಯಡಿ ಹೆಬ್ರಿ ತಾಲೂಕಿನಲ್ಲಿ ಕುಚ್ಚೂರಿನ ಬೀಡಿ ಬೆಟ್ಟು ಕೆರೆ, ಮುದ್ರಾಡಿಯ ಜಕ್ಕಾನಾಡಿ ಕೆರೆ, ಶಿವಪುರ ಪಂಜರ ಕೆರೆ, ಶಿವಪುರ ಶಂಕರ ದೇವಸ್ಥಾನ ಕೆರೆ, ಅಲ್ಬಾಡಿ ಮಾಬ್ಳಿ ಕೆರೆಗಳು ನಿರ್ಮಾಣಗೊಳ್ಳಲಿವೆ. 

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿ ಅಮೃತ ಸರೋವರ ಯೋಜನೆ ಜಾರಿಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗುವಂತೆ ಕೆರೆ, ಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. 

ಅಮೃತ ಸರೋವರ ಯೋಜನೆಯಡಿ ನಶಿಸಿ ಹೋಗುತ್ತಿರುವ ಜಲಮೂಲಗಳ ಸಂರಕ್ಷಣಾ ಕಾರ್ಯ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕನಿಷ್ಠ ಒಂದು ಎಕರೆ ವಿಸ್ತೀರ್ಣ ಹೊಂದಿರುವ ಹತ್ತು ಸಾವಿರ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗುವ 75 ಕೆರೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಸೂಚಿಸಿದೆ.  

ಈ ಸುದ್ದಿ ಓದಿದ್ದೀರಾ? ಕೋಲಾರ | ಶೆಟ್ಟಿಹಳ್ಳಿ ಕೆರೆ ಕಾಮಗಾರಿ ಪರಿಶೀಲಿಸಿದ ನರೇಗಾ ಆಯುಕ್ತೆ ಶಿಲ್ಪಾ ನಾಗ್

ರಾಜ್ಯ ಸರ್ಕಾರದ ಸೂಚನೆಯಂತೆ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಬೆಟ್ಟು ಗ್ರಾಮದ ಕೆರೆ ನಿರ್ಮಾಣಗೊಂಡಿದ್ದು, ಜಲಮೂಲಗಳ ಪುನಶ್ಚೇತನಕ್ಕೆ ಆಗಸ್ಟ್ 15ರಂದು ಈ ಕೆರೆ ಲೋಕಾರ್ಪಣೆಗೊಳ್ಳಲಿದೆ ಎಂದು ವರದಿಯಾಗಿದೆ.

2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹6 ಲಕ್ಷ ಮತ್ತು ಪಶು ಸಂಗೋಪನಾ ಇಲಾಖೆಯಡಿ ₹2.50 ಲಕ್ಷ ಸೇರಿ ಒಟ್ಟು ₹8.50 ಲಕ್ಷ ಅನುದಾನದಲ್ಲಿ ಕೆರೆಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್