ಕೋಲಾರ | ಉಳ್ಳೇರಹಳ್ಳಿ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ರೈತ ಸಂಘ ಆಗ್ರಹ

kolara
  • ಮಾಸ್ತಿ ನಾಡ ಕಚೇರಿ ಅಧಿಕಾರಿ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ 
  • ಸಂತ್ರಸ್ತ ದಲಿತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ರಕ್ಷಣೆಗೆ ಒತ್ತಾಯ

ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ಹೋಬಳಿ ಉಳ್ಳೇರಹಳ್ಳಿ ದಲಿತ ಬಾಲಕ ದೇವರ ಗುಜ್ಜುಕೋಲು ಮುಟ್ಟಿದ್ದಕ್ಕೆ ದಂಡ ವಿಧಿಸಿರುವ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಮಾಸ್ತಿ ನಾಡ ಕಚೇರಿ ಅಧಿಕಾರಿ ಬಸವರಾಜ್ ಮುಖಾಂತರ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ, “ಸೆಪ್ಟೆಂಬರ್ 10ರಂದು ಉಳ್ಳೇರಹಳ್ಳಿಯಲ್ಲಿ ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಗುಜ್ಜಕೋಲು ಕೆಳಕ್ಕೆ ಬಿದ್ದಾಗ ಅದನ್ನು ಚೇತನ್ ಎಂಬ ದಲಿತ ಬಾಲಕ ಎತ್ತಿ ಕೊಟ್ಟಿದ್ದ. ಆ ಕಾರಣಕ್ಕೆ ಕೋಲು ಮೈಲಿಗೆಯಾಯಿತು ಎಂದು ಬಾಲಕನನ್ನು ಥಳಿಸಿ 60 ಸಾವಿರ ರೂ. ದಂಡ ವಿಧಿಸಲಾಗಿತ್ತು. ದಂಡ ಪಾವತಿಸಲು ಆಗದಿದ್ದರೆ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲು ನಿರ್ಧರಿಸಿದ್ದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿರುವುದು ಮನುಕುಲ ತಲೆ ತಗ್ಗಿಸುವಂತಹ ಸಂಗತಿ. ಪರಿಶಿಷ್ಟ ಜಾತಿಯ ಬಾಲಕನ ಮೇಲೆ ದೇವರ ಹೆಸರಿನಲ್ಲಿ ನಡೆದಿರುವ ದೌರ್ಜನ್ಯ ಅತ್ಯಂತ ಅಮಾನವೀಯ ಮತ್ತು ಅಸಾಂವಿಧಾನಿಕ” ಎಂದು ಅವರು ಬೇಸರ ವ್ಯಕ್ತಪಡಿಸಿದರು. 

“ಗ್ರಾಮೀಣ ಭಾಗದಲ್ಲಿ ದಲಿತರು ದೇವರನ್ನು ಮುಟ್ಟಿದರೆ ಮೈಲಿಗೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಜಾತಿ ವ್ಯವಸ್ಥೆಯ ಸಂಕೇತ. ಒಂದೆಡೆ ಮಕ್ಕಳನ್ನು ದೇವರು ಎನ್ನುತ್ತಾರೆ. ಮತ್ತೊಂದೆಡೆ ದಲಿತ ಬಾಲಕನೊಬ್ಬನ ಸ್ಪರ್ಶದಿಂದ ದೇವರಿಗೆ ಮೈಲಿಗೆ ಆಯಿತು ಎಂದು ಹೇಳುವುದು ಖಂಡನೀಯ” ಎಂದಿದ್ದಾರೆ.

ರೈತ ಸಂಘದ ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, “ಜಾತಿ ವ್ಯವಸ್ಥೆಯ ಅಪಮಾನಕ್ಕೆ ಗುರಿಯಾಗುವ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಮಕ್ಕಳ ಮನಸ್ಸಿನಲ್ಲಿ ಪ್ರೇಮ ಮತ್ತು ಸಹಬಾಳ್ವೆಗೆ ಅವಕಾಶವಿರುವ ಚಿತ್ರಣ ಮೂಡಿಸಬೇಕೇ ಹೊರತು ಒಡಕಿನ ಬಿಂಬಗಳನ್ನಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ದೇವರ ಗುಜ್ಜುಕೋಲು ಮುಟ್ಟಿದ ಪ್ರಕರಣ : ಎಂಟು ಮಂದಿ ಬಂಧನ

“ಇಂಥ ಘಟನೆಗಳು ಸಾಮಾಜಿಕ ಶಾಂತಿಗೆ ಧಕ್ಕೆ ತರುವುದರ ಜತೆಗೆ ದೇಶದ ಅಭಿವೃದ್ಧಿಗೂ ಮಾರಕವಾಗುತ್ತವೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.

ಈ ವೇಳೆ ಹಸಿರು ಸೇನೆಯ ಮಾಲೂರು ತಾಲ್ಲೂಕು ಅಧ್ಯಕ್ಷ ಹರೀಶ್, ಕೋಲಾರ ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ಹನುಮಯ್ಯ, ಮುನಿರಾಜು, ಆಂಜಿನಪ್ಪ, ರೂಪೇಶ್, ಮಂಗಸಂದ್ರ ತಿಮ್ಮಣ್ಣ ಹಾಗೂ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180