
- 'ನಿಮ್ಮ ಮಗನನ್ನು ನೀವು ಟೆರರಿಸ್ಟ್ ಅಂತ ಕರೆಯುತ್ತೀರಾ?' ಎಂದು ಪ್ರಶ್ನಿಸಿದ ಮುಸ್ಲಿಂ ವಿದ್ಯಾರ್ಥಿ
- ಪ್ರಾಧ್ಯಾಪಕರಿಗೆ ತರಗತಿ ತೆಗೆದುಕೊಳ್ಳುವುದಕ್ಕೆ ನಿಷೇಧ ಹೇರಿದ ಪ್ರತಿಷ್ಠಿತ ಮಣಿಪಾಲ ವಿವಿ
ತರಗತಿಯಲ್ಲೇ ಎಲ್ಲ ವಿದ್ಯಾರ್ಥಿಗಳ ಮುಂದೆ ಮುಸ್ಲಿಂ ವಿದ್ಯಾರ್ಥಿಯೋರ್ವನನ್ನು 'ಟೆರರಿಸ್ಟ್' ಎಂದ ಪ್ರೊಫೆಸರ್ ಅನ್ನು, ವಿದ್ಯಾರ್ಥಿ ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಉಡುಪಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಮಣಿಪಾಲ ವಿವಿಯಲ್ಲಿ ನಡೆದ ಘಟನೆಯ ವಿಡಿಯೋ ಇದು ಎಂದು ತಿಳಿದುಬಂದಿದ್ದು, ಎರಡು ವಾರದ ಹಿಂದೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪ್ರಾಧ್ಯಾಪಕರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಘಟನೆ ನಡೆದಿರುವುದಾಗಿ ಒಪ್ಪಿಕೊಂಡ ಮಣಿಪಾಲ ವಿವಿಯ ಅಧಿಕಾರಿ ಶಾರದಾ ಪ್ರಸಾದ್ಕರ್, "ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಾಧ್ಯಾಪಕರಿಗೆ ತರಗತಿ ತೆಗೆದುಕೊಳ್ಳುವುದಕ್ಕೆ ನಿಷೇಧ ಹೇರಿದ್ದೇವೆ. ತನಿಖೆಗೆ ಕಮಿಟಿ ರಚಿಸಿದ್ದೇವೆ" ಎಂದು ಈ ದಿನ.ಕಾಮ್ಗೆ ತಿಳಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿ ಸೌದಿ ಅರೇಬಿಯಾದ ಪ್ರಜೆಯಾಗಿದ್ದು, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿದ್ದ ಎಂದು ತಿಳಿದುಬಂದಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು 'ಟೆರರಿಸ್ಟ್' ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿ ಪ್ರಾಧ್ಯಾಪಕರೊಂದಿಗೆ ಆಕ್ರೋಶಿತನಾಗಿ ಪ್ರತಿಕ್ರಿಯಿಸಿದ್ದು “ನೀವು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ?. ಎಲ್ಲ ಸಹಪಾಠಿಗಳ ಮಧ್ಯೆ ಹೇಗೆ ನನ್ನನ್ನು 'ಟೆರರಿಸ್ಟ್' ಎಂದು ಸಂಭೋದಿಸುತ್ತೀರಿ? ನೀವು ಶಿಕ್ಷಕರು. ನೀವು ಹಾಗೆ ನನ್ನನ್ನು ಕರೆಯಬಹುದೇ? ನೀವು ಕ್ಷಮಿಸು ಎಂದ ಮಾತ್ರಕ್ಕೆ ನಿಮ್ಮ ಅಲೋಚನೆ ಬದಲಾಗಲು ಸಾಧ್ಯವೇ? ನೀವು ನಿಮ್ಮ ವ್ಯಕ್ತಿತ್ವವನ್ನು ಈ ಮೂಲಕ ತೋರಿಸುತ್ತಿದ್ದೀರಾ? 26/11(ಮುಂಬೈ ಉಗ್ರರ ದಾಳಿ) ಘಟನೆ ಒಂದು ಹಾಸ್ಯ ಘಟನೆಯಲ್ಲ. ಭಯೋತ್ಪಾದಕ ಕೃತ್ಯ ಅದು. ಹಾಸ್ಯಾಸ್ಪದವಲ್ಲ. 'ಮುಸ್ಲಿಮ್' ಎಂಬ ಕಾರಣಕ್ಕೆ ಈ ರೀತಿಯ ವರ್ತನೆಯನ್ನು ಪ್ರತಿ ನಿತ್ಯ ಅನುಭವಿಸುವುತ್ತಿರುವುದು ಹಾಸ್ಯಾಸ್ಪದ ಅಲ್ಲ.” ಎಂದು ತಿಳಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಾಧ್ಯಾಪಕರು, 'ಕ್ಷಮಿಸು...ತಪ್ಪಾಯಿತು, ನೀನು ನನ್ನ ಮಗನಂತೆ ಎಂದು' ಸಮಜಾಯಿಷಿ ನೀಡಲು ಯತ್ನಿಸಿದಾಗ, "ಹಾಗಾದರೆ, ನೀವು ಇದೇ ರೀತಿ ನಿಮ್ಮ ಮಗನಿಗೆ ಹೇಳುತ್ತಿದ್ರಾ?" ಎಂದು ಕೂಡ ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
"ಈ ಘಟನೆಯನ್ನು ತರಗತಿಯಲ್ಲಿದ್ದ ಬೇರೊಬ್ಬ ವಿದ್ಯಾರ್ಥಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಘಟನೆ ನಡೆದು ಎರಡು ವಾರಗಳಾಗಿತ್ತು. ಇತ್ತೀಚೆಗೆ ಮಣಿಪಾಲ ವಿವಿಯ ವಿದ್ಯಾರ್ಥಿಗಳ ವಾಟ್ಸ್ಆಪ್ ಗ್ರೂಪಿನಲ್ಲಿ ವಿಡಿಯೋ ಬಂದ ಬಳಿಕ ಇದು ವೈರಲಾಗಿದೆ" ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ವಿವಿಯ ವಿದ್ಯಾರ್ಥಿಯೋರ್ವ ಮಾಹಿತಿ ನೀಡಿದ್ದಾನೆ. ಇದೀಗ ಟ್ವಿಟರ್ನಲ್ಲಿಯೂ ಈ ಘಟನೆ ಪ್ರೊಫೆಸರ್ ಎಂಬ ಹ್ಯಾಶ್ಟ್ಯಾಗ್ ನಲ್ಲಿ ಟ್ರೆಂಡ್ ಆಗಿದೆ.
ಈ ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮಣಿಪಾಲ ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಾರದಾ ಪ್ರಸಾದ್ ಕರ್, "ನಮಗೆ ಈ ಘಟನೆ ತಿಳಿದುಬಂದದ್ದು ಭಾನುವಾರ ರಾತ್ರಿ 11.30ರ ವೇಳೆಗೆ. ಇಂತಹ ಘಟನೆಯನ್ನು ನಮ್ಮ ಸಂಸ್ಥೆ ಸಹಿಸುವುದಿಲ್ಲ. ಇದು ಖಂಡನೀಯ. 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ಇಂತಹ ಯಾವುದೇ ಜನಾಂಗೀಯ ನಿಂದನೆಗಳಿಗೆ ನಮ್ಮ ಸಂಸ್ಥೆ ಪ್ರೋತ್ಸಾಹ ನೀಡುವುದಿಲ್ಲ. ಘಟನೆ ಬೆಳಕಿಗೆ ಬಂದ ಕೂಡಲೇ ಸಂಸ್ಥೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿ, ವಿಡಿಯೋದಲ್ಲಿರುವ ಪ್ರಾಧ್ಯಾಪಕರಿಗೆ ತರಗತಿ ತೆಗೆದುಕೊಳ್ಳುವುದಕ್ಕೆ ನಿಷೇಧ ಹೇರಿದ್ದಾರೆ. ವಿಡಿಯೋದಲ್ಲಿರುವ ವಿದ್ಯಾರ್ಥಿ ದೂರು ನೀಡಿಲ್ಲ. ಆದರೂ, ಸಂಸ್ಥೆಯೇ ಸುಮೋಟೊ ತನಿಖೆ ನಡೆಸಲು ಮುಂದಾಗಿದ್ದು, ಇದಕ್ಕಾಗಿ ಕಮಿಟಿ ರಚಿಸಿದ್ದೇವೆ. ಕಮಿಟಿ ಏನು ಹೇಳುತ್ತದೆಯೋ ಆ ರೀತಿ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಲಿದೆ" ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವಾಟ್ಸ್ಆಪ್ನಲ್ಲಿ ಹೇಳಿಕೆ ನೀಡಿರುವ ವಿಡಿಯೋದಲ್ಲಿರುವ ಮುಸ್ಲಿಂ ವಿದ್ಯಾರ್ಥಿ, "ಜನಾಂಗೀಯ ಕಾಮೆಂಟ್ಗಳು ಸ್ವೀಕಾರಾರ್ಹವಲ್ಲ ಎಂದು ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರಿಗೆ ಹೇಳುವ ವಿಡಿಯೊ ವೈರಲ್ ಆಗುತ್ತಿರುವುದನ್ನು ನೀವೆಲ್ಲರೂ ನೋಡಿರಬೇಕು. ಈ ದೇಶ ಕಂಡ ದೊಡ್ಡ ಭಯೋತ್ಪಾದಕರಲ್ಲಿ ಒಬ್ಬನಾದ "ಕಸಬ್" ಎಂಬ ಸ್ವೀಕಾರಾರ್ಹವಲ್ಲದ ಹೆಸರಿನಿಂದ ಅವರು ನನ್ನನ್ನು ಕರೆದಿರುವುದೇ ಇದರ ಹಿಂದಿನ ಕಾರಣ. ಮನುಷ್ಯನೊಬ್ಬನ ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಈ ಮಾತನ್ನು ತಮಾಷೆ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ಆದರೂ, ಘಟನೆ ಬಳಿಕ ಪ್ರಾಧ್ಯಾಪಕರ ಜೊತೆಗೆ ಮಾತನಾಡಿದ್ದೇನೆ ಮತ್ತು ಅವರ ಕ್ಷಮೆ ಯಾಚನೆಯೂ ಪ್ರಾಮಾಣಿಕತೆಯಿಂದ ಕೂಡಿದೆ ಎನಿಸಿದೆ. ನಾವು ವಿದ್ಯಾರ್ಥಿಗಳು ಈ ಒಂದು ತಪ್ಪನ್ನು ಕ್ಷಮಿಸಬಹುದು. ಆ ಕ್ಷಣದಲ್ಲಿ ಪ್ರಾಧ್ಯಾಪಕರ ಆಲೋಚನೆ ಏನಿತ್ತು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರು ನಿಜಾರ್ಥದಲ್ಲಿ ಈ ಮಾತನ್ನು ಬಳಸಿಲ್ಲ ಎಂದು ನಾನು ನಂಬುತ್ತೇನೆ. ನಾವು ಮೆಚ್ಚಿದ ಪ್ರಾಧ್ಯಾಪಕರು ಇಂತಹ ಮಾತನ್ನು ತರಗತಿಯಲ್ಲಿ ಆಡಬಾರದಿತ್ತು. ಆದರೆ, ಈ ಬಾರಿ ಇದನ್ನು ನಿರ್ಲಕ್ಷಿಸಬಹುದು. ನನ್ನೊಂದಿಗೆ ನಿಂತಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾನೆ. ಈ ವಾಟ್ಸ್ಆಪ್ ಚಾಟ್ ಈ ದಿನ.ಕಾಮ್ಗೆ ಲಭ್ಯವಾಗಿದೆ.
ಈ ಘಟನೆಯ ವಿಡಿಯೋವನ್ನು ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಧ್ಯಕ್ಷರೂ ಆಗಿರುವ ಪ್ರೊಫೆಸರ್ ಅಶೋಕ್ ಸ್ವೈನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ದೇಶದ ತರಗತಿಯೊಂದರಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನು 'ಭಯೋತ್ಪಾದಕ' ಎಂದು ಕರೆಯುತ್ತಾರೆ. ಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೀಗಿದೆ ನೋಡಿ" ಎಂದು ಬರೆದುಕೊಂಡಿದ್ದರು.
ಘಟನೆಗೆ ಖಂಡನೆ
ಈ ಘಟನೆಯನ್ನು ಎಸ್.ಐ.ಓ ಉಡುಪಿ ಜಿಲ್ಲೆ, ಎನ್.ಎಸ್.ಯು.ಐ ಖಂಡಿಸಿವೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತ ಅಮೃತ್ ಶೆಣೈ ತೀವ್ರವಾಗಿ ಖಂಡಿಸಿದ್ದಾರೆ.
"ಕ್ಯಾಂಪಸ್ಗಳು ಪ್ರೀತಿ, ಸೌಹಾರ್ದತೆಯ ತಾಣಗಳಾಗಬೇಕು ಹೊರತು ದ್ವೇಷ ಬಿತ್ತುವ ಕೂಪಗಳಾಗಬಾರದು. ಪ್ರಾಧ್ಯಾಪಕರ ಈ ತಾರತಮ್ಯದ ಮನಸ್ಥಿತಿ ನಿಜಕ್ಕೂ ಆಘಾತಕಾರಿ. ಇಂತಹ ಮನಸ್ಥಿತಿಯಿಂದಾಗಿ ದೇಶದ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗಲಿದೆ. ಈ ದೇಶದಲ್ಲಿ ಜಾತಿ-ಮತ-ಭೇದ ಇಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣ ಪಡೆಯುವ ಕ್ಯಾಂಪಸ್ಗಳು ವಿದ್ಯಾರ್ಥಿಗಳ ಪಾಲಿಗೆ ಹೆಚ್ಚು ಸುರಕ್ಷಿತವಾಗಿ ರೂಪುಗೊಳ್ಳಬೇಕೇ ವಿನಃ ಅಭದ್ರತೆಯ ವಾತಾವರಣಕ್ಕೆ ಕಾರಣವಾಗಬಾರದು. ಪ್ರಾಧ್ಯಾಪಕರ ಇಂತಹ ಅಪ್ರಬುದ್ಧ ನಡೆ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತದೆ. ಪ್ರಾಧ್ಯಾಪಕರ ಈ ವರ್ತನೆಯ ವಿರುದ್ಧ ವಿಶ್ವವಿದ್ಯಾಲಯವು ಶಿಸ್ತು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಿಗಾವಹಿಸಬೇಕು" ಎಂದು ಆಗ್ರಹಿಸಿದ್ದಾರೆ.
"ತರಗತಿಯಲ್ಲಿ ವಿದ್ಯಾರ್ಥಿಗೆ ʼಭಯೋತ್ಪಾದಕʼನೆಂದು ಕರೆದು ಅವಮಾನಿಸಿರುವ ಘಟನೆ, ಇದು ವಿದ್ಯೆಯನ್ನು ಕಲಿಸುವ ಓರ್ವ ಶಿಕ್ಷಕನ ಮನಸ್ಥಿತಿ ಮಾತ್ರವಲ್ಲ, ಬದಲಾಗಿ ಈ ದೇಶವು ಯಾವ ಕಡೆಗೆ ಮುನ್ನುಗ್ಗುತ್ತಿದೆ ಎಂಬುವುದಕ್ಕಿರುವ ಸ್ಪಷ್ಟ ಉದಾಹರಣೆ. ದ್ವೇಷವನ್ನು ಕಾರುವ ಫ್ಯಾಸಿಸ್ಟ್ ಗೂಂಡಾಗಳ ಭಾಷೆಯಲ್ಲಿ ಹಾಗೂ ಸರ್ಕಾರ ಮತ್ತು ಮಾಧ್ಯಮ ಪ್ರತಿನಿಧಿಗಳ ಭಾಷೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಿರುವಾಗ, ಉಪನ್ಯಾಸಕರ ಬಾಯಲ್ಲೂ ಅದೇ ಭಾಷೆ ಪ್ರಯೋಗವಾಗಿರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಆದರೆ ದ್ವೇಷವನ್ನು ಬಿತ್ತುವವರು ಕಡಿಮೆ ಪ್ರಮಾಣದಲ್ಲಿದ್ದರೂ, ಆ ಮನಸ್ಥಿತಿಯನ್ನು ಪ್ರಶ್ನಿಸದೇ ಇರುವ ಬಹುಸಂಖ್ಯಾತರ ಮೌನವು ಇಲ್ಲಿ ಅತ್ಯಂತ ಹೆಚ್ಚು ಆತಂಕಕಾರಿ. ಪ್ರಶ್ನಿಸುವ ಧ್ವನಿಗಳು ಕ್ಷೀಣಿಸುತ್ತಿರುವಾಗ ಧೈರ್ಯದಿಂದ, ಯಾವುದೇ ಮುಜುಗರಕ್ಕೆ ಒಳಗಾಗದೆ ಪ್ರಶ್ನೆಯನ್ನು ಕೇಳಿ, ತನ್ನ ವಿರೋಧವನ್ನು ವ್ಯಕ್ತಪಡಿಸಿದ ಆ ವಿದ್ಯಾರ್ಥಿಯ ಸಾಮಾಜಿಕ ಪ್ರಜ್ಞೆಗೆ ನನ್ನದೊಂದು ಸಲಾಮ್" ಎಂದು ಸಾಲಿಡಾರಿಟಿ ಯೂತ್ಮೂಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಹೇಳಿಕೆ ನೀಡಿದ್ದಾರೆ.