ಹಣದುಬ್ಬರ ನಿಯಂತ್ರಿಸಲಾಗದ ಬಿಜೆಪಿ ಸರ್ಕಾರ ಜನರ ಪಾಲಿನ ಶಾಪ: ಸಿದ್ದರಾಮಯ್ಯ ಕಿಡಿ

ಸಿದ್ದರಾಮಯ್ಯ
  • ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಆಕ್ರೋಶ
  • ಚುನಾವಣೆಗಳು ಹತ್ತಿರ ಬಂದಾಗ ರಾಜನಿಗೆ ಬೇಕಾದಂತಹ ವರದಿಗಳು ಸಿದ್ಧವಾಗುತ್ತವೆ: ಟೀಕೆ 

"ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಹೇಳಿದೆ. ಈ ಸುಳ್ಳು ಮಾಹಿತಿಯನ್ನು ದೇಶದ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ನೋಡಿಕೊಂಡಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ”ಬಿಜೆಪಿ ಸರ್ಕಾರದ ಪ್ರಕಾರ ದೇಶದಲ್ಲಿ ಹೆಚ್ಚಾಗಿರುವ ಬೆಲೆಗಳೆಲ್ಲ ಕಡಿಮೆಯಾಗಿರುವವೆ? ಜನರು ಬೆಲೆಗಳು ಕಡಿಮೆಯಾಗಿವೆಯೆಂದು ಖುಷಿಯಾಗಿರುವರೆ? ಜನರ ಖರೀದಿಯ ಸಾಮರ್ಥ್ಯ ಹೆಚ್ಚಾಗಿದೆಯೆ? ಜನರಿಗೆ ಅಗತ್ಯ ಇರುವ ವಸ್ತುಗಳ ಉತ್ಪಾದನೆಯು ದೇಶದಲ್ಲಿ ಹೆಚ್ಚಾಗಿದೆಯೆ? ಆಮದು ಕಡಿಮೆಯಾಗಿದೆಯೆ? ಈ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರಗಳು ಉತ್ತರ ಹೇಳುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

“ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ರಾಜನಿಗೆ ಬೇಕಾದಂತಹ ವರದಿಗಳನ್ನು ವಾಸ್ತವಕ್ಕೆ ವಿರುದ್ಧವಾಗಿ ತಿರುಗಾ- ಮುರುಗಾ ಮಾಡಿ ಸಿದ್ಧ ಮಾಡಿಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಬಿಜೆಪಿ ಎಂಬುದು ದಿಲ್ಲಿಯಿಂದ ಹಳ್ಳಿಯವರೆಗೆ ‘ಬೊಗಳೆ ಬಿಡುವ ಪಕ್ಷ’ ಎಂದು ಪದೇಪದೆ ಸಾಬೀತಾಗುತ್ತಿದೆ. ಅದಕ್ಕಾಗಿಯೆ ಬಿಜೆಪಿಯನ್ನು ‘ಸುಳ್ಳನ್ನು ಉತ್ಪಾದಿಸಿ ಮಾರುವ ಫ್ಯಾಕ್ಟರಿ’ ಎಂದು ಜನರೇ ಕರೆಯುತ್ತಿದ್ದಾರೆ” ಎಂದು ಟೀಕಿಸಿದ್ದಾರೆ. 

“2012ರ ವರ್ಷವನ್ನು ಬೇಸ್ ವರ್ಷವೆಂದು ಆಧಾರವಾಗಿಟ್ಟುಕೊಂಡು ಮಾಡುವ ಸಮೀಕ್ಷೆಯ ವರದಿಗಳನ್ನು ಕೇಂದ್ರ ಸರ್ಕಾರವು ಆಗಿಂದಾಗ್ಗೆ ಬಿಡುಗಡೆ ಮಾಡುತ್ತಿರುತ್ತದೆ. ಆಹಾರ ಪದಾರ್ಥಗಳು, ವಸತಿ, ಇಂಧನ, ವಿದ್ಯುತ್, ಬಟ್ಟೆ ಹಾಗೂ ಇನ್ನಿತರೆ ವಸ್ತುಗಳು, ಶಿಕ್ಷಣ, ವೈದ್ಯಕೀಯ, ಸಾರಿಗೆ ಮುಂತಾದ ಸೇವೆಗಳು ಹೀಗೆ ಮುಖ್ಯವಾದ ವಲಯಗಳಲ್ಲಿನ ಬೆಲೆಗಳನ್ನು ಆಧರಿಸಿ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ 2012ರ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ಬೆಲೆಗಳನ್ನು ಹೋಲಿಕೆ ಮಾಡಿ ಪ್ರತಿ ತಿಂಗಳ ಏರಿಳಿತಗಳನ್ನು ಲೆಕ್ಕ ಹಾಕಲಾಗುತ್ತದೆ. ಹಣದುಬ್ಬರದಲ್ಲಿನ ಶೇ.40ಕ್ಕೂ ಹೆಚ್ಚು ಪಾಯಿಂಟುಗಳು ಆಹಾರ ಸಂಬಂಧಿತ ವಲಯಕ್ಕೆ ನೀಡಲಾಗಿದೆ” ಎಂದಿದ್ದಾರೆ.

“2014ಕ್ಕೆ ಮೊದಲು 70 ರೂಪಾಯಿ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆ ಈಗ 160 ರೂ.ಗೆ ಹೆಚ್ಚಿದೆ. ಹಾಗೆಯೆ ಅಡುಗೆ ಗ್ಯಾಸಿನ ಬೆಲೆ ಕಡಿಮೆಯಾಗಿಲ್ಲ. 2013 ರಲ್ಲಿ 400 ರೂ ಇದ್ದದ್ದು ಈಗ 1100 ರೂ ವರೆಗೆ ಏರಿಕೆಯಾಗಿದೆ. 47 ರೂ ಇದ್ದ ಡೀಸೆಲ್ಲು 90 ರೂ ಆಗಿದೆ. ಪೆಟ್ರೋಲ್ ಕೂಡ ಹಾಗೆಯೆ. ರಾಜ್ಯದಲ್ಲಿ ವಿದ್ಯುತ್ ಶುಲ್ಕವನ್ನೂ ಬೇಕಾಬಿಟ್ಟಿ ಏರಿಸಲಾಗಿದೆ. ಯಾವ ಹಣ್ಣು- ತರಕಾರಿಗಳ ಬೆಲೆಗಳು ಕಡಿಮೆ ಇಲ್ಲ. 50 ಕೆಜಿ ಸಿಮೆಂಟಿನ ಚೀಲದ ಮೇಲೆ ಮೋದಿ ಸರ್ಕಾರ 90-100 ರೂ.ವರೆಗೆ ಜಿಎಸ್‍ಟಿ ದೋಚುತ್ತಿದೆ. ಸಿಮೆಂಟಿನ ಮೇಲೆ ಶೇ.28ರಷ್ಟು ಜಿಎಸ್‍ಟಿ ಇದೆ. ಕಬ್ಬಿಣದ ಬೆಲೆಗಳೂ ದುಪ್ಪಟ್ಟಾಗಿವೆ. ಇದರಿಂದಾಗಿ ಮನೆಗಳ ನಿರ್ಮಾಣ ವೆಚ್ಚ ಗಗನಕ್ಕೇರಿದೆ” ಎಂದು ವಿವರಿಸಿದ್ದಾರೆ. 

“ಶಿಕ್ಷಣ ವೆಚ್ಚವೂ ತೀವ್ರವಾಗಿ ಏರಿಕೆಯಾಗಿದೆ. ನಿನ್ನೆ ತಾನೆ ಕರ್ನಾಟಕದ ಉಚ್ಛ ನ್ಯಾಯಾಲಯವು ಕಾಲೇಜುಗಳ ಶುಲ್ಕ ದರೋಡೆಯನ್ನು ನಿಲ್ಲಿಸಿ ಎಂಬರ್ಥದಲ್ಲಿ ಸರ್ಕಾರಕ್ಕೆ ತಾಕೀತು ಮಾಡಿದೆ. ಆದರೂ ಮೋದಿ ಸರ್ಕಾರ ಮಾತ್ರ ಬೆಲೆಗಳು ಕಡಿಮೆಯಾಗಿವೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದೆ” ಎಂದು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಪತ್ರಿಕಾ ದಿನ | ಗಿಫ್ಟ್‌ ಟ್ರ್ಯಾಪ್‌ಗೆ ಬಿದ್ದ ಮಾಧ್ಯಮಗಳು; ವಿರೋಧಿಸದ ʼರಾಷ್ಟ್ರವಾದಿʼ ಸಂಘಟನೆಗಳು!

“ಮೇಕ್ ಇನ್ ಇಂಡಿಯಾ ಮಾಡುವುದಾಗಿ ಜನರಿಗೆ ಸುಳ್ಳು ಟೋಪಿ ಹಾಕಿ ಅಧಿಕಾರಕ್ಕೆ ಬಂದ ಮೋದಿಯವರು ಮಾಡಿದ್ದೇನು? ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯು ನಿನ್ನೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಕೋವಿಡ್ ಸಂದರ್ಭಕ್ಕಿಂತಲೂ ಅತ್ಯಂತ ಕನಿಷ್ಠ ಮಟ್ಟದಲ್ಲಿ ಭಾರತವು ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ದೇಶದ ರಫ್ತು ಶೇ.16.7ರಷ್ಟು ಅಂದರೆ; 2.4 ಲಕ್ಷ ಕೋಟಿಯಷ್ಟು ಕಡಿಮೆ ರಫ್ತು ಮಾಡಿದೆ. ಇದೇ ಸಂದರ್ಭದಲ್ಲಿ ಆಮದು ಪ್ರಮಾಣವು ಶೇ.6 ರಷ್ಟು ಹೆಚ್ಚಾಗಿದೆ. ಇದಕ್ಕಾಗಿ 4.58 ಲಕ್ಷ ಕೋಟಿಗಳನ್ನು ಹೆಚ್ಚು ವಿದೇಶಿ ವಿನಿಮಯ ಪಾವತಿಸುತ್ತಿದೆ” ಎಂದು ತಿಳಿಸಿದ್ದಾರೆ.

“ತೆರಿಗೆ ಸಂಗ್ರಹ ಉತ್ತಮವಾಗಿದೆಯೆಂದು ಮೋದಿ ಸರ್ಕಾರ ಹೇಳುತ್ತಿದೆಯಲ್ಲ ಎಂದು ಕೆಲವರು ಕೇಳುತ್ತಾರೆ. 2017-18ರಲ್ಲಿ ಜಿಎಸ್‍ಟಿ ವ್ಯವಸ್ಥೆ ಜಾರಿಗೆ ತಂದ ವರ್ಷದ ಬೆಳವಣಿಗೆ ದರದಲ್ಲಿಯೆ ತೆರಿಗೆ ದರವಿದ್ದರೆ ಈ ವರ್ಷದ ವೇಳೆಗೆ ಪ್ರತಿ ತಿಂಗಳೂ ಕನಿಷ್ಟ 2.2 ಲಕ್ಷ ಕೋಟಿ ಜಿಎಸ್‍ಟಿ ಸಂಗ್ರಹವಾಗಬೇಕಾಗಿತ್ತು. ಆದರೆ ಆಗುತ್ತಿರುವುದೇನು? ಮೊಸರು, ಮಜ್ಜಿಗೆ, ಮಂಡಕ್ಕಿ, ಅಕ್ಕಿ, ಗೋಧಿ, ಮಕ್ಕಳು ಬಳಸುವ ಪೆನ್ನು‌, ಪೆನ್ಸಿಲ್, ಕಾಗದ, ಇಂಕು ಹಾಗೂ ಆಸ್ಪತ್ರೆ ಬಿಲ್ಲು ಹೀಗೆ ಎಲ್ಲದರ ಮೇಲೆಯೂ ತೆರಿಗೆ ವಿಧಿಸಿ ಕೊಳ್ಳೆ ಹೊಡೆಯಲಾಗುತ್ತಿದೆ. ಇಷ್ಟಾದರೂ ಜಿಎಸ್‍ಟಿ ಸಂಗ್ರಹ ಇನ್ನೂ 1.7 ಲಕ್ಷ ಕೋಟಿಗೂ ತಲುಪಿಲ್ಲ” ಎಂದು ಹೇಳಿದ್ದಾರೆ.

“ಮೋದಿಯವರು ಚುನಾವಣಾ ಗಿಮಿಕ್ಕುಗಳನ್ನು ಬಿಟ್ಟು ದೇಶದ ಜನರಿಗೆ ವಾಸ್ತವವನ್ನು ಹೇಳಬೇಕು. ಪ್ರತಿ ವಸ್ತುಗಳ ಸಿಪಿಐ ಮತ್ತು ಡಬ್ಲ್ಯುಪಿಐ ಎಷ್ಟಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ದೇಶದ ಅಂಕಿ ಅಂಶಗಳ ಇಲಾಖೆಯು ಯುಪಿಎ ಸರ್ಕಾರದಲ್ಲಿ ಮಾಡುತ್ತಿದ್ದ ಹಾಗೆಯೆ ನಿರಂತರವಾಗಿ ಸರ್ವೆಗಳನ್ನು ಮಾಡಿ ಆಗಿಂದಾಗ್ಗೆ ವರದಿಗಳನ್ನು ಬಿಡುಗಡೆ ಮಾಡಬೇಕು. ಜನರ ಆದಾಯ, ವೆಚ್ಚ, ಖರೀದಿ ಸಾಮರ್ಥ್ಯ, ವಸ್ತುಗಳ ಬೆಲೆ ಇತ್ಯಾದಿಗಳ ಕುರಿತು ಜನರನ್ನು ಕತ್ತಲೆಯಲ್ಲಿ ಇಡಲಾಗಿದೆ. ವಾಸ್ತವಗಳನ್ನು ತಿಳಿಸದೆ ಅಂಕಿ ಅಂಶಗಳನ್ನು ತಿರುಚಿ ಸುಳ್ಳು ಹೇಳಿ ಜನರನ್ನು ಕತ್ತಲಲ್ಲಿಡುವುದು ಸರ್ವಾಧಿಕಾರದ ಲಕ್ಷಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು ಸಂಪೂರ್ಣ ಸುಳ್ಳು ಎಂದು ಅರ್ಥವಾಗುತ್ತದೆ” ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app